Sunday, September 20, 2026
ಸುದ್ದಿ

ಬೆಂಗಳೂರು ತೃತೀಯ ಭಾಷಾ ಶಿಕ್ಷಣದ ಉಳಿವಿಗಾಗಿ ಸೆ. 21ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಹೋರಾಟ-ಕಹಳೆ ನ್ಯೂಸ್

ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 2,000–3,000 ಶಿಕ್ಷಕರು ಭಾಗವಹಿಸುವ ನಿರೀಕ್ಷೆ ರಾಜ್ಯದ ಶಾಲಾ ಶಿಕ್ಷಣದಲ್ಲಿ ತೃತೀಯ ಭಾಷೆಯ ಸ್ಥಾನಮಾನವನ್ನು ಮುಂದುವರಿಸಬೇಕು, ತೃತೀಯ ಭಾಷೆಯ ಬದಲಾಗಿ ಕೃತಕ ಬುದ್ಧಿಮತ್ತೆ (AI) ಶಿಕ್ಷಣವನ್ನು ಪರ್ಯಾಯವಾಗಿ ಅಳವಡಿಸುವ ಕ್ರಮವನ್ನು ಮರುಪರಿಶೀಲಿಸಬೇಕು ಹಾಗೂ ಖಾಲಿ ಇರುವ ತೃತೀಯ ಭಾಷಾ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವಾಗಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದೇಶೀಯ ಭಾಷಾ ಹಿತರಕ್ಷಣಾ ವೇದಿಕೆ (ರಿ) ವತಿಯಿಂದ ಸೆಪ್ಟೆಂಬರ್ 21ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಬೃಹತ್ ಸಾಂಕೇತಿಕ ಶಾಂತಿಯುತ ಹೋರಾಟ ಆಯೋಜಿಸಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹೋರಾಟಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರೌಢಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯದವರೆಗಿನ 33 ಸಂಘಟನೆಗಳು ಸಹಯೋಗ ಮತ್ತು ಬೆಂಬಲ ನೀಡಿ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ತಾಲೂಕುಗಳಿಂದ ಸುಮಾರು 2,000ರಿಂದ 3,000 ಶಿಕ್ಷಕರು ಭಾಗವಹಿಸುವ ನಿರೀಕ್ಷೆಯಿದೆ.

ವಿವಿಧ ಸಂಘಟನೆಗಳಿಂದ ಈಗಾಗಲೇ ತಾಲೂಕು ಹಾಗೂ ಜಿಲ್ಲಾ ಹಂತಗಳಲ್ಲಿ ಮನವಿ ನೀಡಿ, ಸರ್ಕಾರದ ಗಮನ ಸೆಳೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ತೃತೀಯ ಭಾಷೆಯ ಬದಲಾಗಿ AI ಶಿಕ್ಷಣವನ್ನು ಅಳವಡಿಸುವ ಕುರಿತು ಶಿಕ್ಷಕ ಸಮುದಾಯದಲ್ಲಿ ಉಂಟಾಗಿರುವ ಆತಂಕಗಳು, ತೃತೀಯ ಭಾಷಾ ಶಿಕ್ಷಕರ ನೇಮಕಾತಿಯ ಅಗತ್ಯತೆ ಹಾಗೂ ವಿದ್ಯಾರ್ಥಿಗಳಿಗೆ ತೃತೀಯ ಭಾಷೆ ಕಲಿಯುವ ಅವಕಾಶವನ್ನು ಮುಂದುವರಿಸುವ ಅಗತ್ಯವನ್ನು ಸರ್ಕಾರದ ಗಮನಕ್ಕೆ ತರಲು ಈ ಹೋರಾಟವನ್ನು ಆಯೋಜಿಸಲಾಗಿದೆ.ದೇಶೀಯ ಭಾಷಾ ಹಿತರಕ್ಷಣಾ ವೇದಿಕೆ (ರಿ)ಯ ಅಧ್ಯಕ್ಷರಾದ ಶ್ರೀ ನಾರಾಯಣ ಭಟ್ಟ “AI ಶಿಕ್ಷಣಕ್ಕೆ ನಮ್ಮ ವಿರೋಧವಿಲ್ಲ. ಆದರೆ AIಯನ್ನು ತೃತೀಯ ಭಾಷೆಗೆ ಪರ್ಯಾಯವಾಗಿ ಬಳಸುವುದನ್ನು ನಾವು ಒಪ್ಪುವುದಿಲ್ಲ. ತಂತ್ರಜ್ಞಾನ ಶಿಕ್ಷಣ ಮತ್ತು ಭಾಷಾ ಶಿಕ್ಷಣ ಎರಡೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಗತ್ಯವಾದ ಕ್ಷೇತ್ರಗಳಾಗಿವೆ. ಆದ್ದರಿಂದ AIಯನ್ನು ಪ್ರತ್ಯೇಕ ವಿಷಯವಾಗಿ ಕಲಿಸಬೇಕು ಮತ್ತು ತೃತೀಯ ಭಾಷೆಯನ್ನು ಹಿಂದಿನಂತೆ ಮುಂದುವರಿಸಬೇಕು.” ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೇಶೀಯ ಭಾಷಾ ಹಿತರಕ್ಷಣಾ ವೇದಿಕೆ (ರಿ)ಯ ಉಪಾಧ್ಯಕ್ಷರಾದ ಶ್ರೀಮತಿ ಭಾಗ್ಯಲಕ್ಷ್ಮಿ ಬಿ.ಜಿ “ಭಾಷೆ ಕೇವಲ ಒಂದು ಪಠ್ಯ ವಿಷಯವಲ್ಲ; ಅದು ವಿದ್ಯಾರ್ಥಿಯ ಚಿಂತನೆ, ಸಂವಹನ, ಸಾಹಿತ್ಯ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಪ್ರಮುಖ ಮಾಧ್ಯಮವಾಗಿದೆ. ವಿದ್ಯಾರ್ಥಿಗಳಿಗೆ ತೃತೀಯ ಭಾಷೆ ಕಲಿಯುವ ಅವಕಾಶವನ್ನು ಕಡಿಮೆ ಮಾಡುವ ಯಾವುದೇ ಕ್ರಮವನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ.

