ಅಶೋಕ್, ವಿಜಯೇಂದ್ರ ಅವರನ್ನು ಸರಿಸಿ ಅಧಿಕಾರಕ್ಕೆ ಬರೋ ಆಸೆ ಕುಮಾರಸ್ವಾಮಿದು: ಸಿಎಂ ಡಿ ಕೆ ಶಿವಕುಮಾರ್ ವ್ಯಂಗ್ಯ

ಬೆಂಗಳೂರು : “ಚುನಾವಣೆ ಹತ್ತಿರ ಬರಲಿ ಅಶೋಕ್ ಹಾಗು ವಿಜಯೇಂದ್ರ ಅವರಿಗೆ ಯಾವ ಅಧಿಕಾರವೂ ಇರೋದಿಲ್ಲ. ಬೇರೆಯವರು (ಕುಮಾರಸ್ವಾಮಿ)ಪ್ಯಾರಾಚೂಟ್ ಮೂಲಕ ಇಳಿಯುತ್ತಾರೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ವ್ಯಂಗ್ಯವಾಡಿದ್ದಾರೆ.
“ಅಶೋಕ್, ವಿಜಯೇಂದ್ರ ಅವರ ಕತೆ ಏನಿದ್ದರೂ, ಬರೀ ಬುಟ್ಟಿ ಬೇವಿನ ಸೊಪ್ಪು, ನಂದೇ ಬೆಳಗು ಪೂಜಾರಿ ಅನ್ನೋ ತರಹ. ಕುಮಾರಸ್ವಾಮಿ ಇವರಿಬ್ಬರನ್ನು ಇಳಿಸಿ ನನಗೇನಾದರೂ ಸಿಗಬಹುದಾ ಅಂತಾ ನೋಡುತ್ತಿದ್ದಾರೆ. ಹೀಗಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಬಾಂಬ್ ಹಾಕುತ್ತೇನೆ ಎನ್ನುತ್ತಿದ್ದಾರೆ” ಎಂದೂ ಸಿಎಂ ಅವರು ಛೇಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಬಿಜೆಪಿ ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ದೊಡ್ಡ ಮಂತ್ರಿ ಸ್ಥಾನ ಸಿಕ್ಕಿದೆ. ಅದರ ಮೂಲಕ ಕರ್ನಾಟಕದ 50 ಸಾವಿರ ಜನರಿಗೆ ಉದ್ಯೋಗ ಸಿಗುವಂತೆ ಮಾಡಲಿ. ಅವರಿಗೆ ಎಲ್ಲಿ ಬೇಕೋ ಅಲ್ಲಿ, ಮಂಡ್ಯದಲ್ಲೇ ಬೇಕಾದರೂ ಭೂಸ್ವಾಧೀನ ಮಾಡಿ ಕೊಡೋಣ. ಆದರೆ ಅವರು ನನ್ನನ್ನು ಅಧಿಕಾರದಿಂದ ಇಳಿಸಿ ಬಿಡ್ತೇನೆ, ದೆಹಲಿಯಿಂದ ಬಾಂಬ್ ಹಾಕಿ ಬಿಡ್ತೇನೆ, ಅಲ್ಲೋಲ ಕಲ್ಲೋಲ ಮಾಡಿ ಬಿಡ್ತೇನೆ ಅಂತ ಮಾತಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದರು.
