
ನೇಪಾಳದಲ್ಲಿ ಬುಧವಾರ (ಆ.26) ಸಂಭವಿಸಿದ ಗ್ಲೇಶಿಯಲ್ ಸರೋವರ ಔಟ್‌ಬರ್ಸ್ಟ್ ಫ್ಲಡ್ (GLOF) ಅಂದ್ರೆ ಹಿಮನದಿ ಸರೋವರ ಒಡೆದು ಉಂಟಾದ ಹಠಾತ್ ಪ್ರವಾಹದ ಘಟನೆ ಭಾರತವನ್ನ ತನ್ನ ವಿಪತ್ತು ನಿರ್ವಹಣೆ ಮತ್ತು ಮುನ್ನೆಚ್ಚರಿಕಾ ಸಿದ್ಧತೆಗಳತ್ತ ಕಣ್ಣು ಹಾಯಿಸುವಂತೆ ಮಾಡಿದೆ.
ಹಿಮಾಲಯ ಪ್ರದೇಶದಲ್ಲಿ ಭವಿಷ್ಯದಲ್ಲಿ ಭಾರೀ ಅಪಾಯ ತಂದೊಡ್ಡಬಹುದಾದ ಸುಮಾರು 200 ಗ್ಲೇಶಿಯಲ್ ಸರೋವರಗಳು ಇವೆ ಎಂಬ ಅಂಶವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ಇಂತಹ ಅಪಾಯಗಳನ್ನ ಎದುರಿಸಲು ತಕ್ಷಣದ ಕ್ರಮಗಳ ಅಗತ್ಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಹಿಮಾಲಯ ಸರೋವರಗಳಿಂದ ಎಷ್ಟು ಅಪಾಯ?
ಸರ್ಕಾರಿ ಸಮೀಕ್ಷೆಗಳ ಪ್ರಕಾರ, ಸಂಪೂರ್ಣ ಹಿಮಾಲಯ ಶ್ರೇಣಿಯಲ್ಲಿ ಸುಮಾರು 7,500 ಹಿಮನದಿ ಸರೋವರಗಳು ಇವೆ. ಇದು ಪರಿಸರ ಮತ್ತು ವಿಪತ್ತು ನಿರ್ವಹಣೆಯ ದೃಷ್ಟಿಯಿಂದ ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಇವುಗಳಲ್ಲಿ ಸುಮಾರು 10 ಪ್ರತಿಶತ ಸರೋವರಗಳು ಸಿಕ್ಕಿಂನಲ್ಲೇ ಇವೆ. ಸಿಕ್ಕಿಂನಲ್ಲಿರುವ 25 ಸರೋವರಗಳನ್ನು ಅತ್ಯಂತ ಅಪಾಯಕಾರಿ ಎಂದು ಗುರುತಿಸಲಾಗಿದೆ.
ಮತ್ತೊಂದು ಅಧ್ಯಯನದ ಪ್ರಕಾರ, ಸುಮಾರು 4,700 ಹಿಮನದಿ ಸರೋವರಗಳು ಗಂಗಾ ನದಿ ಜಲಾನಯನ ಪ್ರದೇಶದಲ್ಲಿವೆ. ಈ ಪ್ರದೇಶದ ಜಲಾನಯನ ವ್ಯಾಪ್ತಿ 2.5 ಲಕ್ಷ ಚದರ ಕಿಮೀಗಿಂತಲೂ ಹೆಚ್ಚು ಇದೆ. ಹೀಗಾಗಿ, ಈ ಸರೋವರಗಳಲ್ಲಿ ಯಾವುದಾದರೂ ಒಂದರ ತಡೆಗೋಡೆ ಒಡೆದರೂ, ಅದರ ಪರಿಣಾಮ ಪರ್ವತ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ, ಕೆಳಭಾಗದ ಸಮತಟ್ಟು ಪ್ರದೇಶಗಳಲ್ಲೂ ಭಾರೀ ಪ್ರವಾಹ ಮತ್ತು ವಿನಾಶಕ್ಕೆ ಕಾರಣವಾಗಬಹುದು.
