
ಜಕಾರ್ತ: ಪೂರ್ವ ಜಾವಾದಿಂದ ದಕ್ಷಿಣ ಕಲಿಮಂತನ್ ಪ್ರಾಂತ್ಯಕ್ಕೆ ಪ್ರಯಾಣಿಸುತ್ತಿದ್ದ 240 ಜನರಿದ್ದ ಹಡಗು ಜಾವಾ ಸಮುದ್ರದಲ್ಲಿ ಸಂಪರ್ಕ ಕಡಿತಗೊಂಡಿದೆ. ಇಂಡೋನೇಷ್ಯಾದ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಬೋರ್ನಿಯೋ ದ್ವೀಪದಲ್ಲಿರುವ ದಕ್ಷಿಣ ಕಲಿಮಂತನ್‌ನ ಬಂಜಾರ್‌ಮಾಸಿನ್ ನಗರದಲ್ಲಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕಚೇರಿಯು, ಭಾನುವಾರ ರಾತ್ರಿ ಸುಮಾರು 2 ಗಂಟೆಗೆ ‘ವಿರ್ಗೊ ಟ್ರಾನ್ಸ್‌ಪೋರ್ಟ್ 8’ ಹಡಗಿನೊಂದಿಗಿನ ಸಂಪರ್ಕ ಕಡಿತಗೊಂಡ ಎರಡು ಗಂಟೆಗಳ ನಂತರ ತಮಗೆ ಈ ಕುರಿತು ಮಾಹಿತಿ ಲಭಿಸಿತು ಎಂದು ತಿಳಿಸಿದೆ. ಈ ಹಡಗು ಪೂರ್ವ ಜಾವಾ ಪ್ರಾಂತ್ಯದಲ್ಲಿರುವ ಇಂಡೋನೇಷ್ಯಾದ ಎರಡನೇ ಅತಿದೊಡ್ಡ ನಗರವಾದ ಸುರಾಬಾಯಾದಿಂದ ಬಂಜಾರ್‌ಮಾಸಿನ್‌ಗೆ ಪ್ರಯಾಣ ಬೆಳೆಸಿತ್ತು.
ಹಡಗು ಪ್ರತಿಕೂಲ ಹವಾಮಾನ ಪರಿಸ್ಥಿತಿಯನ್ನು ಎದುರಿಸಿದೆ ಎನ್ನಲಾಗಿದೆ. ಅದರ ನಿರ್ವಾಹಕರು ಈ ಘಟನೆಯ ಬಗ್ಗೆ ಅಧಿಕಾರಿಗಳಿಗೆ ವರದಿ ಮಾಡಿದರು ಎಂದು ಶೋಧ ಮತ್ತು ರಕ್ಷಣಾ ವಿಭಾಗದ ಮುಖ್ಯಸ್ಥ ಐ ಪುಟು ಸುದಯಾನ ತಿಳಿಸಿದ್ದಾರೆ.











