Monday, September 28, 2026
ಸುದ್ದಿ

“ರಾಹುಲ್ ಗಾಂಧಿ ರಾಜಕೀಯ ಲಾಭಕ್ಕಾಗಿ ದೇಶದ ಸಾಂವಿಧಾನಿಕ ಸಂಸ್ಥೆಗಳ ಕಾರ್ಯವೈಖರಿ ಪ್ರಶ್ನಿಸಿ ದೇಶವಿದೇಶಗಳಲ್ಲಿ ಅಗೌರವ ತೋರುತ್ತಿದ್ದಾರೆ”ವಿಪಕ್ಷದ ನಾಯಕ ಆರ್.ಅಶೋಕ್ ಆಕ್ಷೇಪ

ಬೆಂಗಳೂರು: ರಾಹುಲ್ ಗಾಂಧಿ ಅವರು ರಾಜಕೀಯ ಲಾಭಕ್ಕಾಗಿ ದೇಶದ ಸಾಂವಿಧಾನಿಕ ಸಂಸ್ಥೆಗಳ ಕಾರ್ಯವೈಖರಿ ಪ್ರಶ್ನಿಸಿ ದೇಶವಿದೇಶಗಳಲ್ಲಿ ಅಗೌರವ ತೋರುತ್ತಿದ್ದಾರೆ. ಅದು ಅವರಿಗೆ ಚಟವಾಗಿದೆ ಎಂದು ವಿಧಾನಸಭೆ ವಿಪಕ್ಷದ ನಾಯಕ ಆರ್.ಅಶೋಕ್ ಅವರು ದೂರಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸೋಲಿನಿಂದಾಗಿ ಭ್ರಮನಿರಸನಗೊಂಡಿದೆ. ಈ ಜನ್ಮದಲ್ಲಿ ಗೆಲ್ಲುವುದಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಆದ್ದರಿಂದ ರಾಹುಲ್ ದೇಶದ ಸಾಂವಿಧಾನಿಕ ಸಂಸ್ಥೆಗಳಾದ ಸುಪ್ರೀಂ ಕೋರ್ಟ್, ಹೈಕೋರ್ಟ್, ಜಾರಿ ನಿರ್ದೇಶನಾಲಯ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಇದೀಗ ಕೇಂದ್ರ ಚುನಾವಣಾ ಆಯೋಗದ ಕಾರ್ಯವೈಖರಿಯನ್ನೂ ಪ್ರಶ್ನಿಸುತ್ತಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳ ಮೇಲೆ ಕೆಸರು ಎರಚುವ ಕೆಲಸ ಮಾಡುತ್ತಿರುವ ಕಾಂಗ್ರೆಸ್‍ಗೆ ಮುಂದಿನ ದಿನಗಳಲ್ಲಿ ದೇಶದ ಜನರು ಸರಿಯಾದ ಬುದ್ಧಿ ಕಲಿಸಲಿದ್ದಾರೆ. ಎಂದು ಹೇಳಿದರು.

