
ನವದೆಹಲಿ: ಬಾಲ್ಯದ ಗೆಳೆಯನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಭೂ ವಿವಾದ ಪ್ರಕರಣದ ತನಿಖೆಯನ್ನು ಕೇಂದ್ರ ಸಂಸ್ಥೆಗೆ ವಹಿಸುವಂತೆ ಮನವಿ ಮಾಡಿದ್ದಾರೆ.
ಮುಂಬೈನ ಭಯಂದರ್ ಪೂರ್ವದಲ್ಲಿ ದಶಕಗಳಷ್ಟು ಹಳೆಯದಾದ ಭೂ ವಿವಾದವೊಂದರಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ, ಮೀರಾ ರಸ್ತೆಯ ನಿವಾಸಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿದ್ದಾರೆ. ಅಸ್ಗರಲಿ ವೋಹ್ರಾ ಅವರು ಸೆಪ್ಟೆಂಬರ್ 8 ರಂದು ಪ್ರಧಾನಿಗಳನ್ನು ಭೇಟಿಯಾಗಿ, ಈ ವಿಷಯದ ಕುರಿತು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆ ನಡೆಸುವಂತೆ ಮನವಿ ಮಾಡಿದರು.
ವರದಿಗಳ ಪ್ರಕಾರ, ವೋಹ್ರಾ ಮತ್ತು ಪ್ರಧಾನಿ ಮೋದಿ ಗುಜರಾತ್‌ನ ವಡ್‌ನಗರದಲ್ಲಿರುವ ಬಿಎನ್ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಪ್ರಧಾನಮಂತ್ರಿಯೊಂದಿಗಿನ ಭೇಟಿಯ ಸಂದರ್ಭದಲ್ಲಿ, ಹಲವು ವರ್ಷಗಳಿಂದ ಭೂ ವಿವಾದ ಇದೆ ಎಂದು ತಿಳಿಸಿದರು.
ಭಯಂದರ್ ಪೂರ್ವದ ನವ್‌ಘರ್‌ನಲ್ಲಿರುವ ಸುಮಾರು 2,810 ಚದರ ಮೀಟರ್‌ಗಳಷ್ಟು ಭೂಮಿಗೆ ಸಂಬಂಧಿಸಿದ ವಿವಾದ ಇದಾಗಿದೆ. 1989ರಲ್ಲಿ ನೋಂದಾಯಿತ ಒಪ್ಪಂದದ ಮೂಲಕ ಆ ಆಸ್ತಿಯನ್ನು ಖರೀದಿಸಿದ್ದಾಗಿ ಅವರು ತಿಳಿಸಿದರು.
ನಂತರದ ದಿನಗಳಲ್ಲಿ, ಅಂದರೆ 2011ರಲ್ಲಿ, ಈ ಆಸ್ತಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಆರೋಪಿಸಿದ್ದಾರೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ನಕಲಿ ಮಾಡಲಾಗಿದೆ. ಈ ಬೆಳವಣಿಗೆಗಳ ಬಗ್ಗೆ ಮೂಲ ಮಾಲೀಕರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದೂ ವೋಹ್ರಾ ಆರೋಪಿಸಿದ್ದಾರೆ.











