
ಬೆಂಗಳೂರು : ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ಕೆಲವೊಮ್ಮೆ ಮಾಡುವ ಎಡವಟ್ಟುಗಳು ಅಚ್ಚರಿ ಮೂಡಿಸುತ್ತವೆ. ಬೆಂಗಳೂರಿನಲ್ಲಿ ಇಂತಹದ್ದೇ ಒಂದು ವಿಚಿತ್ರ ಘಟನೆ ನಡೆದಿದ್ದು, ಬೆನ್ನಿಗೆ ಗಿಟಾರ್ ಬ್ಯಾಗ್ ಹಾಕಿಕೊಂಡು ಸ್ಕೂಟರ್ ಚಲಾಯಿಸುತ್ತಿದ್ದ ಸವಾರನಿಗೆ ಎಐ ಕ್ಯಾಮೆರಾ ರೂ. 500 ದಂಡ ವಿಧಿಸಿದೆ.
ಗಿಟಾರ್ ಬ್ಯಾಗನ್ನು ‘ಹಿಂಬದಿ ಸವಾರ’ ಎಂದು ತಪ್ಪಾಗಿ ಗುರುತಿಸಿದ ಎಐ ಕ್ಯಾಮೆರಾ, ಆತನಿಗೆ ಹೆಲ್ಮೆಟ್ ಇಲ್ಲ ಎಂದು ಪರಿಗಣಿಸಿ ಚಲನ್ ಜಾರಿ ಮಾಡಿದೆ. ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿ ಕಡೆಗೆ ಸೌವಿಕ್ ದತ್ತಾ ಅವರು ತಮ್ಮ ಪತ್ನಿಯ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ಬೆನ್ನಿಗೆ ಗಿಟಾರ್ ಚೀಲವನ್ನು ಹಾಕಿಕೊಂಡಿದ್ದರು.
ಔಟರ್ ರಿಂಗ್ ರಸ್ತೆಯಲ್ಲಿ ಅಳವಡಿಸಲಾಗಿದ್ದ ಎಐ ಆಧಾರಿತ ಟ್ರಾಫಿಕ್ ಕ್ಯಾಮೆರಾ, ಗಿಟಾರ್ ಬ್ಯಾಗ್ ಅನ್ನು ವ್ಯಕ್ತಿಯೊಬ್ಬರು ಕುಳಿತಿರುವಂತೆ ತಪ್ಪಾಗಿ ಗುರುತಿಸಿದೆ. ಬಳಿಕ ‘ಹಿಂಬದಿ ಸವಾರ ಹೆಲ್ಮೆಟ್ ಧರಿಸಿಲ್ಲ’ ಎಂಬ ನಿಯಮದಡಿ ರೂ.500 ದಂಡ ವಿಧಿಸಿದೆ. ಮರುದಿನ ಸೌವಿಕ್ ಅವರ ಪತ್ನಿಯ ಮೊಬೈಲ್‌ಗೆ ದಂಡದ ಸಂದೇಶ ಬಂದಿದ್ದು, ಅದರೊಂದಿಗೆ ಕಳುಹಿಸಲಾಗಿದ್ದ ಫೋಟೋವನ್ನು ನೋಡಿದ ದಂಪತಿ ಅಚ್ಚರಿಗೊಂಡಿದ್ದಾರೆ.
ತಮಗೆ ಬಂದಿರುವ ಚಲನ್ ಹಾಗೂ ಅದರ ಫೋಟೋವನ್ನು ಸೌವಿಕ್ ದತ್ತಾ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ತಾವು ಒಬ್ಬರೇ ಸ್ಕೂಟರ್ ಚಲಾಯಿಸುತ್ತಿದ್ದರೂ, ಗಿಟಾರ್ ಬ್ಯಾಗ್ ಅನ್ನು ಹಿಂಬದಿ ಸವಾರ ಎಂದು ಎಐ ವ್ಯವಸ್ಥೆ ತಪ್ಪಾಗಿ ಗುರುತಿಸಿದೆ ಎಂದು ಅವರು ಬೆಂಗಳೂರು ಸಂಚಾರ ಪೊಲೀಸರ ಗಮನಕ್ಕೆ ತಂದಿದ್ದಾರೆ. ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಪ್ರಕರಣವನ್ನು ಪರಿಶೀಲಿಸಲಾಗುವುದು ಮತ್ತು ತಪ್ಪು ಚಲನ್ ಆಗಿದ್ದರೆ ಅದನ್ನು ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ 2022ರಿಂದ ಎಐ ಆಧಾರಿತ ಕ್ಯಾಮೆರಾಗಳನ್ನು ಬಳಸಲಾಗುತ್ತಿದ್ದು, ಕೆಲವೊಮ್ಮೆ ತಾಂತ್ರಿಕ ದೋಷಗಳಿಂದ ಇಂತಹ ತಪ್ಪುಗಳು ಸಂಭವಿಸಬಹುದು. ಸಾರ್ವಜನಿಕರು ಈ ರೀತಿಯ ತಪ್ಪು ಚಲನ್‌ಗಳ ಕುರಿತು ದೂರು ನೀಡಿದರೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.










