Friday, September 4, 2026
ಸುದ್ದಿ

ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಹೂವಿನಿಂದ ಕಂಗೊಳಿಸಿದ ಕೃಷ್ಣ ಮಠ – ಕಹಳೆ ನ್ಯೂಸ್

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ  ಹಿನ್ನೆಲೆಯಲ್ಲಿ ಕೃಷ್ಣನ ನಾಡು ಉಡುಪಿಯಲ್ಲಿ ಅಷ್ಟಮಿ ಸಂಭ್ರಮ ಜೋರಾಗಿತ್ತು. ಹಗಲೆಲ್ಲ ಉಪವಾಸವಿದ್ದು ಕೃಷ್ಣದೇವರ ಆರಾಧನೆಯಲ್ಲಿ ಭಕ್ತರು ತೊಡಗಿಸಿಕೊಂಡಿದ್ದರು. ನಗರದಾದ್ಯಂತ ವಿವಿಧ ವೇಷಗಳ ಕಲರವ ಕಂಡುಬಂತು.

ಜಾಹೀರಾತು

ಕೃಷ್ಣದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜ್ಯದ ವಿವಿಧೆಡೆಯಿಂದ ಭಕ್ತರು ಉಡುಪಿಗೆ ಆಗಮಿಸಿ ಕೃಷ್ಣ ದೇವರ ದರ್ಶನ ಪಡೆದರು. ಮಧ್ಯರಾತ್ರಿ 12 ಗಂಟೆ 12 ನಿಮಿಷಕ್ಕೆ ಕೃಷ್ಣದೇವರಿಗೆ ಅರ್ಘ್ಯ ಸಮರ್ಪಣೆ ನಡೆಯಲಿದೆ. ಕೃಷ್ಣ ಮಠದಲ್ಲಿ ಮುದ್ದುಕೃಷ್ಣ ಸ್ಪರ್ಧೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕೃಷ್ಣದೇವರಿಗೆ ಅರ್ಪಿಸಲು ಭಕ್ತರು ಬಗೆಬಗೆಯ ಉಂಡೆ, ಚಕ್ಕುಲಿ ಸೇರಿದಂತೆ ಸಾಂಪ್ರದಾಯಿಕ ತಿನಿಸುಗಳನ್ನು ಸಿದ್ಧಪಡಿಸಿದ್ದಾರೆ. ಹೂವಿನ ಅಲಂಕಾರದಿಂದ ಕೃಷ್ಣ ಮಠ ಕಂಗೊಳಿಸಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ ಅಷ್ಟಮಿ ಎಂದರೆ ಹುಲಿ ವೇಷದ ಸಂಭ್ರಮಕ್ಕೂ ವಿಶೇಷ ಸ್ಥಾನ. ಈ ಬಾರಿ 40ಕ್ಕೂ ಅಧಿಕ ಹುಲಿ ವೇಷ ತಂಡಗಳು ನಗರದಲ್ಲಿ ಸಂಚರಿಸಲಿವೆ. ಮಹಿಳೆಯರೂ ಹುಲಿ ವೇಷ ಧರಿಸಿ ಹೆಜ್ಜೆ ಹಾಕುತ್ತಿರುವುದು ಅಷ್ಟಮಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿದೆ. ಉಡುಪಿಯ ದರ್ಪಣ ಮಹಿಳಾ ತಂಡದ ಹುಲಿವೇಷ ನರ್ತನ ಜನರ ಗಮನ ಸೆಳೆದಿದೆ.

ಕೋರಂಗರಪಾಡಿಯ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಲೋಬಾನ ಪೂಜೆ ನೆರವೇರಿಸಿದ ಬಳಿಕ ಮಹಿಳಾ ಹುಲಿ ವೇಷಧಾರಿಗಳು ಕುಣಿದು ಕುಪ್ಪಳಿಸಿದರು. ತಂಡದೊಂದಿಗೆ ಯುವತಿಯರೂ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಮುಂದಿನ ಎರಡು ದಿನಗಳ ಕಾಲ ಉಡುಪಿ ನಗರದೆಲ್ಲೆಡೆ ಮಹಿಳಾ ಹುಲಿ ವೇಷಧಾರಿಗಳ ಸಂಚಾರ, ನರ್ತನ ಹಾಗೂ ವಾದ್ಯಗಳ ಸದ್ದು ಮೊಳಗಲಿದೆ. ನಾಳೆ ಉಡುಪಿಯಲ್ಲಿ ಶ್ರೀಕೃಷ್ಣ ಲೀಲೋತ್ಸವ, ವಿಟ್ಲಪಿಂಡಿ ಮಹೋತ್ಸವ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ.