ಬೆಂಗಳೂರಲ್ಲಿ ಲ್ಯಾಂಡಿಂಗ್ ವೇಳೆ ಇಂಡಿಗೋ ವಿಮಾನದ ಹಿಂಭಾಗ ರನ್‌ವೇಗೆ ಡಿಕ್ಕಿ: ತಪ್ಪಿದ ಭಾರೀ ಅನಾಹುತ – ಕಹಳೆ ನ್ಯೂಸ್

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್ ಆಗುವ ವೇಳೆ ಅದರ ಹಿಂಭಾಗವು ರನ್‌ವೇಗೆ ತಾಗಿದ ಘಟನೆ ನಡೆದಿದೆ.
ಅಸ್ಸಾಂನ ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬೋರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೋ ಸಂಸ್ಥೆಯ ‘6E 6542’ ವಿಮಾನದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಭಾರೀ ಗಾಳಿಯ ತೀವ್ರತೆಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನವು ಮೊದಲ ಪ್ರಯತ್ನದಲ್ಲಿ ಲ್ಯಾಂಡ್ ಆಗಲು ವಿಫಲವಾಗಿ, ಎರಡನೇ ಬಾರಿಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಇಂಡಿಗೋ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಘಟನೆ ಸಂಭವಿಸಿದ ಬೆನ್ನಲ್ಲೇ ವಿಮಾನದ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ನಿಯಮಾನುಸಾರ ದುರಸ್ತಿ ಮತ್ತು ನಿರ್ವಹಣಾ ಪರಿಶೀಲನೆಗೆ ಒಳಪಡಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಅನುಮತಿ ಲಭಿಸಿದ ನಂತರವಷ್ಟೇ ಈ ವಿಮಾನ ಮರಳಿ ಸೇವೆಗೆ ಲಭ್ಯವಾಗಲಿದೆ. ಇನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಆರಂಭಿಸಿದೆ ಎಂದು ವರದಿಗಳು ತಿಳಿಸಿವೆ.
ಗುವಾಹಟಿಯಿಂದ ಬೆಂಗಳೂರಿಗೆ ಬರುತ್ತಿದ್ದ 6E 6542 ಸಂಖ್ಯೆಯ ಇಂಡಿಗೋ ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಸುತ್ತಿದ್ದ ಬಲವಾದ ಗಾಳಿಯ ಕಾರಣದಿಂದಾಗಿ ಲ್ಯಾಂಡಿಂಗ್ ವೇಳೆ ರನ್‌ವೇಗೆ ಅಸಹಜ ಸಂಪರ್ಕವನ್ನು ಎದುರಿಸಬೇಕಾಯಿತು. ನಿಯಮಾವಳಿಗಳ ಪ್ರಕಾರ ಎಲ್ಲಾ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಸದ್ಯ ವಿಮಾನದ ತಾಂತ್ರಿಕ ತಪಾಸಣೆ ನಡೆಯುತ್ತಿದ್ದು, ಕ್ಲಿಯರೆನ್ಸ್ ದೊರೆತ ಬಳಿಕ ಕಾರ್ಯಾಚರಣೆ ಪುನರಾರಂಭಿಸಲಾಗುವುದು ಎಂದು ಇಂಡಿಗೋ ತಿಳಿಸಿದೆ.










