Thursday, July 9, 2026
ಸುದ್ದಿ

ಸರ್ಕಾರಿ ಕೆಲಸಕ್ಕಾಗಿ 7 ಲಕ್ಷ ಸುಪಾರಿ ಕೊಟ್ಟು ಅಮ್ಮನನ್ನೇ ಮುಗಿಸಿದ ಮಗಳು – ಕಹಳೆ ನ್ಯೂಸ್

ಜೈಪುರ: ಆಸ್ತಿ ಹಾಗೂ ಸರ್ಕಾರಿ ಕೆಲಸಕ್ಕಾಗಿ ಹಂತಕರಿಗೆ 7 ಲಕ್ಷ ರೂ. ಸುಪಾರಿ ಕೊಟ್ಟು ಮಗಳೇ ಅಮ್ಮನನ್ನು ಕೊಲೆ ಮಾಡಿಸಿದ ಪ್ರಕರಣ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಆಯುಷಿ ಶರ್ಮಾ (23) ಆಸ್ತಿ ಮತ್ತು ತಾಯಿಯ ಸರ್ಕಾರಿ ಉದ್ಯೋಗಕ್ಕಾಗಿ ತನ್ನ ಚಿಕ್ಕಪ್ಪ ಮೋಹನ್ ಸ್ವರೂಪ್ ಮತ್ತು ಸೋದರಸಂಬಂಧಿ ಬಲರಾಮ್ ಅಲಿಯಾಸ್ ರವಿ ಜೊತೆ ಸೇರಿ ಈ ಸಂಚು ರೂಪಿಸಿದ್ದಳು. ಬಳಿಕ ಕೊಲೆಗಾಗಿ ಬಾಡಿಗೆ ಹಂತಕರನ್ನು ನೇಮಿಸಿದ್ದಳು. ಅದರಂತೆ ಸುಪಾರಿ ಹಂತಕರು ಸ್ಕಾರ್ಪಿಯೋ ಎಸ್‌ಯುವಿಯಿಂದ ಡಿಕ್ಕಿ ಹೊಡೆಸಿ ಆಯುಷಿ ತಾಯಿ ನೀರಜ್ ಶರ್ಮಾ ಅವರನ್ನು ಹತ್ಯೆ ಮಾಡಿದ್ದರು. ಬಳಿಕ ಕೊಲೆಯನ್ನು ಅಪಘಾತದಂತೆ ಬಿಂಬಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೊಲೆಯಾದ ನೀರಜ್ ಶರ್ಮಾ (45) ನ್ಯಾಯಾಲಯದಲ್ಲಿ ಕೆಳ ವಿಭಾಗದ ಗುಮಾಸ್ತರಾಗಿ (ಎಲ್‌ಡಿಸಿ) ಕೆಲಸ ಮಾಡುತ್ತಿದ್ದರು. ಜು.3ರಂದು ನೀರಜ್ ತಮ್ಮ ಮಗನನ್ನು ಟ್ಯೂಷನ್‌ಗೆ ಬಿಟ್ಟು ಮನೆಗೆ ಹಿಂತಿರುಗುತ್ತಿದ್ದಾಗ, ಪ್ರತಾಪ್ ನಗರ ಬಳಿ 130 ಕಿ.ಮೀ ವೇಗದಲ್ಲಿ ಬಂದ ಸ್ಕಾರ್ಪಿಯೋ ಕಾರು ಡಿಕ್ಕಿಯಾಗಿತ್ತು. ಈ ವೇಳೆ ಅವರು 100 ಅಡಿಗಳಷ್ಟು ದೂರ ಹಾರಿ ಬಿದ್ದು ಸಾವನ್ನಪ್ಪಿದ್ದರು. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದರು.

ತನಿಖಾಧಿಕಾರಿಗಳು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇದು ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ ಎಂಬುದು ಗೊತ್ತಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಕೊಲೆ ಸಂಚು ಬಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಷಿ ಶರ್ಮಾ ಸೇರಿದಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ನೀರಜ್‌ ಮೇಲೆ ನಿಗಾ ಇಟ್ಟಿದ್ದ ಹಂತಕರು
ಆರೋಪಿಗಳು ಆರಂಭದಲ್ಲಿ ಬಾಡಿಗೆಗೆ ಪಡೆದ ಥಾರ್ ಎಸ್‌ಯುವಿ ಬಳಸಿ ನೀರಜ್ ಮೇಲೆ ನಿಗಾ ವಹಿಸಿದ್ದರು. ಆದರೆ ಆ ಪ್ರಯತ್ನ ವಿಫಲವಾಗಿತ್ತು. ಸ್ಕಾರ್ಪಿಯೋ ಬಳಸಿ ಅಂತಿಮ ದಾಳಿ ನಡೆಸಿದ್ದರು.

