
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸತತ ಎರಡನೇ ದಿನವೂ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ ದೆಹಲಿ-ಎನ್‌ಸಿಆರ್ ಪ್ರದೇಶಕ್ಕೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಇನ್ನಷ್ಟು ಮಳೆಯಾಗುವ ಮುನ್ಸೂಚನೆ ನೀಡಿದೆ.
ಗುಡುಗು-ಮಿಂಚು ಸಹಿತ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆಯೂ ಸಲಹೆ ನೀಡಲಾಗಿದೆ. ಭಾನುವಾರದಿಂದ ಹವಾಮಾನ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ 8ರವರೆಗೆ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಣಹವೆಯ ವಾತಾವರಣ ಕಂಡುಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿ ಮಾತ್ರವಲ್ಲದೆ ನೆರೆಯ ಉತ್ತರ ಪ್ರದೇಶದ ನೋಯ್ಡಾ ಮತ್ತು ಘಾಜಿಯಾಬಾದ್, ಹರಿಯಾಣದ ಗುರುಗ್ರಾಮ್ ಹಾಗೂ ಫರಿದಾಬಾದ್‌ನಲ್ಲೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಇನ್ನು ಪೂರ್ವ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ಚಂಡೀಗಢ ಹಾಗೂ ಪಶ್ಚಿಮ ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದೆಹಲಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು. ಪ್ರಮುಖ ರಸ್ತೆಗಳು ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ವಾಹನ ಸಂಚಾರ ನಿಧಾನಗೊಂಡು, ಹಲವು ಕಡೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕನಾಟ್ ಪ್ಲೇಸ್, ಲುಟಿಯನ್ಸ್ ದೆಹಲಿ, ಐಟಿಒ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ವಾಹನ ಸವಾರರು ಸಂಚಾರ ದಟ್ಟಣೆಯಿಂದ ಪರದಾಡಿದರು. ಗುರುಗ್ರಾಮ್‌ನ ಸೈಬರ್ ಸಿಟಿ, ಶಂಕರ್ ಚೌಕ್ ಮತ್ತು ಶೀಟ್ಲಾ ಮಾತಾ ರಸ್ತೆಯಲ್ಲೂ ಭಾರೀ ವಾಹನ ದಟ್ಟಣೆ ಕಂಡುಬಂದಿತ್ತು.
ವಿಮಾನ ಹಾರಾಟಕ್ಕೂ ಮಳೆ ಅಡ್ಡಿ:
ಭಾರೀ ಮಳೆಯಿಂದ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಿತು. ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿದ್ದು, ಕೆಲವು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಯಿತು.
ವಿಮಾನ ನಿಲ್ದಾಣದ ಸಮೀಪದ ಸಂಪರ್ಕ ರಸ್ತೆ ಹಾಗೂ ಫೋರ್‌ಕೋರ್ಟ್ ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹವಾಗಿತ್ತು. ಬಳಿಕ ನೀರನ್ನು ತೆರವುಗೊಳಿಸಲಾಯಿತು ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಹವಾಮಾನ ವೈಪರೀತ್ಯದಿಂದ ವಿಮಾನಗಳ ಕಾರ್ಯಾಚರಣೆಗೆ ಅಡ್ಡಿಯುಂಟಾಗಿ ಕೆಲವು ವಿಮಾನಗಳ ಸಂಚಾರದಲ್ಲಿ ವಿಳಂಬ ಹಾಗೂ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ತಿಳಿಸಿದೆ.
ಮಳೆಯಿಂದ ದೆಹಲಿಯ ಗಾಳಿಯ ಗುಣಮಟ್ಟ ಸುಧಾರಣೆ:
ಭಾರೀ ಮಳೆಯ ಮತ್ತೊಂದು ಪರಿಣಾಮವಾಗಿ ದೆಹಲಿಯ ವಾಯು ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ಶುಕ್ರವಾರ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 71ರಷ್ಟಿತ್ತು.