*ಕುಮಾರಸ್ವಾಮಿ ಅವರ ಅಲ್ಲೋಲ ಕಲ್ಲೋಲನಾ ಬಿಡಿಸಿ ಹೇಳಬೇಕೇ..?*
“ಅದೇನೋ ಅಲ್ಲೋಲ ಕಲ್ಲೋಲ ಆಗಿದೆಯಲ್ಲ. ಅದನ್ನು ನಾನು ಬಿಡಿಸಿ ಹೇಳಬೇಕೆ? ದಿನವೂ ನಾವು ಟಿವಿಯಲ್ಲಿ ನೋಡುತ್ತಿದ್ದೇವಲ್ಲ”ಎಂದಾಗ ಸಭಿಕರೊಬ್ಬರು “ಪೆನ್ ಡ್ರೈವ್” ಎಂದು ಕೂಗಿದರು. ಆಗ ಸಿಎಂ ಅವರು, “ನಮಗೆ ಪೆನ್ ಡ್ರೈವ್ ವಿಚಾರ ಬೇಡ, ಅವರುಗಳು ಏನು ಬೇಕಾದರೂ ಮಾಡಿಕೊಳ್ಳಲಿ. ಸೆಂಟ್ರಲ್ ಜೈಲ್ ವಿಚಾರವೆಲ್ಲ ಅವರವರದ್ದು. ಅದೆಲ್ಲವೂ ಅವರ ಸಿದ್ದಾಂತ. ಅವರಿಂದ ಯಾರ್ಯಾರ ಕುಟುಂಬ ಏನಾಯಿತು ಎಂದು ಈಗ ಮಾತನಾಡುವುದು ಬೇಡ” ಎಂದೂ ಮಾತಿನ ಬಾಣ ಬಿಟ್ಟರು.
“ನಮ್ಮನ್ನು ಏನು ಬೇಕಾದರೂ ಮಾಡಲಿ. ನಮ್ಮನ್ನು ಬೇಕಾದರೆ ಸೀಳಿ ಇಡಿ, ಸಿಬಿಐಗೆ ತೆಗೆದುಕೊಂಡು ಹೋಗಲಿ, ಯಾವ ತನಿಖೆ ಬೇಕಾದರೂ ಮಾಡಲಿ. ಆದರೆ ಅವರ ವಿರುದ್ಧ ತನಿಖೆ ಮಾಡಿದಾಗ ನ್ಯಾಯಾಲಯಕ್ಕೆ ಹೋಗಿ ಏಕೆ ತಡೆಯಾಜ್ಞೆ ತರಲಾಗುತ್ತಿದೆ. ನೀವೆಲ್ಲವೂ ಟೀಮ್ ಅಲ್ಲವೇ? ಈ ಸ್ಥಾನದಲ್ಲಿದ್ದುಕೊಂಡು ದ್ವೇಷ ಬೇಡ ಎಂದು ಆ ವಿಚಾರಗಳಿಗೆ ನಾನು ಹೋಗಿಲ್ಲ. ಯಾರಿಗೂ ತೊಂದರೆ ಆಗಬಾರದು ಎಂಬುದು ನನ್ನ ಆಶಯ. ಈ ಅಧಿಕಾರ ಸಕಾರಾತ್ಮಕವಾಗಿ ಉಪಯೋಗವಾಗಬೇಕು. ಈ ಅಧಿಕಾರ ಇರುವುದು ದುರುಪಯೋಗ ಮಾಡಲು ಅಲ್ಲ. ಹತ್ತು ಜನಕ್ಕೆ ಒಳ್ಳೆಯದನ್ನು ಮಾಡಲು ಎಂಬುದು ನನ್ನ ಬದ್ಧತೆ” ಎಂದರು.
“10 ದಿನ ಸದನ ನಡೆಸಲೂ ಬಿಡಲಿಲ್ಲ. ಆನಂತರವೂ ಪಾದಯಾತ್ರೆ ಮಾಡಿದರು. ಈಗ ಕರೆದಿರುವ ಅಧಿವೇಶನದಲ್ಲಿ ಬೇರೆ ವಿಚಾರ ಮಾತನಾಡುವಂತಿಲ್ಲ. ಕೇವಲ ರೈತರ ವಿಚಾರ ಮಾತ್ರ. ಕಸ್ತೂರಿ ರಂಗನ್ ವರದಿ ಜಾರಿಗೆ ತಂದವರು ಯಾರು? ಇದರ ಬಗ್ಗೆ ಚರ್ಚೆ ಮಾಡಲಿ, ಬಿಡಲಿ. ಅದು ಅವರಿಗೆ ಬಿಟ್ಟಿದ್ದು. ಆನಂತರ ಅವರು ಗದೆಯಾದರೂ ಬೀಸಲಿ, ಬಾಣವನ್ನಾದರೂ ಬಿಡಲಿ. ಇದನ್ನು ಅನುಭವಿಸಲು ನಮ್ಮ ಪಕ್ಷ, ನಾವು ಹಾಗೂ ಕಾರ್ಯಕರ್ತರು ಸಿದ್ಧರಿದ್ದೇವೆ” ಎಂದರು.
