ಪುತ್ತೂರು ತಾಲೂಕು ಸಮಗ್ರ ಅಭಿವೃದ್ಧಿ ಹಾಗೂ ರೈತರ ಹಿತರಕ್ಷಣೆಗೆ ಆಗ್ರಹಿಸಿ ಡಿ.ಕೆ. ಶಿವಕುಮಾರ್ ಅವರಿಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ: ಗನ್ ಲೈಸೆನ್ಸ್ 5 ವರ್ಷಕ್ಕೆ ಸುಲಭ ನವೀಕರಣ ಭರವಸೆ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ, ಗ್ರಾಮೀಣ ಮೂಲಸೌಕರ್ಯ, ಸಾರ್ವಜನಿಕ ಆರೋಗ್ಯ ಮತ್ತು ಕೃಷಿಕರ ತುರ್ತು ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಬೆಂಗಳೂರಿನಲ್ಲಿ ಮಾನ್ಯ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಸುದೀರ್ಘ ಮನವಿ ಪತ್ರ ಸಲ್ಲಿಸಿದ್ದಾರೆ.
ಕೃಷಿಕರ ಗನ್ ಲೈಸೆನ್ಸ್ ನವೀಕರಣದ ಕುರಿತು ವಿಶೇಷವಾಗಿ ಸಮಾಲೋಚನೆ ನಡೆಸಲಾಗಿದ್ದು, ಈ ಹಿಂದೆ ಇದ್ದ ನಿಯಮಗಳಂತೆಯೇ ಯಾವುದೇ ಎನ್‌ಒಸಿ ಕಿರಿಕಿರಿಯಿಲ್ಲದೆ 5 ವರ್ಷಗಳ ಅವಧಿಗೆ ಪರವಾನಗಿ ನವೀಕರಿಸುವ ವ್ಯವಸ್ಥೆಯನ್ನು ಮುಂದುವರಿಸುವುದಾಗಿ ಮಾನ್ಯರು ಸಕಾರಾತ್ಮಕ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ಶಾಸಕರು ಸಲ್ಲಿಸಿದ ಮನವಿಯ ಸಮಗ್ರ ವಿವರಗಳು:
1. ಗನ್ ಲೈಸೆನ್ಸ್ ನವೀಕರಣ ಪ್ರಕ್ರಿಯೆ ಗೊಂದಲ ನಿವಾರಣೆ ಹಾಗೂ ‘ಕೋವಿ ಅದಾಲತ್’:
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಮಾರು 13,000ಕ್ಕೂ ಅಧಿಕ ರೈತರು ಕಾಡುಪ್ರಾಣಿಗಳ ಹಾವಳಿಯಿಂದ ಅಡಿಕೆ, ರಬ್ಬರ್ ಹಾಗೂ ತೋಟಗಾರಿಕಾ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕಾನೂನುಬದ್ಧ ಕೋವಿ ಪರವಾನಗಿ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ನವೀಕರಣದ ವೇಳೆ ನಿಯಮಬಾಹಿರವಾಗಿ ಬೆಳೆ ಹಾನಿ ಸಾಕ್ಷ್ಯ, ಪ್ರಾಣಿ ದಾಳಿಯ ದಾಖಲೆ ಕೇಳಿ ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ಪ್ರಸ್ತಾಪಿಸಿದಾಗ, ಹಿಂದೆ ಇದ್ದಂತೆ ಯಾವುದೇ ಎನ್‌ಒಸಿ ತೊಡಕಿಲ್ಲದೆ 5 ವರ್ಷಗಳ ಅವಧಿಗೆ ಗನ್ ಲೈಸೆನ್ಸ್ ಸುಲಭವಾಗಿ ನವೀಕರಿಸಿಕೊಡುವ ವ್ಯವಸ್ಥೆಯನ್ನು ಮುಂದುವರಿಸುವ ಭರವಸೆ ಸಿಕ್ಕಿದೆ. ಜೊತೆಗೆ ಬಾಕಿ ಕಡತಗಳ ತ್ವರಿತ ವಿಲೇವಾರಿಗೆ ತಾಲೂಕುವಾರು ‘ಕೋವಿ ಅದಾಲತ್’ ನಡೆಸುವಂತೆಯೂ ಶಾಸಕರು ಒತ್ತಾಯಿಸಿದ್ದಾರೆ.
