Thursday, July 9, 2026
ಉಡುಪಿಜಿಲ್ಲೆಸುದ್ದಿ

ಲಯನ್ಸ್ ಕ್ಲಬ್ ಪರ್ಕಳದಿಂದ ‘Relieve the Hunger’ ಸೇವಾ ಕಾರ್ಯಕ್ರಮ: ಹೊಸಬೆಳಕು ಆಶ್ರಮದಲ್ಲಿ 220 ಮಂದಿ ಅಶ್ರಿತರೊಂದಿ ಗೆ ಭೋಜನ -ಕಹಳೆ ನ್ಯೂಸ್

ಉಡುಪಿ : ಲಯನ್ಸ್ ಕ್ಲಬ್ ಪರ್ಕಳದ ವತಿಯಿಂದ ಬೈಲೂರಿನ ಹೊಸಬೆಳಕು ಆಶ್ರಮದಲ್ಲಿ ಬುಧವಾರ ‘Relieve the Hunger’ ಸೇವಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಆಶ್ರಮದಲ್ಲಿ ಆಶ್ರಯ ಪಡೆದಿರುವ 220 ಮಂದಿ ಮಕ್ಕಳು, ವೃದ್ಧರು ಹಾಗೂ ಎಂಡೋಸಲ್ಫಾನ್ ಸಂತ್ರಸ್ತರಿಗೆ ಮಧ್ಯಾಹ್ನದ ಅನ್ನಸಂತರ್ಪಣೆ ನಡೆಸಲಾಯಿತು. ಬಳಿಕ ಕ್ಲಬ್ ಸದಸ್ಯರು ಆಶ್ರಮದ ನಿವಾಸಿಗಳೊಂದಿಗೆ ಆತ್ಮೀಯವಾಗಿ ಬೆರೆತು ಅವರ ಯೋಗಕ್ಷೇಮ ವಿಚಾರಿಸಿ ಮಾನವೀಯ ಸೇವೆಯ ಸಂದೇಶ ಸಾರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಮಾತನಾಡಿ, “ಹೊಸಬೆಳಕು ಸೇವಾ ಟ್ರಸ್ಟ್ ಒಂಟಿ ಹಾಗೂ ಅಸಹಾಯಕ ಕ್ಯಾನ್ಸರ್ ರೋಗಿಯೊಬ್ಬರಿಗೆ ಆಶ್ರಯ ನೀಡುವ ಮೂಲಕ ತನ್ನ ಸೇವೆಯನ್ನು ಆರಂಭಿಸಿತು. ಇಂದು ಅನಾಥರು, ವೃದ್ಧರು, ದೀನದಲಿತರು ಮತ್ತು ಸಮಾಜದಿಂದ ನಿರ್ಲಕ್ಷಿಸಲ್ಪಟ್ಟ ಹಿರಿಜೀವಿಗಳಿಗೆ ಪ್ರೀತಿ, ಕಾಳಜಿ ಮತ್ತು ಗೌರವದ ಆಸರೆಯಾಗಿ ಬೆಳೆದಿರುವುದು ಶ್ಲಾಘನೀಯ. ಸಮಾಜದ ದುರ್ಬಲ ವರ್ಗಗಳ ಸೇವೆ ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ” ಎಂದು ಹೇಳಿದರು.

ಲಯನ್ಸ್ ಕ್ಲಬ್ ಪರ್ಕಳದ ಅಧ್ಯಕ್ಷ ಅಭಿರಾಜ್ ಸುವರ್ಣ ಕಟಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಯನ್ಸ್ ಕ್ಲಬ್ ಸಮಾಜಮುಖಿ ಹಾಗೂ ಸೇವಾ ಚಟುವಟಿಕೆಗಳಿಗೆ ಸದಾ ಬದ್ಧವಾಗಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ಮಾನವೀಯ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಹೊಸಬೆಳಕು ಆಶ್ರಮದ ಸಂಸ್ಥಾಪಕಿ ತನುಲಾ ತರುಣ್ ಅವರು ಲಯನ್ಸ್ ಕ್ಲಬ್ ಪರ್ಕಳದ ಸೇವಾ ಮನೋಭಾವವನ್ನು ಶ್ಲಾಘಿಸಿ, ಆಶ್ರಮದ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಪರ್ಕಳದ ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಪ್ರಭು, ಕಾರ್ಯದರ್ಶಿ ಶ್ರೀವತ್ಸ, ಖಜಾಂಚಿ ಭಗೀರಥ ಸಾಲ್ಯಾನ್, ಸದಸ್ಯರಾದ ಶಶಿಧರ್ ಶೆಟ್ಟಿ, ರಾಧಾಕೃಷ್ಣ ಮೆಂಡನ್, ಗಣಪತಿ ಮಂಚಿ, ಭೃತಿ ಗಂಗಾಧರ್, ಜೆ.ಸಿ. ಪೂಜಾರಿ, ದೀಕ್ಷಿತ್ ಶೆಟ್ಟಿ ಸೇರಿದಂತೆ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಈ ಸೇವಾ ಕಾರ್ಯಕ್ರಮವು ಹಸಿವು ನಿವಾರಣೆಯ ಜೊತೆಗೆ ಸಮಾಜದ ದುರ್ಬಲ ವರ್ಗಗಳೊಂದಿಗೆ ಮಾನವೀಯ ಬಾಂಧವ್ಯ ಬೆಳೆಸುವಲ್ಲಿ ಮಹತ್ವದ ಹೆಜ್ಜೆಯಾಗಿ ಗಮನ ಸೆಳೆಯಿತು