*ಜನರ ನಡುವೆ ನಾಯಕನಿದ್ದರೆ ಜನ ಜಾತಿ ಕೇಳುವುದಿಲ್ಲ*
“ರಾಜಕೀಯ ಸಾಧ್ಯತೆಗಳ ಕಲೆ. ಜನರ ನಡುವೆ ಇದ್ದರೆ ಜನ ಜಾತಿ ಕೇಳಲ್ಲ. ನಾಯಕ ಕ್ರಿಯಾಶೀಲನಾಗಿದ್ದರೆ ಜನ ಗೆಲ್ಲಿಸುತ್ತಾರೆ. ಕೆಲವರು ಭಾವನೆಗಳ ಮೇಲೆ ಜಾತಿ ಮಾಡುತ್ತಾರೆ. ನನಗೆ ಜಾತಿಗಿಂತ ನೀತಿ, ಸಿದ್ಧಾಂತದ ಮೇಲೆ ನಂಬಿಕೆ” ಎಂದು ಹೇಳಿದರು.
“ನನಗೆ ಶ್ರಮ, ಸಿದ್ಧಾಂತ, ಕಾಯಕದ ಮೇಲೆ ನಂಬಿಕೆ. ಶ್ರಮ ಇದ್ದ ಕಡೆ ಫಲವಿದೆ. ಒಂಟಿಯಾಗಿರುವ ನಾಯಕ ಎಂದಿಗೂ ಗೆಲುವು ಕಾಣುವುದಿಲ್ಲ. ಜನ ಜಾತಿ ನೋಡುವ ಹಾಗಿದ್ದರೆ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲು ಹೇಗೆ ಸಾಧ್ಯ? ಸಿಂಧ್ಯಾ ಅವರು ನನ್ನ ಕ್ಷೇತ್ರದಲ್ಲಿ 6 ಬಾರಿ ಶಾಸಕರಾಗಿದ್ದರು. ಅಲ್ಲಿ ಮರಾಠಿ ಮತದಾರರ ಸಂಖ್ಯೆ 3 ಸಾವಿರರವೂ ದಾಟಿಲ್ಲ. ರಾಮನಗರದಲ್ಲಿ ನಿಖಿಲ್ ಎದುರು ಇಕ್ಬಾಲ್ ಹುಸೇನ್ ಗೆಲ್ಲಲು ಹೇಗೆ ಸಾಧ್ಯ?” ಎಂದು ಹೇಳಿದರು.
“ಮಾಜಿ ಮೇಯರ್ ನಾಗರಾಜ್ ಅವರಿಗೆ, ಕೆ ಎಂ ನಾಗರಾಜ್ ಅವರಿಗೆ ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ಟಿಕೆಟ್ ನೀಡಲು ತೀರ್ಮಾನಿಸಲಾಯಿತು. ಆಗ ನಾವು ನರೇಂದ್ರ ಬಾಬು ಹಾಗೂ ಚಂದ್ರಶೇಖರ್ ಅವರಿಗೆ ನೀಡೋಣ ಎಂದು ಎಸ್ ಎಂ ಕೃಷ್ಣ ಅವರಿಗೆ ಹೇಳಿದೆವು. ಆಗ ಅನೇಕರು ಎರಡೂ ಕ್ಷೇತ್ರಗಳು ಒಕ್ಕಲಿಗರ ಪ್ರಾಬಲ್ಯವಿದೆ. ಅಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗದವರು ಗೆಲ್ಲಲು ಸಾಧ್ಯವೇ ಎಂದು ಕೇಳಿದರು. ಆದರೆ ಇವರಿಬ್ಬರೂ ಗೆದ್ದರು ” ಎಂದರು.