ಜಾಹೀರಾತು

ಬುದ್ಧಿ ಇದೆಯೋ ಇಲ್ಲವೊ ಗೊತ್ತಿಲ್ಲ…
ರಾಜಕೀಯ ಲಾಭಕ್ಕಾಗಿ ಸಂವಿಧಾನಬದ್ಧ ಸಂಸ್ಥೆಗಳ ಬಗ್ಗೆ ಅಪನಂಬಿಕೆ ಬರುವ ಹಾಗೆ ರಾಹುಲ್ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ಹುಳಿಹಿಂಡುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬುದ್ಧಿ ಇದೆಯೋ ಇಲ್ಲವೊ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಎಸ್‍ಐಆರ್‍ನ ಕಾನೂನುಬದ್ಧತೆಯನ್ನು ಸುಪ್ರೀಂಕೋರ್ಟ್ ಈಗಾಗಲೇ ಎತ್ತಿ ಹಿಡಿದಿದೆ. ಇವಿಎಂ ಬಗ್ಗೆಯೂ ಕಾಂಗ್ರೆಸ್ ಬಾಯಿ ಬಾಯಿ ಬಡಿದುಕೊಂಡಿತ್ತು. ಆಗ ಸುಪ್ರೀಂಕೋರ್ಟ್ ಸಹ ಛೀಮಾರಿ ಹಾಕಿತ್ತು. ಪಾಕಿಸ್ತಾನದವರು, ಬಾಂಗ್ಲಾದೇಶದವರ ಓಟು ಪಡೆದು ಗೆಲ್ಲುತ್ತಿದ್ದೇವೆ ಎಂಬುದನ್ನು ಕಾಂಗ್ರೆಸ್ ಒಪ್ಪಿಕೊಳ್ಳಲಿ ಎಂದು ಆಗ್ರಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾಕ್ರೋಚ್ ಪಾರ್ಟಿ ಜೊತೆ ಸೇರಿ ಟೀಕೆ…
ಕೇಂದ್ರ ಚುನಾವಣಾ ಆಯೋಗದಲ್ಲಿ ಯಾವುದೇ ಏಕಪಕ್ಷೀಯ ತೀರ್ಮಾನ ಆಗಿಲ್ಲ ಎಂದು ಮೂವರು ಆಯುಕ್ತರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಆದರೂ ರಾಹುಲ್ ಗಾಂಧಿ ಅವರು ಕಾಕ್ರೋಚ್ ಪಾರ್ಟಿ ಜೊತೆಗೆ ಸೇರಿಕೊಂಡು ಟೀಕೆ ಮಾಡುತ್ತಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಹಾಲಿ ಸಿಎಂ ಡಿ.ಕೆ.ಶಿವಕುಮಾರ್ ಅವರೂ ಪ್ರತಿಭಟನೆಯಲ್ಲಿದ್ದರು ಎಂದರು.
ಕೆಪಿಎಸ್‍ಸಿ ಅಕ್ರಮ ತನಿಖೆಗೆ ಹೈಕೋರ್ಟ್ ಎಸ್‍ಐಟಿ ರಚಿಸಿದ್ದನ್ನು ಕಾಂಗ್ರೆಸ್ ವಿರೋಧಿಸಿತ್ತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಿಂತೆಗೆದದ್ದು, ತ್ರಿವಳಿ ತಲಾಖ್ ನಿμÉೀಧವನ್ನೂ ಟೀಕೆ ಮಾಡಿದರು. ರಾಮಮಂದಿರಕ್ಕೆ ವಿರೋಧ ಮಾಡಿದರು. ವಂದೇ ಮಾತರಂ ಹಾಡಲ್ಲ ಎಂದರು. ಶಾರುಖ್ ಖಾನ್, ಅಮಿರ್ ಖಾನ್ ಮನೆಗಳಲ್ಲಿ ಗಣಪತಿ ಇಟ್ಟು ಪೂಜೆ ಮಾಡುತ್ತಾರೆ. ಆದರೆ ರಾಹುಲ್ ಗಾಂಧಿಗೆ ಆಗಲ್ಲ ಎಂದು ವಿವರಿಸಿದರು.

ಎಲ್ಲರನ್ನೂ ಅವಮಾನಿಸುವ ರಾಹುಲ್…
ಇವಿಎಂ ಅನ್ನು ರಾಹುಲ್ ಗಾಂಧಿ ಅವರು ಬ್ಲ್ಯಾಕ್ ಬಾಕ್ಸ್ ಎಂದು ಟೀಕೆ ಮಾಡಿದ್ದರು. ಆದರೆ ಇವಿಎಂ ತಂದವರು ಅವರ ಅಪ್ಪ. ರಾಹುಲ್ ಗಾಂಧಿ ಅವರಿಗೆ ಸಿಬಿಐ, ಚುನಾವಣಾ ಆಯೋಗ, ಕೋರ್ಟ್‍ಗಳ ಬಗ್ಗೆ ನಂಬಿಕೆ ಇಲ್ಲ. ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಟೀಕೆ ಮಾಡಿದರು. ನಮ್ಮ ಪೈಲಟ್‍ಗಳನ್ನೂ, ಸೈನಿಕರನ್ನೂ ರಾಹುಲ್ ಅವಮಾನ ಮಾಡಿದರು. ಆದರೆ ರಾಹುಲ್ ಅವರು ಎಸ್ಕಾರ್ಟ್ ಬಿಟ್ಟು ವಿದೇಶಕ್ಕೆ ಹೋದರೆ ಬಿಜೆಪಿ ಎಂದೂ ಪ್ರಶ್ನಿಸಿಲ್ಲ ಎಂದು ನೆನಪಿಸಿದರು.

