: ಬೆಂಗಳೂರಲ್ಲಿ ಮಟನ್ ಹೆಸರಲ್ಲಿ ಗೋಮಾಂಸ ನೀಡುತ್ತಿದ್ದ ಇಬ್ಬರು ರೆಸ್ಟೋರೆಂಟ್ ಮಾಲೀಕರು ಅರೆಸ್ಟ್.! -ಕಹಳೆ ನ್ಯೂಸ್

ಬೆಂಗಳೂರು: ಗ್ರಾಹಕರಿಗೆ ಮಟನ್ ಎಂದು ನಂಬಿಸಿ ಗೋಮಾಂಸ ಉಣಿಸುತ್ತಿದ್ದ ರೆಸ್ಟೋರೆಂಟ್ ಮಾಲೀಕರಿಬ್ಬರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬ್ಯಾರತಿ ಗ್ರಾಮದ ಜಿಜೂ ಅಲೆಕ್ಸಾಂಡರ್ ಹಾಗೂ ಟಿಪ್ಪಣ್ಣ ಲೇಔಟ್‌ನ ಶಿಬು ಕೆ.ಬಿ. ಎಂದು ಗುರುತಿಸಲಾಗಿದೆ.
ಮೂಲತಃ ಕೇರಳದವರಾದ ಇವರು ಭೈರತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರಿಬ್ಬರು ನಗರದ ಬೊಮ್ಮನಹಳ್ಳಿಯಲ್ಲಿರುವ ಐಸಿರಿ ಹಬ್ ಕಾಯಲೋರಂ ರೆಸ್ಟೋರೆಂಟ್‌ನ ಮಾಲೀಕರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾಯಲೋರಂ ರೆಸ್ಟೋರೆಂಟ್‌ನ ಮೆನು ಕಾರ್ಡ್‌ನಲ್ಲಿ ಎಲ್ಲಿಯೂ ಗೋಮಾಂಸದ (ಬೀಫ್) ಉಲ್ಲೇಖ ಇರಲಿಲ್ಲ. ಆದರೆ, ಇಲ್ಲಿ ಮಟನ್ ಖಾದ್ಯಗಳನ್ನು ಆರ್ಡರ್ ಮಾಡಿದಾಗ ಗ್ರಾಹಕರಿಗೆ ಗೋಮಾಂಸವನ್ನು ನೀಡಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದವು. ಖಚಿತ ಮಾಹಿತಿ ಮತ್ತು ಗ್ರಾಹಕರ ದೂರುಗಳ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.
ಬಂಧಿತ ಆರೋಪಿಗಳ ವಿರುದ್ಧ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಅವರನ್ನು ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. ಇದೇ ಪ್ರಕರಣದ ಮತ್ತೊಬ್ಬ ಪಾಲುದಾರನಾಗಿರುವ ಅಭಿಲಾಶ್ ಎಂಬಾತ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.