*ಗ್ಯಾರಂಟಿ ಯೋಜನೆಗಳನ್ನು ಟ್ರಂಪ್ ನಕಲು ಮಾಡುತ್ತಿದ್ದಾರೆ*
“ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿದವು. ಆದರೆ ಇಂದು ನಾವು ಗ್ಯಾರಂಟಿಗಳಿಂದಲೇ ದೇಶಕ್ಕೆ ಮಾದರಿಯಾಗಿದ್ದೇವೆ. ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಹೀಗೆ ಎಲ್ಲಾ ಕಡೆ ಕರ್ನಾಟಕ ಮಾದರಿ ನಕಲು ಮಾಡಿದರು ಈಗ ಅಮೇರಿಕಾದ ಟ್ರಂಪ್ ಕೂಡ ನಕಲು ಮಾಡುತ್ತಿದ್ದಾರೆ. ನನಗೆ ಮತ ಹಾಕಿ, ಇಂತಿಷ್ಟು ಡಾಲರ್ ಹಣ ನೀಡುತ್ತೇನೆ ಎಂದು ಹೇಳುತ್ತಿದ್ದಾರೆ. ನಮ್ಮ ಆಲೋಚನೆ ಇಡೀ ವಿಶ್ವಕ್ಕೆ ಪರಿಚಯವಾಗುತ್ತಿದೆ” ಎಂದರು.
ಗ್ಯಾರಂಟಿ ಯೋಜನೆಗಳನ್ನು ಎಲ್ಲಾ ಪಕ್ಷ, ಜಾತಿಗಳಿಗೂ ನೀಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಬಂದ ಮತಗಳು 1.34 ಲಕ್ಷ ಆದರೆ 4.44 ಕೋಟಿ ಜನರಿಗೆ ಅನ್ನಭಾಗ್ಯ ನೀಡುತ್ತಿದ್ದೇವೆ. ಅದಕ್ಕೆ ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿ, ಇತಿಹಾಸ” ಎಂದರು.
“ಅಸ್ಸಾಂ ರಾಜ್ಯದಲ್ಲಿ ಕೆಲವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದಾರೆ. ಎಸ್ ಸಿಪಿ, ಟಿಎಸ್ ಪಿ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ವಿದ್ಯಾರ್ಥಿಗಳಿಗೆ ಬಸ್ ಪಾಸ್ ಉಚಿತವಾಗಿ ನೀಡಲಾಗುತ್ತಿದೆ. ಜನರ ಮನೆ ಬಾಗಿಲಿಗೆ ಸರ್ಕಾರ ತಲುಪಿಸಿದ್ದೇವೆ. ಪ್ರಜಾಸೇವೆ ಮಾಡುತ್ತಿದ್ದೇವೆ. ಇದನ್ನು ಶಾಸಕರು ಹೇಗೆ ಬಳಸಿಕೊಳ್ಳುತ್ತಾರೋ ತಿಳಿದಿಲ್ಲ. ನಾನಂತೂ ಆದಷ್ಟು ಯಶಸ್ವಿಗೊಳಿಸುವೆ” ಎಂದರು.
“ಭಾರತ್ ಜೋಡೋ ಮೂಲಕ ದೇಶದ ಐಕ್ಯತೆ, ಸಮಗ್ರತೆಯನ್ನು ಕಾಪಾಡಲು ಮಾಡಲಾಯಿತು. ಈ ಪಾದಯಾತ್ರೆ ನಡೆದ ಸ್ಥಳಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿತ್ತು. ಇದೇ ಅಲೆ 2028 ರಲ್ಲಿಯೂ ಇರಲಿದೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ” ಎಂದರು.
“ಈ ದೇಶಕ್ಕೆ ಸ್ವಾತಂತ್ರ್ಯ, ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಿದ್ದು ಕಾಂಗ್ರೆಸ್ ಪಕ್ಷ. ಬಡವರ ಪರ ಆಲೋಚನೆ ಮಾಡುವುದು, ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವುದು, ತಂದಿರುವುದು ಕಾಂಗ್ರೆಸ್ ಪಕ್ಷ ಮಾತ್ರ. ಅದಕ್ಕೆ ನಾವು ಕಾರ್ಯಕರ್ತರಿಗೆ ಅಧಿಕಾರ ನೀಡಲು ಮುಂದಾಗಿದ್ದೇವೆ” ಎಂದರು.