ಎಸ್‍ಐಆರ್ ನಂತರ ಪಶ್ಚಿಮ ಬಂಗಾಳದಲ್ಲಿದ್ದ ಬಾಂಗ್ಲಾದೇಶದವರು ಓಡಿಹೋಗುತ್ತಿರುವ ವಿಡಿಯೊಗಳು ಈಗ ಬಯಲಾಗುತ್ತಿವೆ. ಕೇರಳದಲ್ಲಿ ಎಸ್‍ಐಆರ್ ನಂತರ ಕಾಂಗ್ರೆಸ್ ಗೆಲವು ಸಾಧಿಸಿದೆ. ಹಾಗಾದರೆ ಎಸ್‍ಐಆರ್ ಸರಿ ಇಲ್ಲ ಎಂದಾದರೆ ಕೇರಳ ಚುನಾವಣೆ ರದ್ದು ಮಾಡಲಿ. ನೀವೇ ಇದರಲ್ಲಿ ಮಾದರಿಯಾಗಿ. ತೆಲಂಗಾಣ, ಕರ್ನಾಟಕದಲ್ಲೂ ಚುನಾವಣೆ ಸರಿಯಾಗಿ ನಡೆದಿಲ್ಲ ಎಂದು ಹೇಳುವ ಧೈರ್ಯವಿದೆಯೇ ಎಂದು ಕೇಳಿದರು.

ಸಿಎಂ ಸಹ ಗೋ ಔಟ್, ಗೆಟ್ ಔಟ್
ಕಿತ್ತೋದ ಕಾಕ್ರೋಚ್ ಪಾರ್ಟಿ ಹೇಳಿದಂತೆ ಚುನಾವಣೆಯನ್ನು ಕಾಂಗ್ರೆಸ್ ಬಹಿಷ್ಕರಿಸಲಿ. ಗೆದ್ದಾಗ ಮಾತ್ರ ಚುನಾವಣಾ ಆಯೋಗ ದೇವರು, ಸೋತರೆ ವಿಲನ್ ರೀತಿ ಮಾತನಾಡುತ್ತಾರೆ. ಇದು ಬಹಳ ದಿನ ನಡೆಯಲ್ಲ. ಚುನಾವಣಾ ಆಯುಕ್ತರು ರಾಜೀನಾಮೆಗೆ ಈಗ ಕಾಂಗ್ರೆಸ್ ಆಗ್ರಹಿಸುತ್ತಿದೆ. ಎಸ್‍ಐಆರ್ ವಿಷಯ ಬಹಿರಂಗ ಆಗಿದ್ದಕ್ಕೆ ಆಯುಕ್ತರು ರಾಜೀನಾಮೆ ನೀಡುವುದಾದರೆ ರಾಜ್ಯದಲ್ಲಿನ ಹಣಕಾಸು ಸ್ಥಿತಿ ವಿಷಯ ಬಹಿರಂಗ ಆಗಿದ್ದಕ್ಕೆ ಸಿಎಂ ರಾಜೀನಾಮೆ ನೀಡಲಿ. ನೀವು ಪಾಪರ್ ಗಿರಾಕಿ, ಸಿಎಂ ಸಹ ಗೋ ಔಟ್, ಗೆಟ್ ಔಟ್ ಎಂದು ತಿಳಿಸಿದರು.
ಇವರಿಗೆ ಪಾಕಿಸ್ತಾನ, ಬಾಂಗ್ಲಾದವರ ಓಟು ಬೇಕು. ಆದ್ದರಿಂದ ಚುನಾವಣಾ ಆಯೋಗವನ್ನು ಟೀಕೆ ಮಾಡುತ್ತಿದ್ದಾರೆ. ಮತಪಟ್ಟಿ ಪರಿಷ್ಕರಣೆ ಇದೇ ಮೊದಲಲ್ಲ. ತಪ್ಪಾಗಿದ್ದರೆ ಕೋರ್ಟ್‍ಗೆ ಹೋಗಲಿ. ನಿಮ್ಮ ಬಳಿ ದಾಖಲೆ ಇಲ್ಲ. ಯೋಗ್ಯತೆ ಇಲ್ಲ. ಹಿಂದೆ ನೆಹರು ಇದ್ದಾಗ ಅವರ ನೆಂಟರನ್ನೇ ಆಯುಕ್ತರನ್ನಾಗಿ ಮಾಡಿಕೊಂಡಿದ್ದರು. ರಾಹುಲ್ ಅವರಿಗೆ ತಾತ, ಅಜ್ಜಿ ಮಾಡಿದ್ದು ಸರಿ. ಮೋದಿ ಮಾಡಿದ್ದು ಸರಿಯಲ್ಲ ಎಂದು ಹೇಳಿದರು. ರಾಹುಲ್ ಗಾಂಧಿ ಅವರಿಗೆ ಚುನಾವಣೆಯಲ್ಲಿ ಗೆಲ್ಲುವ ನಂಬಿಕೆ ಇಲ್ಲ. ಉತ್ತರ ಪ್ರದೇಶ ಚುನಾವಣೆ ಗೆಲ್ಲಬೇಕು ಎಂದು ಚುನಾವಣಾ ಆಯೋಗದ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಉಸಸ್ಥಿತರಿದ್ದರು.

 

(ಕರುಣಾಕರ ಖಾಸಲೆ)
ರಾಜ್ಯ ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