
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿಗೆ ಗಂಡು ಮಗು ಜನಿಸಿದ್ದು, ಇದೀಗ ಗಣೇಶ ಹಬ್ಬದಂದೇ ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ.
ಡಾಲಿ ತಮ್ಮ ಮಗನಿಗೆ ʻಎರೆಯʼ ಎಂದು ನಾಮಕರಣ ಮಾಡಿದ್ದಾರೆ. ಕರ್ನಾಟಕ ನಕ್ಷೆಯ ಮಧ್ಯೆ ಮಗನ ಹೆಸರು ಇರುವ ಡಾಲರ್ ಮಾಡಿಸಿ ಮಗನ ಹೆಸರು ರಿವಿಲ್ ಮಾಡಿದ್ದಾರೆ ಡಾಲಿ ದಂಪತಿ. ಎರೆಯ ಎಂದರೆ ಒಡೆಯ, ಅಧಿಪತಿ ಎಂದು ಅರ್ಥ. ಅಲ್ಲದೇ ಇತಿಹಾಸದಲ್ಲಿ ಇಮ್ಮಡಿ ಪುಲಕೇಶಿ ಬಾಲ್ಯದ ಹೆಸರು ಕೂಡ ಎರೆಯ ಎಂದಾಗಿತ್ತು. ಆ ರಾಜರ, ಪಾರಂಪರಿಕ ಮತ್ತು ಶಕ್ತಿಯುತ ಅರ್ಥವನ್ನು ಹೊತ್ತಿರುವ ನಮ್ಮ ಪುಟ್ಟ ಬದುಕಿನ ಅಧಿಪತಿ, ನಮ್ಮ ಹೃದಯದ ರಾಜ ನಮ್ಮ ʻಎರೆಯʼ ಎಂದು ಡಾಲಿ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದಾರೆ.
ಕಳೆದ ವರ್ಷ ಮೈಸೂರಿನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಧನಂಜಯ್ ಮತ್ತು ಧನ್ಯತಾ ಅವರು ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿಗಳಲ್ಲಿ ಒಬ್ಬರು. ಇತ್ತೀಚೆಗೆಷ್ಟೇ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ `ನಮ್ಮ ಪ್ರಪಂಚ ವಿಸ್ತರಿಸುತ್ತಿದೆ’ ಎಂದು ಬೇಬಿ ಬಂಪ್ ಫೋಟೋಗಳನ್ನ ಶೇರ್ ಮಾಡಿಕೊಳ್ಳುವ ಮೂಲಕ ಪೋಷಕರಾಗಿ ಬಡ್ತಿ ಪಡೆಯುತ್ತಿರುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.