*ಪಂಚಾಯತಿ ಮಟ್ಟದಲ್ಲಿ 70 ಸಾವಿರ ಜನರಿಗೆ ಅಧಿಕಾರ*
“ಪ್ರತಿ ಪಂಚಾಯತಿಯಲ್ಲೂ 6 ಜನರಿಗೆ ಗ್ಯಾರಂಟಿ ಸಮಿತಿಯಲ್ಲಿ ಇರಲು ಅವಕಾಶ ನೀಡಲಾಗಿದೆ. ಇದರಿಂದ 70 ಸಾವಿರ ಜನರಿಗೆ ಅಧಿಕಾರ ಸಿಗಲಿದೆ. ಇದರಿಂದ ನೀವುಗಳು ವಿಧಾನಸೌಧಕ್ಕೆ ಬರುವ ಅಧಿಕಾರ, ಜನರ ಸೇವೆ ಮಾಡಲು ಅವಕಾಶ ಸಿಗಲಿದೆ” ಎಂದರು.
“ಯುವಕರು ಕೌಶಲ್ಯದ ಮೇಲೆ ಹೆಚ್ಚು ಆಧ್ಯತೆ ನೀಡಬೇಕು. ಇದರಿಂದ ಹೆಚ್ಚು ಅವಕಾಶಗಳು ಸೃಷ್ಟಿಯಾಗಲಿದೆ. ಎಲ್ಲರ ಕೆಲಸಗಳನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಅದಕ್ಕೆ ಅದರದೇ ಆದ ಕೌಶಲ್ಯ ಮುಖ್ಯ. ಉದ್ಯೋಗ ಮಾಡುವ ಅವಕಾಶವಿದೆ” ಎಂದರು
“ಎಲ್ಲಾ ಜಾತಿಗಳು ಒಂದೇ ಎಂದು ನಾವು ಭಾವಿಸಿದ್ದೇವೆ. ಶಾಲೆಗಳಲ್ಲಿ ಯಾರೂ ಜಾತಿ ಕೇಳುವುದಿಲ್ಲ. ನಮ್ಮೆಲ್ಲರ ರಕ್ತ ಕೆಂಪು. ಬೆವರು ಉಪ್ಪು. ಮಾನವೀಯತೆ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭ. ಬಸವಣ್ಣ, ಏಸು ಸೇರಿದಂತೆ ಅನೇಕ ಪೂಜ್ಯರ ಆಶೀರ್ವಾದ ನಮ್ಮ ಸರ್ಕಾರದ ಮೇಲಿದೆವು” ಎಂದರು.
“ಯುವಕರು ಭಾರತ್ ಜೋಡೋ ಸಂಘಗಳನ್ನು ಯುವಕರು ಸದುಪಯೋಗ ಮಾಡಿಕೊಳ್ಳಬೇಕು. ನಾಟಕ, ಕ್ರೀಡೆ ಸೇರಿದಂತೆ ಹಾಗೂ ಇತರೇ ಕಾರ್ಯಗಳನ್ನು ಯುವಕರು ಮಾಡಬೇಕು. ಕ್ರಿಯಾಶೀಲವಾಗಿ ಇದರಲ್ಲಿ ತೊಡಗಿಕೊಳ್ಳಬೇಕು” ಎಂದರು.
*ಆತ ಪಂಕ್ಚರ್ ಹಾಕದಿದ್ದರೆ ಅವನ ಗಾಡಿ ಓಡುತ್ತದೆಯೇ?*
“ಈ ದೇಶದಲ್ಲಿ ಯಾವ ಯಾವ ಜನಪರ ಕಾರ್ಯಕ್ರಮ ಇದ್ದಾವೋ ಅದೆಲ್ಲವೂ ಕಾಂಗ್ರೆಸ್ ಪಕ್ಷದ ಕೊಡುಗೆ. 100 ದಿನ ತುಂಬಿದಕ್ಕೆ ಅನೇಕ ಹೊಸ ಕಾರ್ಯಕ್ರಮ ನೀಡಲಾಗಿದೆ. ಎಲ್ಲಾ ವರ್ಗಕ್ಕೂ ಕಾರ್ಯಕ್ರಮ ನೀಡುತ್ತಿದ್ದೇವೆ. ಈ ದೇಶದ ಅಲ್ಪ ಸಂಖ್ಯಾತರನ್ನು ವೈರಿಗಳ ತರ ನೋಡಲಾಗುತ್ತಿದೆ. ಹಾಗಾದರೆ ಕೇಂದ್ರ ಸರ್ಕಾರ ಅಲ್ಪ ಸಂಖ್ಯಾತ ಇಲಾಖೆಯನ್ನು ಮುಚ್ಚಿಬಿಡಲಿ. ದೇಶದಿಂದ ಹೊರಗೆ ಹೋಗಿ ಎಂದು ಹೇಳಲು ಆಗುತ್ತದೆಯೇ? ಶೇ 13 ರಷ್ಟು ಅವರ ಜನಸಂಖ್ಯೆಯಿದೆ. ಯಾರೋ ಒಬ್ಬ ಪಂಕ್ಚರ್ ಹಾಕುವವರು ಎಂದು ಹೇಳಿದ. ಅವನ ಪಕ್ಷದವರು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಿಲ್ಲ. ಮಂತ್ರಿ ಮಾಡಲಿಲ್ಲ. ಆತ ಪಂಕ್ಚರ್ ಹಾಕದಿದ್ದರೆ ಅವನ ಗಾಡಿ ಓಡುತ್ತದೆಯೇ?” ಎಂದರು.