ಆರೋಪಿಗಳು ನೀರಜ್‌ ಹತ್ಯೆಯ ದಿನ ಅವರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಆರೋಪಿಗಳಲ್ಲಿ ಒಬ್ಬನಾದ ಮೋಹಿತ್ ಶರ್ಮಾ ಆಕೆಯ ಸ್ಥಳವನ್ನು ತಿಳಿಸಿದರೆ, ಮತ್ತೊಬ್ಬ ಆರೋಪಿ ರೋಹಿತ್ ಜಾತವ್ ಬೈಕ್‌ನಲ್ಲಿ ಹತ್ತಿರದಲ್ಲಿ ನಿಂತಿದ್ದ. ಹಂತಕರಲ್ಲಿ ಒಬ್ಬನಾದ ಆಕಾಶ್ ಶರ್ಮಾ ಸ್ಕಾರ್ಪಿಯೋವನ್ನು ಚಲಾಯಿಸುತ್ತಿದ್ದ. ಮತ್ತೊಬ್ಬ ಆರೋಪಿ ಅರವಿಂದ್ ಶರ್ಮಾ ಸಹ ಕಾರಲ್ಲಿ ಇದ್ದ. ನೀರಜ್ ಹತ್ಯೆಯ ಬಳಿಕ ಸ್ಕಾರ್ಪಿಯೋ ಬಿಟ್ಟು ಬೈಕ್‌ನಲ್ಲಿ ಆರೋಪಿಗಳು ಪರಾರಿಯಾಗಿದ್ದರು.

ಅನುಕಂಪದ ಮೇಲೆ ನೌಕರಿ ಪಡೆದಿದ್ದ ನೀರಜ್‌
ನೀರಜ್ ಅವರ ಪತಿ ಸುಮಾರು ಒಂದು ವರ್ಷದ ಹಿಂದೆ ನಿಧನರಾಗಿದ್ದರು. ಅವರ ಮರಣದ ನಂತರ, ನೀರಜ್ ಅನುಕಂಪದ ಮೇಲೆ ಎಲ್‌ಡಿಸಿ ಕೆಲಸ ನೀಡಲಾಗಿತ್ತು. ಈ ಕೆಲಸವನ್ನು ಆಯುಷಿ ಬಯಸಿದ್ದಳು. ಅಲ್ಲದೇ ತಾಯಿ ಮಗಳ ನಡುವೆ ಎರಡು ಮೂರು ವರ್ಷಗಳಿಂದ ಆಸ್ತಿ ವಿವಾದವಿತ್ತು ಇದೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆಯ ಕೆಲಸ ಬಯಸಿದ್ದೆ ಎಂದ ಆಯುಷಿ
ತನ್ನ ತಂದೆಯ ಮರಣದ ನಂತರ ಅವರ ಸರ್ಕಾರಿ ಉದ್ಯೋಗವನ್ನು ತಾನು ಬಯಸಿದ್ದೆ.‌ ಆದರೆ ನನ್ನ ತಾಯಿ ಆ ಹುದ್ದೆಯನ್ನು ಪಡೆದುಕೊಂಡರು. ಇದರಿಂದ ನನಗೆ ಬೇಸರವಾಗಿತ್ತು. ಅಲ್ಲದೇ ಆಸ್ತಿಯ ಮೇಲೆ ಹಿಡಿತ ಸಾಧಿಸಲು ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಆಕೆ ಬಾಯಿ ಬಿಟ್ಟಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಯುಷಿ ಶರ್ಮಾ, ಮೋಹನ್ ಸ್ವರೂಪ್, ಮೋಹಿತ್ ಶರ್ಮಾ, ಆಕಾಶ್ ಶರ್ಮಾ, ಅರವಿಂದ್ ಶರ್ಮಾ, ಹೇಮಂತ್ ಶರ್ಮಾ ಮತ್ತು ರೋಹಿತ್ ಜಾತವ್ ಅವರನ್ನು ಬಂಧಿಸಿದ್ದಾರೆ. ಪ್ರಮುಖ ಸಂಚುಕೋರ ಬಲರಾಮ್ ಅಲಿಯಾಸ್ ರವಿ ತಲೆಮರೆಸಿಕೊಂಡಿದ್ದಾನೆ.