2023ರಲ್ಲಿ ಸಿಕ್ಕಿಂ ಕಂಡಿತ್ತು ಭೀಕರ ದುರಂತ
ಇತ್ತೀಚಿನ ವರ್ಷಗಳಲ್ಲಿ ಭಾರತವು ಹಿಮನದಿ ಸರೋವರಕ್ಕೆ ಸಂಬಂಧಿಸಿದ ಅತ್ಯಂತ ಭೀಕರ ದುರಂತಗಳಲ್ಲಿ ಒಂದನ್ನ ನೇರವಾಗಿ ಎದುರಿಸಿತ್ತು. 2023ರ ಅಕ್ಟೋಬರ್ 3ರಂದು ಮಧ್ಯರಾತ್ರಿಯ ವೇಳೆಯಲ್ಲಿ, ಸಿಕ್ಕಿಂನ ಸೌತ್ ಲ್ಹೋನಕ್ ಸರೋವರದಲ್ಲಿ ಹಿಮನದಿ ಮತ್ತು ಬಂಡೆಗಳ ಬೃಹತ್ ಭಾಗವೊಂದು ಕುಸಿದು ಬಿದ್ದಿತ್ತು. ಸುಮಾರು 14.7 ಮಿಲಿಯನ್ ಘನ ಮೀಟರ್ (ಕ್ಯೂಬಿಕ್ ಮೀಟರ್) ಪ್ರಮಾಣದ ವಸ್ತುಗಳು ಏಕಾಏಕಿ ಕುಸಿದಿದ್ದವು.
ಇದರಿಂದ ಸರೋವರದಲ್ಲಿ ಸುಮಾರು 20 ಮೀಟರ್ ಎತ್ತರದ ವಿನಾಶಕಾರಿ ಅಲೆ ಎದ್ದಿತ್ತು. ಈ ಅಲೆ ತನ್ನ ಮಾರ್ಗದಲ್ಲಿದ್ದ ಹಲವು ಜಲವಿದ್ಯುತ್ ಯೋಜನೆಗಳು ಮತ್ತು ವಸತಿ ಪ್ರದೇಶಗಳನ್ನ ಕೊಚ್ಚಿಕೊಂಡು ಹೋಗಿತ್ತು. ಈ ಘಟನೆ ಹಿಮಾಲಯ ಪ್ರದೇಶದಲ್ಲಿರುವ ಹಿಮನದಿ ಸರೋವರಗಳ ಅಪಾಯವನ್ನ ಇಡೀ ವಿಶ್ವದ ಗಮನಕ್ಕೆ ತಂದಿತ್ತು.
ಅಪಾಯ ಹೇಗೆ ಹೆಚ್ಚುತ್ತದೆ?
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA)ದ ಸದಸ್ಯ ಕೃಷ್ಣವತ್ಸ ಅವರ ಪ್ರಕಾರ, ನೇಪಾಳದಲ್ಲಿ ಸಂಭವಿಸಿದ ಘಟನೆ ಹಿಮಾಲಯದಲ್ಲಿ ಎದುರಾಗುತ್ತಿರುವ ವಿಪತ್ತುಗಳ ಹೊಸ ಮತ್ತು ಹೆಚ್ಚು ಸಂಕೀರ್ಣ ಸ್ವರೂಪವನ್ನು ತೋರಿಸುತ್ತದೆ. ಈ ಘಟನೆಯ ವೈಜ್ಞಾನಿಕ ಕಾರಣಗಳ ಕುರಿತು ಇನ್ನೂ ತನಿಖೆ ನಡೆಯುತ್ತಿದೆಯಾದರೂ, ಇಂತಹ ದುರಂತಗಳು ಹಲವು ಬಾರಿ ಚೈನ್ ರಿಯಾಕ್ಷನ್‌ನಂತೆ ಸಂಭವಿಸುತ್ತವೆ.