“ಜನರಿಗೆ ಅನುಕೂಲ ಮಾಡಲು ಹೊರಟರೆ ಬಂಡೆಯನ್ನು ತಬ್ಬುತ್ತಿದ್ದಾರೆ. ಒಂದು ದಿನವೂ ಬಂಡೆ ನೋಡಿರಲಿಲ್ಲ. ನಾವು ಮೂಲೆಯಲ್ಲಿ ಮಾಡಲು ಹೊರಟಿದ್ದೆವು. ಡಬಲ್ ಎಂಜಿನ್ ಸರ್ಕಾರ ಇದ್ದಾಗ ಗುರುತಾಗುವಂತಹ ಒಂದೇ ಒಂದು ಕಾರ್ಯಕ್ರಮ ಮಾಡಿದ್ದಾರೆಯೇ? ಗುರುತಾಗಿ ಒಂದೇ ಒಂದು ಕಲ್ಲು ನೆಟ್ಟಿದ್ದಾರೆಯೇ? ಯಾವ ಕಾರ್ಯಕ್ರಮವೂ ಮಾಡಲಿಲ್ಲ. ಆತ ಮೊನ್ನೆ ಸಿಕ್ಕಿದಾಗ ಪರಿಹಾರ ಹೇಳಿ ಎಂದು ಕೇಳಿದೆ. ಸಾರ್ವಜನಿಕ ಸಾರಿಗೆಯಲ್ಲಿ ಓಡಾಟ ಮಾಡಿ ಎಂದ. ಆಗ ನಾನು ಅವನಿಗೆ, ಪತ್ನಿ ಜೊತೆ ಬಸ್ ನಲ್ಲಿ ಓಡಾಡಿ ಎಂದು ಸಲಹೆ ನೀಡಿದೆ. ಆತ ದೆಹಲಿಗೆ ಬಸ್ ನಲ್ಲಿ ಹೋಗಲಿ” ಎಂದು ಕುಟುಕಿದರು.
ಕಾಂಗ್ರೆಸ್ ಪಕ್ಷದಲ್ಲಿ ಹಳಬರು ಹೊಸಬರು ಎನ್ನುವ ಭೇದವಿಲ್ಲ. ಜಗದೀಶ್ ಶೆಟ್ಟರ್ ಅವರು ಸೋತರೂ ಎಂಎಲ್ ಸಿ ಮಾಡಲಾಯಿತು. ಸವದಿ ಅವರನ್ನು ಮಂತ್ರಿ ಮಾಡಲಾಯಿತು. ಎಷ್ಟೋ ಜನ ದಳದಲ್ಲಿ ಇದ್ದವರಿಗೂ ಅವಕಾಶ ನೀಡಿದ್ದೇವೆ. ಇದರಿಂದ ನಮ್ಮ ಪಕ್ಷದವರಿಗೆ ತೊಂದರೆಯಾಗಿದೆ. ಏಕೆಂದರೆ ನಮ್ಮನ್ನು ನಂಬಿದವರಿಗೆ, ದುಡಿಯುವವರಿಗೆ ಅವಕಾಶ ನೀಡಬೇಕು” ಎಂದರು.
