ನಿಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ -ಕಹಳೆ ನ್ಯೂಸ್

ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಕಾಪು ತಾಲೂಕು, ನಿಟ್ಟೆ ‘ಬಿ’ ಕಾರ್ಯಕ್ಷೇತ್ರದ ಸಹಯೋಗದಲ್ಲಿ ನಿಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಪ್ರವೀಣ್ ವಹಿಸಿದ್ದರು. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಅಧ್ಯಕ್ಷ ಅಶೋಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಹುಟ್ಟುಹಬ್ಬದಂದು ಒಂದು ಗಿಡವನ್ನು ನೆಟ್ಟು ಅದನ್ನು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮಕ್ಕಳಲ್ಲಿ ಪ್ರಕೃತಿ ಪ್ರೇಮ ಬೆಳೆಸುವುದು ಅತ್ಯಗತ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಪು ತಾಲೂಕಿನ ಕೃಷಿ ಮೇಲ್ವಿಚಾರಕ ದೇವೇಂದ್ರ ಅವರು ಪರಿಸರ ಸಂರಕ್ಷಣೆಯ ಮಹತ್ವ, ಮರಗಳ ಅಗತ್ಯತೆ ಹಾಗೂ ಪರಿಸರದಿಂದ ಮಾನವ ಜೀವನಕ್ಕೆ ದೊರೆಯುವ ವಿವಿಧ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಇದೇ ವೇಳೆ ವಿವಿಧ ಔಷಧೀಯ ಸಸ್ಯಗಳನ್ನು ಗುರುತಿಸುವ ವಿಶೇಷ ಕಾರ್ಯಕ್ರಮ ನಡೆಸಿ, ಸರಿಯಾಗಿ ಗುರುತಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕರಾದ ಸುಧೀರ್ ನಾಯಕ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ವಂದಿಸಿದರು.
ಈ ಸಂದರ್ಭದಲ್ಲಿ ಬೆಳ್ಮಣ್ ವಲಯದ ಮೇಲ್ವಿಚಾರಕ ಸುಬ್ರಹ್ಮಣ್ಯ, ಸೇವಾ ಪ್ರತಿನಿಧಿ ಶ್ವೇತ ಶೆಟ್ಟಿ, ಎಸ್‌ಡಿಎಂಸಿ ಸದಸ್ಯರು, ಶಾಲೆಯ ಶಿಕ್ಷಕ ವೃಂದ, ಕೇಂದ್ರಬಿಂದುಗಳಾದ ಪುಟಾಣಿ ಮಕ್ಕಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.