ಮೊದಲು ಹಿಮ ಅಥವಾ ಬಂಡೆಗಳು ಕುಸಿಯಬಹುದು. ಇದರಿಂದ ಭಾರೀ ಪ್ರಮಾಣದ ಮಣ್ಣು ಮತ್ತು ಕಲ್ಲಿನ ಅವಶೇಷಗಳು ಕೆಳಕ್ಕೆ ಹರಿಯುತ್ತವೆ. ಕೆಲವೊಮ್ಮೆ ಇವುಗಳ ಪರಿಣಾಮವಾಗಿ ತಾತ್ಕಾಲಿಕ ಸರೋವರ ನಿರ್ಮಾಣವಾಗುತ್ತದೆ. ಬಳಿಕ ಆ ಸರೋವರದ ತಡೆಗೋಡೆ ಒಡೆದು, ಏಕಾಏಕಿ ಭಾರೀ ಪ್ರವಾಹ ಉಂಟಾಗಬಹುದು. ಈ ಎಲ್ಲಾ ಪ್ರಕ್ರಿಯೆ ಅತ್ಯಂತ ವೇಗವಾಗಿ ನಡೆಯುವುದರಿಂದ, ಕೆಳಭಾಗದಲ್ಲಿ ವಾಸಿಸುವ ಜನರಿಗೆ ಮುನ್ನೆಚ್ಚರಿಕೆ ನೀಡಲು ಬಹಳ ಕಡಿಮೆ ಸಮಯ ಮಾತ್ರ ಲಭ್ಯವಾಗುತ್ತದೆ.
195 ಅಪಾಯಕಾರಿ ಸರೋವರಗಳನ್ನ ಗುರುತಿಸಿದ ಭಾರತ
NDMAಯ ಮಾಜಿ ಸದಸ್ಯ ಸಯ್ಯದ್ ಸಫಿ ಅಹ್ಸಾನ್ ರಿಜ್ವಿ ಅವರ ಪ್ರಕಾರ, ಭಾರತದ ʻನ್ಯಾಷನಲ್ GLOF ರಿಸ್ಕ್ ಮಿಟಿಗೇಶನ್ ಪ್ರೋಗ್ರಾಂʼ ಅಡಿಯಲ್ಲಿ ಅಪಾಯಕಾರಿಯಾಗಿರುವ 195 ಸರೋವರಗಳನ್ನು ಗುರುತಿಸಲಾಗಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ಸರೋವರಗಳ ಅಪಾಯವನ್ನ ಕಡಿಮೆ ಮಾಡಲು ಐದು ಪ್ರಮುಖ ಕ್ಷೇತ್ರಗಳಲ್ಲಿ ತಕ್ಷಣ ಮತ್ತು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಬೇಕಿದೆ.
* ಅಪಾಯದ ಮೌಲ್ಯಮಾಪನ
* ನಿರಂತರ ಮೇಲ್ವಿಚಾರಣೆ
* ಮುಂಚಿತವಾಗಿಯೇ ಎಚ್ಚರಿಕೆ ವಹಿಸುವುದು
* ಅಪಾಯ ಕಡಿಮೆ ಮಾಡುವ ಕ್ರಮಗಳು
* ಸಮುದಾಯದ ಜಾಗೃತಿ
ಈ ಐದು ಅಂಶಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ, ಗ್ಲೇಶಿಯಲ್ ಸರೋವರಗಳಿಂದ ಉಂಟಾಗಬಹುದಾದ ಜೀವಹಾನಿ ಮತ್ತು ಆಸ್ತಿ ನಷ್ಟವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
ಸಿಕ್ಕಿಂ ದುರಂತದ ಬಳಿಕ ಕೇಂದ್ರದ ಮಹತ್ವದ ಕ್ರಮ
ಸಿಕ್ಕಿಂನಲ್ಲಿ ಸಂಭವಿಸಿದ ಭೀಕರ ದುರಂತದ ಬಳಿಕ, ಕೇಂದ್ರ ಸರ್ಕಾರವು ಗ್ಲೇಶಿಯಲ್ ಸರೋವರಗಳ ಅಪಾಯಗಳನ್ನು ಎದುರಿಸಲು ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮನ್ವಯ ಸಮಿತಿಯನ್ನು ರಚಿಸಿತ್ತು. ಅನೇಕ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳನ್ನು ಒಟ್ಟುಗೂಡಿಸಿ ಅಪಾಯಕಾರಿ ಸರೋವರಗಳ ಸಮೀಕ್ಷೆ ನಡೆಸುವುದು ಹಾಗೂ ಹೆಚ್ಚಿನ ಅಪಾಯವಿರುವ ಸರೋವರಗಳನ್ನು ಗುರುತಿಸುವುದು ಈ ಸಮಿತಿಯ ಪ್ರಮುಖ ಉದ್ದೇಶವಾಗಿತ್ತು.