“ಬಿಜೆಪಿಗೆ ನಮ್ಮ 13 ಮಂದಿಯನ್ನು ಕರೆದುಕೊಂಡು ಹೋದರು. ಅದರಲ್ಲಿ 3-4 ಜನ ಮಾತ್ರ ಚಲಾವಣೆಯಲ್ಲಿ ಇದ್ದಾರೆ. ಅಲ್ಲಿ ಬದುಕಲು ಆಗುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಬೇರೆಯವರು ಬಂದು ಬದುಕಬಹುದು” ಎಂದರು.
*ಪಕ್ಷಕ್ಕೆ ಬರುವವರಿಗೆ ಅವಕಾಶ*
“ಸಾಕಷ್ಟು ಬಿಜೆಪಿ ಹಾಗೂ ಜನತಾದಳದ ನಾಯಕರು ನನ್ನೊಂದಿಗೆ ಹಾಗೂ ಪಕ್ಷದ ಅಧ್ಯಕ್ಷರೊಂದಿಗೆ ಚರ್ಚಿಸುತ್ತಿದ್ದಾರೆ. ನಮ್ಮ ಪಕ್ಷದ ಸಿದ್ಧಾಂತ ಹಾಗೂ ಪಕ್ಷದ ವರಿಷ್ಠರು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಮ್ಮೆಲ್ಲರ ಬಗ್ಗೆ ನಂಬಿಕೆವುಳ್ಳವರ ಪಟ್ಟಿ ತಯಾರಿಸಲು ಜಿಲ್ಲಾ ಸಚಿವರು ಹಾಗೂ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಪಕ್ಷಕ್ಕೆ ಬರುವವರಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು. ಈಗಾಗಲೇ ವಿವಿಧ ಸ್ಥಾನಗಳಲ್ಲಿ ಹಲವರಿಗೆ ಅವಕಾಶ ನೀಡಲಾಗಿರುವುದು ತಿಳಿದ ವಿಷಯ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ” ಎಂದು ಹೇಳಿದರು.
*ದೇಶವನ್ನು ಉಳಿಸಲು ಕಾಂಗ್ರೆಸ್ ಪಕ್ಷ ಬಿಟ್ಟರೆ ಬೇರೆ ಪರ್ಯಾಯವಿಲ್ಲ*.
“ನಮಗೆ ದೇಶ ಬಹಳ ಮುಖ್ಯವಾಗಿದ್ದು, ದೇಶವನ್ನು ಉಳಿಸಲು ಕಾಂಗ್ರೆಸ್ ಪಕ್ಷ ಬಿಟ್ಟರೆ ಬೇರೆ ಪರ್ಯಾಯವಿಲ್ಲ.
ಕಳೆದ 13 ವರ್ಷಗಳಲ್ಲಿ ಬಿಜೆಪಿಗೆ ಉತ್ತಮ ಅವಕಾಶ ನೀಡಲಾಗಿದೆ. ನನ್ನ ಪ್ರಕಾರ ಅದು ಸಾಕು. ಯುವಜನತೆಗೆ ನಮ್ಮ ಕಡೆಗೆ ಎದುರುನೋಡುತ್ತಿದ್ದು, ಅವರಿಗೆ ಅವಕಾಶ ನೀಡುವುದು ಅಗತ್ಯ” ಎಂದು ಸಿಎಂ ಅಭಿಪ್ರಾಯಪಟ್ಟರು.
*ಒಟ್ಟಾಗಿ ಕೆಲಸ ಮಾಡಬೇಕಿದೆ*
“ವಿಶೇಷವಾಗಿ ಯುವ ಪೀಳಿಗೆ ಇದನ್ನು ಗಮನಿಸುತ್ತಿದ್ದು ಅವರಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸಲಾಗುತ್ತಿದೆ. ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕಿದೆ” ಎಂದರು.
