
ವಯನಾಡು: ಇಲ್ಲಿನ ಕಳ್ಳಾಡಿ ಬಳಿ ಸಂಭವಿಸಿದ ಭೀಕರ ಭೂಕುಸಿತದ ದುರಂತ ಸ್ಥಳದಿಂದ ಇಂದು (ಜು.9) ಮೂರು ಶವವನ್ನು ಹೊರತೆಗೆಯಲಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಕೇರಳ ಸಚಿವರಾದ ಎ.ಪಿ.ಅನಿಲ್ ಕುಮಾರ್ ಮತ್ತು ಟಿ.ಸಿದ್ದಿಕ್ ಈ ಕುರಿತು ಮಾಹಿತಿ ನೀಡಿದ್ದು, ಶೋಧ ಕಾರ್ಯಾಚರಣೆಯ ವಲಯ 1ರಲ್ಲಿ ಇಂದು ಬೆಳಿಗ್ಗೆ ಒಂದು ಶವ ಪತ್ತೆಯಾಗಿದೆ. ಮತ್ತೊಂದು ಶವ ದುರಂತ ಸ್ಥಳದ ಸಮೀಪ ಹರಿಯುವ ನದಿಯಲ್ಲಿ ಪತ್ತೆಯಾಗಿದೆ. ಮೂರನೇ ಶವದ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಸದ್ಯ ವಲಯ 1 ಮತ್ತು 2ರಲ್ಲಿ ಹಾಗೂ ನದಿಯ ಆಸುಪಾಸಿನಲ್ಲಿ ಶೋಧ ಕಾರ್ಯವನ್ನು ತೀವ್ರಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಪತ್ತೆಯಾದ ಮೃತದೇಹಗಳನ್ನು ಉತ್ತರ ಪ್ರದೇಶದ ಸರ್ವೇಯರ್ ಅಜರುದ್ದೀನ್ ಅನ್ಸಾರಿ, ಹಿಮಾಚಲ ಪ್ರದೇಶದ ಎಂಜಿನಿಯರ್ ರಾಹುಲ್ ಶರ್ಮಾ ಹಾಗೂ ಬಿಹಾರದ ಆಪರೇಟರ್ ಮೊಹಮ್ಮದ್ ಇಮ್ರಾನ್ ಎಂದು ಗುರುತಿಸಲಾಗಿದೆ. ಸದ್ಯ ಮೃತದೇಹಗಳನ್ನು ವೈತಿರಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಬಳಿಕ ಅವುಗಳನ್ನು ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಇಡಲಾಗುವುದು ಎಂದಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ಸಿಎಂ ಆದ್ಯತೆ:
ಬುಧವಾರ (ಜು.8) ಈ ಕುರಿತು ಪ್ರತಿಕ್ರಿಯಿಸಿದ್ದ ಕೇರಳ ಸಿಎಂ ವಿ.ಡಿ.ಸತೀಶನ್ ಅವರು, ನಾಪತ್ತೆಯಾದವರ ಪತ್ತೆಗೆ ಮೊದಲ ಆದ್ಯತೆ ನೀಡಲಾಗಿದೆ. ದುರಂತದಲ್ಲಿ ಗಾಯಗೊಂಡಿದ್ದ 10 ಜನರಲ್ಲಿ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನಾಲ್ವರ ಪರಿಸ್ಥಿತಿ ಸ್ಥಿರವಾಗಿದ್ದು, ಐಸಿಯುನಲ್ಲಿರುವ ಮೂವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.









