
ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿರುವ, ನಿತೀಶ್ ತಿವಾರಿ ನಿರ್ದೇಶನದ ಬೃಹತ್ ದೃಶ್ಯಕಾವ್ಯ ‘ರಾಮಾಯಣ’ ಚಿತ್ರದ ಮ್ಯೂಸಿಕಲ್ ಜರ್ನಿ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ. ಚಿತ್ರತಂಡವು ಶ್ರೀರಾಮನ ದಿವ್ಯ ಚೇತನವನ್ನು ಕೊಂಡಾಡುವ ‘ಜೈ ಜೈ ರಾಮ್’ ಎಂಬ ಪ್ರಥಮ ಗೀತೆಯನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾ ಪ್ರಚಾರದ ಮೊದಲ ಹೆಜ್ಜೆಯನ್ನು ಇಟ್ಟಿದೆ. ಆಧ್ಯಾತ್ಮಿಕ ಆರತಿಯ ಪವಿತ್ರತೆಯೊಂದಿಗೆ ವಿಶಾಲವಾದ ಸಿನಿಮಾ ಸಂಗೀತವನ್ನು ಸಮ್ಮಿಳಿತಗೊಳಿಸಿ ಈ ಹಾಡನ್ನು ನಿರ್ಮಿಸಲಾಗಿದೆ.
ಭಾರತೀಯ ಚಿತ್ರರಂಗದ ದೈತ್ಯ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಈ ದಿವ್ಯ ಗೀತೆಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಕನ್ನಡ ಆವೃತ್ತಿಗೆ ವರದರಾಜ್ ಚಿಕ್ಕಬಳ್ಳಾಪುರ ಅವರು ಮನಮುಟ್ಟುವ ಸಾಹಿತ್ಯ ರಚಿಸಿದ್ದು, ಗಾಯಕರಾದ ರಾಘವ್ ಕೌಶಿಕ್ ಮತ್ತು ರಕ್ಷಿತಾ ಸುರೇಶ್ ತಮ್ಮ ದೈವಿಕ ಕಂಠಸಿರಿಯಲ್ಲಿ ಹಾಡಿದ್ದಾರೆ. ಶ್ರೀರಾಮನ ಕರುಣೆ, ಅಭಯ, ರಕ್ಷಣೆ ಹಾಗೂ ಧರ್ಮನಿಷ್ಠೆಯನ್ನು ಬಣ್ಣಿಸುವ ಈ ಸಾಲುಗಳು, ಮತ್ತೆ ಮತ್ತೆ ಪುನರಾವರ್ತನೆಯಾಗುವ ‘ಜೈ ಜೈ ರಾಮ್’ ನಾಮಸ್ಮರಣೆಯ ಮೂಲಕ ಕೇಳುಗರ ಮನಸ್ಸಿನಲ್ಲಿ ಭಕ್ತಿರಸವನ್ನು ಸೃಷ್ಟಿಸುತ್ತವೆ.
ಈ ವಿಶೇಷ ಗೀತೆಯ ಕುರಿತು ಮಾತನಾಡಿದ ನಿರ್ಮಾಪಕ ನಮಿತ್ ಮಲ್ಹೋತ್ರಾ, ಶ್ರೀರಾಮನು ರಾಮಾಯಣದ ಹೃದಯಭಾಗವಾಗಿದ್ದು, ತಲೆಮಾರುಗಳಿಂದ ಪ್ರತಿಯೊಬ್ಬರ ಜೀವನದ ದಾರಿದೀಪವಾಗಿದ್ದಾನೆ ಎಂದಿದ್ದಾರೆ. ಕತ್ತಲೆಯ ಕ್ಷಣಗಳಲ್ಲಿ ಆತನ ಶಕ್ತಿ, ಗೊಂದಲದ ಸಮಯದಲ್ಲಿ ಆತನ ಧರ್ಮದ ಮಾರ್ಗ ಹಾಗೂ ಸಂತೋಷದ ಕ್ಷಣಗಳಲ್ಲಿ ಕೃತಜ್ಞತೆಯಿಂದ ಆತನನ್ನು ಸ್ಮರಿಸಲಾಗುತ್ತದೆ. ‘ಜೈ ಜೈ ರಾಮ್’ ಗೀತೆಯು ಪ್ರತಿಯೊಬ್ಬ ಭಾರತೀಯನು ಶ್ರೀರಾಮನೊಂದಿಗೆ ಹೊಂದಿರುವ ಅತ್ಯಂತ ವೈಯಕ್ತಿಕ ಮತ್ತು ಪವಿತ್ರ ಸಂಬಂಧದ ಅಭಿವ್ಯಕ್ತಿಯಾಗಿದೆ ಎಂದು ಅವರು ಹಂಚಿಕೊಂಡಿದ್ದಾರೆ.










