
ಬೆಂಗಳೂರು/ಮೈಸೂರು: ಈ ಬಾರಿಯ ದಸರಾ ಮಹೋತ್ಸವದಲ್ಲಿ ಅಭಿಮನ್ಯು ಆನೆ ಭಾಗವಹಿಸಲು ಕೊನೆಗೂ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಒಟ್ಟಿನಲ್ಲಿ ಕೋಟ್ಯಂತರ ಅಭಿಮಾನಿಗಳ ಆಸೆಯಂತೆ 6 ಬಾರಿ ಅಂಬಾರಿ ಹೊತ್ತ ಅಭಿಮನ್ಯು ಈ ಬಾರಿ ನಿಶಾನೆ ಆನೆಯಾಗಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿದ್ದಾನೆ.

ಪ್ರಕಟಣೆಯಲ್ಲಿ ಏನಿದೆ?
ಮೈಸೂರು ದಸರಾ ಕರ್ನಾಟಕದ ನಾಡಹಬ್ಬವಾಗಿದ್ದು, ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ವೈಭವವನ್ನು ವಿಶ್ವದಾದ್ಯಂತ ಸಾರುವ ಐತಿಹಾಸಿಕ ಉತ್ಸವವಾಗಿದೆ. ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಉತ್ಸವದಲ್ಲಿ ದಸರಾ ಗಜಪಡೆಯ ಆನೆಗಳು ವರ್ಷಗಳಿಂದಲೂ ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ. ಈ ಮಹತ್ವದ ದಸರಾ ಪರಂಪರೆಯಲ್ಲಿ ಅಭಿಮನ್ಯು ಆನೆಯ ಸೇವೆ ಅತ್ಯಂತ ವಿಶೇಷ ಹಾಗೂ ಸ್ಮರಣೀಯವಾಗಿದೆ.
ಹಲವು ವರ್ಷಗಳ ಕಾಲ ದಸರಾ ಮಹೋತ್ಸವದಲ್ಲಿ ಭಾಗವಹಿಸಿ, ಅಂಬಾರಿ ಹೊರುವ ಜವಾಬ್ದಾರಿಯನ್ನು ಅತ್ಯಂತ ಶಿಸ್ತು, ಧೈರ್ಯ ಹಾಗೂ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಅಭಿಮನ್ಯು ಆನೆ ನಾಡಿನ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರವಾಗಿದೆ.
ಅಭಿಮನ್ಯುವಿನ ದೀರ್ಘಕಾಲದ ಅಮೂಲ್ಯ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಇತ್ತೀಚೆಗೆ ಆಯೋಜಿಸಲಾದ ಅಭಿಮನ್ಯು ಆನೆಯ ಬೀಳ್ಕೊಡುಗೆ/ಗೌರವ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಹಾಗೂ ಅಚ್ಚುಕಟ್ಟಾಗಿ ನೆರವೇರಿದ್ದು, ಸಾರ್ವಜನಿಕರು ಹಾಗೂ ದಸರಾ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಕಾರ್ಯಕ್ರಮವು ಅಭಿಮನ್ಯುವಿನ ಸೇವೆಗೆ ಸಲ್ಲಿಸಿದ ಗೌರವದ ಪ್ರತೀಕವಾಗಿದೆ.