“ನಾನು ಶಾಸಕನಾದಾಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ತದ ನಂತರ ನನ್ನ ಸ್ಥಾನಕ್ಕೆ ನಾರಾಯಣಸ್ವಾಮಿ ಅವರನ್ನು ನೇಮಕಮಾಡಲಾಯಿತು. ಆರಾಧ್ಯ ಅವರು ನನ್ನ ಸಹಪಾಠಿ. ದೇವೆಗೌಡರ ವಿರುದ್ದ ಕಾಲೇಜು ವಿದ್ಯಾರ್ಥಿಗೆ ಟಿಕೆಟ್ ನೀಡಲಾಗಿದೆ ಎಂದು ಒಂದಷ್ಟು ಜನ ಕಾಲೇಜಿನ ಬಳಿ ಬಂದು ಗಲಭೆ ಮಾಡಲು ನೋಡಿದರು. ಆಗ ಆರಾಧ್ಯ ಅವರು ಅವರಿಗೆ ಜೋರು ಮಾಡಿ ಕಳುಹಿಸಿದರು. ಇಂದು ಬಿಎಂಟಿಸಿ ಅಧ್ಯಕ್ಷರಾಗಿದ್ದಾರೆ. ಶ್ರಮ ಇದ್ದ ಕಡೆ ಫಲ ಇರುತ್ತದೆ. ಪಕ್ಷಕ್ಕೆ ಕೆಲಸ ಮಾಡಿದರೆ ಗುರುತಿಸುವ ಕೆಲಸವನ್ನ ಪಕ್ಷ ಮಾಡಲಿದೆ” ಎಂದು ತಿಳಿಸಿದರು.
“ನರೇಂದ್ರ ಬಾಬು ಅವರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಬಂದಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರ ನಿಷ್ಠೆಯೇ ನಾಯಕನ ಗೆಲುವು. ಕಾಂಗ್ರೆಸ್ ಪಕ್ಷದಲ್ಲಿ ದುಡಿಯುವ ಎಲ್ಲಾ ಕಾರ್ಯಕರ್ತರಿಗೂ ಅವಕಾಶವಿದೆ. ತಾಳ್ಮೆ ಇರಬೇಕು. ಕೆಲವರು ಯಾವುದೇ ಫಲಾಪೇಕ್ಷೆ ಇಲ್ಲದೇ ದುಡಿಯುತ್ತಾ ಹೋಗುತ್ತಾರೆ.
“ನಾನು ದೆಹಲಿಗೆ ಯುವ ಕಾಂಗ್ರೆಸ್ ಅಧಿವೇಶನಕ್ಕೆ ಹೋದಾಗ ನಾವುಗಳು ರಾಜೀವ್ ಗಾಂಧಿಯವರನ್ನು ಭೇಟಿ ಮಾಡಲು ಹೋದೆವು. ಆದರೆ ಅಲ್ಲಿಗೆ ಅನೇಕ ನಾಯಕರು ಬಂದಿದ್ದರು. ಆ ವೇಳೆ ಅಲ್ಲಿಗೆ ಹಿರಿಯ ನಾಯಕರೊಬ್ಬರು ಬಂದರು. ಅವರನ್ನು ನೋಡಿ ಭದ್ರತಾ ಸಿಬ್ಬಂದಿ ಅವರನ್ನು ನೇರ ರಾಜೀವ್ ಗಾಂಧಿಯವರ ಬಳಿ ಕರೆದುಕೊಂಡು ಹೋದರು. ನಮಗೆ ಅವರು ಯಾರು ಎಂದು ತಿಳಿಯಲಿಲ್ಲ. ಅವರ ಬಗ್ಗೆ ರಾಜೀವ್ ಗಾಂಧಿ ಅವರ ಬಳಿ ಕೇಳಿದಾಗ. ಅವರು ಬಾಬು ಜಗಜೀವನ್ ರಾಮ್. ಕಾರಣಾಂತರಗಳಿಂದ ಕಾಂಗ್ರೆಸ್ ಪಕ್ಷ ಬಿಟ್ಟಿದ್ದರು. ಈಗ ನಾನು ಕಾಂಗ್ರೆಸ್ಸಿಗನಾಗಿಯೇ ಮರಣ ಹೊಂದಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಅವರನ್ನು ಸಂತೋಷದಿಂದ ಬರಮಾಡಿಕೊಂಡೆ ಎಂದು ವಿವರಿಸಿದರು” ಎಂದು ಹೇಳಿದರು.