ಇದರ ಜೊತೆಗೆ, ಗ್ಲೇಶಿಯಲ್ ಸರೋವರಗಳ ಅಪಾಯ ಹೆಚ್ಚಿರುವ ಹಿಮಾಲಯದ 4 ರಾಜ್ಯಗಳಿಗೆ ನ್ಯಾಷನಲ್ GLOF ರಿಸ್ಕ್ ಮಿಟಿಗೇಶನ್ ಪ್ರೋಗ್ರಾಂ ಅಡಿಯಲ್ಲಿ ಕೇಂದ್ರ ಸರ್ಕಾರ 150 ಕೋಟಿ ರೂಪಾಯಿ ಅನುದಾನವನ್ನೂ ಮಂಜೂರು ಮಾಡಿದೆ.
ಮೂರು ಹಂತದಲ್ಲಿ ರಕ್ಷಣಾ ತಂತ್ರಕ್ಕೆ ಒತ್ತು
ನವೆಂಬರ್ 2024ರಲ್ಲಿ ನಡೆದ ವಿಪತ್ತು ಅಪಾಯ ಕಡಿತ (DRR) ಸಮನ್ವಯ ಸಮಿತಿಯ ಮೊದಲ ಸಭೆಯಲ್ಲಿ, ಮೂರು ಪ್ರಮುಖ ಅಂಶಗಳ ಆಧಾರದ ಮೇಲೆ ಕಾರ್ಯತಂತ್ರ ರೂಪಿಸಲು ಒಪ್ಪಿಗೆ ನೀಡಲಾಗಿತ್ತು.
* ಅಪಾಯದ ಮೌಲ್ಯಮಾಪನ
* ನಿರಂತರ ಮೇಲ್ವಿಚಾರಣೆ
* ಅಪಾಯ ಕಡಿಮೆ ಮಾಡುವ ಕ್ರಮಗಳು
ಅಂದರೆ, ಅಪಾಯಕಾರಿ ಸರೋವರಗಳನ್ನು ಕೇವಲ ಗುರುತಿಸುವುದಷ್ಟೇ ಅಲ್ಲ ಅವುಗಳ ಸ್ಥಿತಿಯನ್ನು ನಿರಂತರವಾಗಿ ಗಮನಿಸಿ, ಅಪಾಯ ಎದುರಾದ ಸಂದರ್ಭದಲ್ಲಿ ತಕ್ಷಣ ಕ್ರಮ ಕೈಗೊಳ್ಳುವ ವ್ಯವಸ್ಥೆಯನ್ನು ಬಲಪಡಿಸುವುದು ಇದರ ಉದ್ದೇಶ.