ದೇಶೀಯ ಭಾಷಾ ಹಿತರಕ್ಷಣಾ ವೇದಿಕೆ (ರಿ)ಯ ಇನ್ನೊಬ್ಬ ಉಪಾಧ್ಯಕ್ಷರಾದ ಶ್ರೀ ಚಿದಾನಂದ ಪಾಟೀಲರ ಹೇಳಿಕೆ
“ತೃತೀಯ ಭಾಷಾ ಶಿಕ್ಷಣದ ವಿಷಯವು ಕೇವಲ ಶಿಕ್ಷಕರ ಉದ್ಯೋಗಕ್ಕೆ ಸಂಬಂಧಿಸಿದ ವಿಷಯವಲ್ಲ. ಇದು ವಿದ್ಯಾರ್ಥಿಗಳ ಭಾಷಾ ಕಲಿಕೆಯ ಹಕ್ಕು, ಬಹುಭಾಷಾ ಶಿಕ್ಷಣ ಮತ್ತು ರಾಜ್ಯದ ಭಾಷಾ ವೈವಿಧ್ಯತೆಯೊಂದಿಗೆ ಸಂಬಂಧಿಸಿದ ವಿಚಾರವಾಗಿದೆ.”

ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಶಿಕ್ಷಕ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಸೆಪ್ಟೆಂಬರ್ 21ರಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 2,000–3,000 ಶಿಕ್ಷಕರು ಬೆಂಗಳೂರಿಗೆ ಆಗಮಿಸಿ ಶಾಂತಿಯುತ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತದೆ ಎಂಬ ವಿಶ್ವಾಸವಿದೆ,” ಎಂದು ಅವರು ಹೇಳಿದರು.

ಪ್ರಮುಖ ಬೇಡಿಕೆಗಳು

ದೇಶೀಯ ಭಾಷಾ ಹಿತರಕ್ಷಣಾ ವೇದಿಕೆ (ರಿ) ವತಿಯಿಂದ ಸರ್ಕಾರದ ಮುಂದೆ ಮುಖ್ಯವಾಗಿ ಕೆಳಗಿನ ಬೇಡಿಕೆಗಳನ್ನು ಇಡಲಾಗಿದೆ:

ತೃತೀಯ ಭಾಷೆಯ ಬದಲಾಗಿ AI ಶಿಕ್ಷಣವನ್ನು ಪರ್ಯಾಯವಾಗಿ ಅಳವಡಿಸುವ ಕ್ರಮವನ್ನು ಮರುಪರಿಶೀಲಿಸಬೇಕು.
– ತೃತೀಯ ಭಾಷಾ ಶಿಕ್ಷಣವನ್ನು ಹಿಂದಿನಂತೆ ಮುಂದುವರಿಸಬೇಕು.
– ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ತೃತೀಯ ಭಾಷಾ ಶಿಕ್ಷಕರ ಹುದ್ದೆಗಳಿಗೆ ಶೀಘ್ರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು.
– AI ಶಿಕ್ಷಣವನ್ನು ಪ್ರತ್ಯೇಕ ವಿಷಯ/ಕೌಶಲ್ಯವಾಗಿ ಅಳವಡಿಸಬೇಕು.
– ತೃತೀಯ ಭಾಷೆ ಕಲಿಯಲು ವಿದ್ಯಾರ್ಥಿಗಳಿಗೆ ಸಮಾನ ಅವಕಾಶವನ್ನು ಖಾತ್ರಿಪಡಿಸಬೇಕು.
– ಈ ಕುರಿತು ಶಿಕ್ಷಕ ಸಂಘಟನೆಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ಸಮಗ್ರ ಸಮಾಲೋಚನೆ ನಡೆಸಬೇಕು.

ಸೆಪ್ಟೆಂಬರ್ 21ರಂದು ನಡೆಯಲಿರುವ ಈ ಹೋರಾಟವು ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದ್ದು, ತೃತೀಯ ಭಾಷಾ ಶಿಕ್ಷಣದ ಕುರಿತು ಸರ್ಕಾರದ ಗಮನ ಸೆಳೆಯುವುದು ಇದರ ಉದ್ದೇಶವಾಗಿದೆ ಎಂದು ವೇದಿಕೆ ತಿಳಿಸಿದೆ.