1. ಕೊಯಿಲ ಪಶುವೈದ್ಯಕೀಯ ಕಾಲೇಜು ಪೂರ್ಣ ಪ್ರಮಾಣದ ಕಾರ್ಯಾಚರಣೆ:
ಕಡಬ/ಪುತ್ತೂರು ತಾಲೂಕಿನ ಕೊಯಿಲದಲ್ಲಿರುವ ವಿಶಾಲ ಜಾನುವಾರು ಸಂವರ್ಧನಾ ಕೇಂದ್ರದ ಜಾಗದಲ್ಲಿ ಮಂಜೂರಾಗಿರುವ ಪಶುವೈದ್ಯಕೀಯ ಕಾಲೇಜು ಕಾಮಗಾರಿಗಳನ್ನು ತಕ್ಷಣವೇ ಪೂರ್ಣಗೊಳಿಸಬೇಕು. ಭಾರತೀಯ ಪಶುವೈದ್ಯಕೀಯ ಮಂಡಳಿಯ (VCI) ಅನುಮೋದನೆಯೊಂದಿಗೆ ಮುಂದಿನ ಶೈಕ್ಷಣಿಕ ಸಾಲಿನಲ್ಲೇ ಕಾಲೇಜನ್ನು ಆರಂಭಿಸಬೇಕು ಹಾಗೂ ಕರಾವಳಿ ಹೈನುಗಾರರ ಅನುಕೂಲಕ್ಕಾಗಿ ಸುಧಾರಿತ ತಳಿ ಸಂವರ್ಧನೆ, ರೋಗ ತಪಾಸಣಾ ಕೇಂದ್ರ ಒಳಗೊಂಡ ಸಮಗ್ರ ‘ಪಶುಸಂಗೋಪನಾ ಪಾರ್ಕ್’ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕೆಂದು ಕೋರಿದ್ದಾರೆ.
1. ಮಳೆಹಾನಿ ರಸ್ತೆಗಳಿಗೆ ಶಾಶ್ವತ ಕಾಯಕಲ್ಪ:
ಕರಾವಳಿ-ಮಲೆನಾಡು ಭಾಗದ ಗ್ರಾಮೀಣ, ಎಂಡಿಆರ್ ಹಾಗೂ ಪಿಡಬ್ಲ್ಯೂಡಿ ರಸ್ತೆಗಳು ಮಳೆಯಿಂದ ಸಂಪೂರ್ಣ ಹದಗೆಟ್ಟಿದ್ದು, ಶಾಲಾ ಮಕ್ಕಳು, ಗರ್ಭಿಣಿಯರು ಹಾಗೂ ಆಂಬುಲೆನ್ಸ್ ಸಂಚಾರಕ್ಕೂ ಸಂಚಕಾರ ತಂದೊಡ್ಡಿದೆ. ಕೇವಲ ತೇಪೆ ಹಚ್ಚುವ ಕಾಮಗಾರಿಯಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದ್ದು, ವೈಜ್ಞಾನಿಕ ಚರಂಡಿ ವ್ಯವಸ್ಥೆಯುಳ್ಳ ಕಾಂಕ್ರೀಟ್ ರಸ್ತೆಗಳು ಅಥವಾ ಜಿಯೋ-ಟೆಕ್ಸ್‌ಟೈಲ್ ತಂತ್ರಜ್ಞಾನದ ಶಾಶ್ವತ ಸರ್ವಋತು ರಸ್ತೆ ನಿರ್ಮಾಣಕ್ಕೆ ವಿಶೇಷ ಮೂಲಸೌಕರ್ಯ ಅನುದಾನ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
1. ಆಯುಷ್ ವೈದ್ಯಾಧಿಕಾರಿಗಳ ನೇಮಕ & ಬನ್ನೂರು ಆಸ್ಪತ್ರೆ ಯೋಜನೆ:
ಪುತ್ತೂರು ತಾಲೂಕಿನ ವಿಟ್ಲ ಹಾಗೂ ಉಪ್ಪಿನಂಗಡಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಆಯುಷ್ ವೈದ್ಯಾಧಿಕಾರಿ ಹುದ್ದೆಗಳನ್ನು ಕನಿಷ್ಠ ಹೊರಗುತ್ತಿಗೆ ಆಧಾರದಲ್ಲಾದರೂ ತಕ್ಷಣ ಭರ್ತಿ ಮಾಡಬೇಕು. ಜೊತೆಗೆ ಬನ್ನೂರು ಗ್ರಾಮದ ಕುಂಟಾಣದಲ್ಲಿ ಆಯುಷ್ ಇಲಾಖೆಗೆ ಮಂಜೂರಾಗಿರುವ 5 ಎಕರೆ ಜಮೀನಿನಲ್ಲಿ 100 ಹಾಸಿಗೆಗಳ ಆಯುರ್ವೇದ ಬೋಧನಾ ಆಸ್ಪತ್ರೆ ಮತ್ತು ಕಾಲೇಜು ನಿರ್ಮಾಣಕ್ಕೆ ಶೀಘ್ರ ಆಡಳಿತಾತ್ಮಕ ಅನುಮೋದನೆ ಮತ್ತು ಅನುದಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.
1. ಕೋವಿಡ್ ನಂತರದ ಸಾರ್ವಜನಿಕ ಆರೋಗ್ಯ ರಕ್ಷಣೆ & ಮೂಲಸೌಕರ್ಯ ಸುಧಾರಣೆ:
ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳಿಂದ ಯುವಜನತೆಯಲ್ಲಿ ಹೃದಯಾಘಾತ ಮತ್ತು ನರಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಆಸ್ಪತ್ರೆಗಳಲ್ಲಿ ಧೂಳು ಹಿಡಿಯುತ್ತಿರುವ ಕೋಟ್ಯಂತರ ರೂಪಾಯಿ ಮೌಲ್ಯದ ವೆಂಟಿಲೇಟರ್‌ಗಳು ಮತ್ತು ಆಕ್ಸಿಜನ್ ಘಟಕಗಳನ್ನು ತಕ್ಷಣವೇ ದುರಸ್ತಿಗೊಳಿಸಿ ‘ಕ್ರಿಟಿಕಲ್ ಕೇರ್ ಬ್ಲಾಕ್’ಗಳನ್ನು ಸುಸಜ್ಜಿತವಾಗಿಡಬೇಕು. ಸಾಂಕ್ರಾಮಿಕದ ವೇಳೆ ಜೀವದ ಹಂಗು ತೊರೆದು ದುಡಿದ ಹೊರಗುತ್ತಿಗೆ ನರ್ಸ್‌ಗಳು, ಲ್ಯಾಬ್ ಟೆಕ್ನಿಷಿಯನ್‌ಗಳ ಬಾಕಿ ಗೌರವಧನ ಮತ್ತು ಸೇವಾ ಭದ್ರತೆ ಒದಗಿಸಬೇಕೆಂದು ಶಾಸಕರು ಮನವಿಯಲ್ಲಿ ತಿಳಿಸಿದ್ದಾರೆ.
ಕರಾವಳಿ ಜನರ ಹಿತದೃಷ್ಟಿಯಿಂದ ಈ ಎಲ್ಲಾ ಯೋಜನೆಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಅಗತ್ಯ ಅನುದಾನ ಮತ್ತು ಆಡಳಿತಾತ್ಮಕ ಅನುಮೋದನೆಗಳನ್ನು ಶೀಘ್ರವಾಗಿ ಒದಗಿಸುವಂತೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಸರ್ಕಾರವನ್ನು ಆಗ್ರಹಿಸಿದ್ದಾರೆ.