‘A-ಕ್ಯಾಟಗರಿ’ ಸರೋವರಗಳ ಸಮೀಕ್ಷೆ
ಇದಕ್ಕೂ ಮುನ್ನ, A-ಕ್ಯಾಟಗರಿಗೆ ಸೇರಿದ ಎಲ್ಲಾ ಸರೋವರಗಳ ಅಪಾಯವನ್ನು ಮೌಲ್ಯಮಾಪನ ಮಾಡಲು ಹಲವು ಸರ್ಕಾರಿ ಸಂಸ್ಥೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿದ್ದವು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. ಈ ಜಂಟಿ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕೇಂದ್ರ ಜಲ ಆಯೋಗ (CWC), ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI), C-DAC, ITBP ಮತ್ತು ಭಾರತೀಯ ಸೇನೆಯ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
ಈ ಸಮಿತಿಗಳು ನಿಯಮಿತವಾಗಿ ಸಭೆ ನಡೆಸಿ ಸ್ಥಳೀಯ ಮಟ್ಟದಿಂದ ಲಭ್ಯವಾಗುವ ಮಾಹಿತಿಯನ್ನು ಪರಿಶೀಲಿಸುತ್ತಿದ್ದವು. ಈ ಪ್ರತಿಕ್ರಿಯೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯುಕ್ತ ಕಾರ್ಯತಂತ್ರದ ಭಾಗವಾಗಿ ಬಳಸಿಕೊಳ್ಳಲಾಗುತ್ತಿತ್ತು. ಆದರೆ, ಈ ಯೋಜನೆಗಳ ಅಡಿಯಲ್ಲಿ ನೆಲಮಟ್ಟದಲ್ಲಿ ಇದುವರೆಗೆ ಕೈಗೊಳ್ಳಲಾಗಿರುವ ಮುಂದಿನ ಕ್ರಮಗಳ ಕುರಿತು ಇನ್ನಷ್ಟು ಸಮಗ್ರ ಮಾಹಿತಿ ಇನ್ನೂ ಹೊರಬರಬೇಕಿದೆ.
ಭಾರತಕ್ಕೆ ಏಕೆ ಎಚ್ಚರಿಕೆ?
ಹಿಮಾಲಯ ಪ್ರದೇಶದಲ್ಲಿನ ಗ್ಲೇಶಿಯಲ್ ಸರೋವರಗಳು ಕೇವಲ ಪರ್ವತ ಪ್ರದೇಶಗಳಿಗೆ ಮಾತ್ರ ಅಪಾಯಕಾರಿಯಲ್ಲ. ಅವುಗಳಿಂದ ಉಂಟಾಗುವ ಹಠಾತ್ ಪ್ರವಾಹಗಳು ನದಿಗಳ ಮೂಲಕ ಕೆಳಭಾಗದ ಪ್ರದೇಶಗಳಿಗೆ ವೇಗವಾಗಿ ಹರಿದು, ಜಲವಿದ್ಯುತ್ ಯೋಜನೆಗಳು, ಸೇತುವೆಗಳು, ರಸ್ತೆಗಳು, ಗ್ರಾಮಗಳು ಮತ್ತು ನಗರ ಪ್ರದೇಶಗಳಿಗೂ ಭಾರೀ ಹಾನಿ ಉಂಟುಮಾಡಬಹುದು.
ನೇಪಾಳದ ಇತ್ತೀಚಿನ ಪ್ರವಾಹ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಮೊಳಗಿಸಿದ್ದು, ಹಿಮಾಲಯದ ಗ್ಲೇಶಿಯಲ್ ಸರೋವರಗಳ ನಿರಂತರ ಮೇಲ್ವಿಚಾರಣೆ, ಅತ್ಯಾಧುನಿಕ ಮುನ್ನೆಚ್ಚರಿಕೆ ವ್ಯವಸ್ಥೆ ಮತ್ತು ಸ್ಥಳೀಯ ಸಮುದಾಯಗಳ ಸಿದ್ಧತೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನು ತೋರಿಸಿದೆ.
ಒಂದು ಸರೋವರದ ತಡೆಗೋಡೆ ಒಡೆದರೂ ಅದರ ಪರಿಣಾಮ ಸಾವಿರಾರು ಕಿಲೋಮೀಟರ್ ದೂರದ ಜನಜೀವನದ ಮೇಲೂ ಬೀಳಬಹುದು. ಹೀಗಾಗಿ, ಗ್ಲೇಶಿಯಲ್ ಸರೋವರಗಳ ಅಪಾಯವನ್ನು ಎದುರಿಸುವುದು ಈಗ ಕೇವಲ ಪರಿಸರದ ಪ್ರಶ್ನೆಯಲ್ಲ, ಇದು ಭಾರತಕ್ಕೆ ವಿಪತ್ತು ನಿರ್ವಹಣೆ ಮತ್ತು ರಾಷ್ಟ್ರೀಯ ಭದ್ರತೆಯ ಪ್ರಮುಖ ಸವಾಲಾಗಿದೆ.











