ಚಂಬಾ ಜಿಲ್ಲೆಯಲ್ಲಿ ಕಂದಕಕ್ಕೆ ಉರುಳಿದ ವಾಹನ – ಬೆಂಗಳೂರು ದಂಪತಿ ಸೇರಿ 8 ಮಂದಿ ಪ್ರವಾಸಿಗರು ಸಾವು -ಕಹಳೆ ನ್ಯೂಸ್

ಧರ್ಮಶಾಲಾ: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ವಾಹನವೊಂದು ಕಂದಕಕ್ಕೆ ಉರುಳಿದ ಪರಿಣಾಮ ಬೆಂಗಳೂರು ದಂಪತಿ ಸೇರಿದಂತೆ 8 ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ನಡೆದಿದೆ.
ಚಂಬಾ ಜಿಲ್ಲೆಯ ಚುರಾ ಉಪವಿಭಾಗದ ಬೈರಾಗಢ-ಸಚ್ ಪಾಸ್-ಕಿಲ್ಲರ್ ಮಾರ್ಗದ ಕಲಾಬನ್ ಬಳಿ ಈ ಘಟನೆ ಸಂಭವಿಸಿದೆ. ರಜೆ ಹಿನ್ನೆಲೆ ಡಾಲ್‌ಹೌಸಿಗೆ ಪ್ರವಾಸ ತೆರಳಿದ್ದ ಬೆಂಗಳೂರು ದಂಪತಿ ಹಾಗೂ ಛತ್ತೀಸ್‌ಗಢದ ದಂಪತಿ ಮತ್ತು ಇಬ್ಬರು ಮಕ್ಕಳು ಘಟನೆಯಲ್ಲಿ ಮೃತಪಟ್ಟಿದ್ದಾರೆ.
ಬೆಂಗಳೂರಿನ ಕುಟುಂಬವೊಂದು ಹಿಮದಿಂದ ಆವೃತವಾದ ಪರ್ವತಗಳ ವೀಕ್ಷಣೆಗೆಂದು ಡಾಲ್‌ಹೌಸಿಯಲ್ಲಿ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದಿತ್ತು. ಬಳಿಕ ಈ ದಂಪತಿ ಗಿರಿಧಾಮದಲ್ಲಿ ವಾಸಿಸುವ ಮತ್ತೊಂದು ಪ್ರವಾಸಿ ಕುಟುಂಬದೊಂದಿಗೆ ವಾಹನವನ್ನು ಹಂಚಿಕೊಂಡರು. ಎರಡೂ ಕುಟುಂಬಗಳು ಶುಕ್ರವಾರ ಸಚ್ ಪಾಸ್ ಮೂಲಕ ಬೈರಾಗಢ-ಕಿಲ್ಲರ್ ಮಾರ್ಗದಲ್ಲಿ ಪ್ರವಾಸಕ್ಕೆ ಹೊರಟಿತು. ಟ್ಯಾಕ್ಸಿ ನಿಗದಿತ ಸಮಯಕ್ಕೆ ಡಾಲ್ಹೌಸಿಗೆ ಹಿಂತಿರುಗದ ಹಿನ್ನೆಲೆ ವಾಹನ ಮಾಲೀಕರು ಜಿಪಿಎಸ್ ಬಳಸಿ ಟ್ಯಾಕ್ಸಿಯನ್ನು ಟ್ರ‍್ಯಾಕ್ ಮಾಡಿದರು. ಈ ವೇಳೆ ವಾಹನ ದೀರ್ಘಕಾಲದವರೆಗೆ ಕಲಾಬನ್ ಬಳಿ ನಿಂತಿರುವುದು ತಿಳಿದುಬಂದಿದೆ.
ಈ ವಿಷಯವನ್ನು ವಾಹನ ಮಾಲೀಕರು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣವೇ ಅಧಿಕಾರಿಗಳು ಶೋಧ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಈ ವೇಳೆ ವಾಹನ ಕಂದಕಕ್ಕೆ ಉರುಳಿರುವುದು ಪತ್ತೆಯಾಗಿದೆ. ಈ ಘಟನೆಯನ್ನು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ‘ಅತ್ಯಂತ ಹೃದಯವಿದ್ರಾವಕ’ ಎಂದು ಹೇಳಿದ್ದಾರೆ. ಅಲ್ಲದೇ ಸ್ಥಳೀಯ ಆಡಳಿತ ಅಧಿಕಾರಿಗಳು, ರಕ್ಷಣಾ ತಂಡಗಳು ಮತ್ತು ನಿವಾಸಿಗಳು ಕಾರ್ಯಾಚರಣೆಯನ್ನು ಕೈಗೊಳ್ಳಲು ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ ಮತ್ತು ರಾಜ್ಯ ಸರ್ಕಾರವು ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದ್ದಾರೆ.











