ಮಂಗಳೂರಿನ ನರ್ಸ್‌ಗೆ “ಪೊಲೀಸರಿಗೆ ಶರಣಾಗೋದಕ್ಕಿಂತ ಮುಂಚೆ ನಿನ್ನ ತಲೆ ತೆಗೀತೀನಿ” ಎಂದು ವಾಟ್ಸಾಪ್‌ನಲ್ಲಿ ಜೀವ ಬೆದರಿಕೆ – ಕಹಳೆ ನ್ಯೂಸ್

ಮಂಗಳೂರು : ತನ್ನ ಮೇಲೆ ದೌರ್ಜನ್ಯವೆಸಗಿದವನ ವಿರುದ್ಧ ಯುವತಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದೇ ಕಾರಣಕ್ಕೆ ಆರೋಪಿ ಆಕೆಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ ಯುವತಿಯ ಸ್ನೇಹಿತೆಯರ ಮೇಲೂ ಹಲ್ಲೆ ನಡೆಸಿದ್ದಾನೆ. ಇದೆಲ್ಲದರ ಬಳಿಕವೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಪುತ್ತೂರು ಮೂಲದ ನರ್ಸ್ ನಂದಿನಿ ಎಂಬುವವರು ಮಂಗಳೂರಿನ ನೀರುಮಾರ್ಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಳೆದ ಆಗಸ್ಟ್ 16ರಂದು ನಂದಿನಿ ಮೈಸೂರಿಗೆ ತೆರಳುವಾಗ, ತಮ್ಮ ಮನೆಯಲ್ಲಿದ್ದ ನಾಯಿಗೆ ಊಟ ಹಾಕಲು ಕೀಯನ್ನು ಸ್ನೇಹಿತೆ ಚಂದನಾಗೆ ನೀಡಿದ್ದರು. ಆಗಸ್ಟ್ 17ರಂದು ಚಂದನಾ ತನ್ನ ಮತ್ತೊಬ್ಬ ಸ್ನೇಹಿತೆ, ಕೇರಳ ಮೂಲದ ನರ್ಸ್ ಆದಿತ್ಯಾ ಜೊತೆ ನಂದಿನಿ ಮನೆಗೆ ತೆರಳಿದ್ದರು.ಸಮುದ್ರ ರವಾನೆ ಕಾಯ್ದಿರಿಸುವುದು
ಈ ವೇಳೆ, ಆದಿತ್ಯಾ ನೀಡಿದ ಮಾಹಿತಿ ಆಧರಿಸಿ ಅಲ್ಲಿಗೆ ಬಂದ ಆರೋಪಿ ನೌಶದ್, ಮನೆಗೆ ಅಕ್ರಮವಾಗಿ ಪ್ರವೇಶಿಸಿ ಚಂದನಾ ಮತ್ತು ಆದಿತ್ಯಾಗೆ ಅಶ್ಲೀಲವಾಗಿ ನಿಂದಿಸಿ ಗಲಾಟೆ ಮಾಡಿದ್ದಾನೆ. ಈ ವಿಷಯ ತಿಳಿದು ನಂದಿನಿ ಕರೆ ಮಾಡಿದಾಗ, ಫೋನ್ ಸ್ವೀಕರಿಸಿದ ನೌಶದ್ ನಂದಿನಿಗೂ ಅಶ್ಲೀಲವಾಗಿ ಬೈದು ಜೀವಬೆದರಿಕೆ ಹಾಕಿದ್ದಾನೆ.
ಆರೋಪಿ ನೌಶದ್ ವಿರುದ್ಧ ನಂದಿನಿ ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದರು. ದೂರು ನೀಡಿದ ವಿಚಾರ ತಿಳಿಯುತ್ತಿದ್ದಂತೆಯೇ ಕೋಪಗೊಂಡ ನೌಶದ್, ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿ “ನನಗೆ ಯಾವುದಕ್ಕೂ ಹೆದರಿಕೆ ಇಲ್ಲ. ಪೊಲೀಸರಿಗೆ ಶರಣಾಗೋದಕ್ಕಿಂತ ಮುಂಚೆ ನಿನ್ನ ತಲೆ ತೆಗೀತೀನಿ, ಕೊಲ್ಲದೇ ಬಿಡುವುದಿಲ್ಲ!” ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದ. ಇದರಿಂದ ತೀವ್ರ ಭೀತಿಗೊಳಗಾದ ನಂದಿನಿ, ಆಗಸ್ಟ್ 20ರಂದು ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಳು.
ದೂರು ನೀಡಿ 10 ದಿನಗಳಾದರೂ ಪೊಲೀಸರು ಆರೋಪಿ ನೌಶದ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಭಯಗೊಂಡ ನಂದಿನಿ, ರಕ್ಷಣೆ ಕೋರಿ ವಿಶ್ವ ಹಿಂದೂ ಪರಿಷತ್ (VHP) ಮತ್ತು ದುರ್ಗಾವಾಹಿನಿ ಮುಖಂಡರನ್ನು ಸಂಪರ್ಕಿಸಿದ್ದಾಳೆ.
ಈ ವೇಳೆ ಮತ್ತೊಬ್ಬ ನರ್ಸ್ ಆದಿತ್ಯಾಳನ್ನೂ ವಿಎಚ್‌ಪಿ ಮುಖಂಡರು ಸಂಪರ್ಕಿಸಿದ್ದು, “ನೌಶದ್ ಬಳಿ ನನ್ನ ಫೋಟೋ, ವಿಡಿಯೋಗಳಿವೆ” ಎಂದು ಆದಿತ್ಯಾ ಹೇಳಿಕೊಂಡಿದ್ದಾಳೆ. ಈ ಆಧಾರದ ಮೇಲೆ ನೌಶದ್ ಆಕೆಯ ಫೋಟೋ-ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದನಾ ಎಂಬ ಅನುಮಾನ ವ್ಯಕ್ತವಾಗಿದೆ. ಸದ್ಯ ಆದಿತ್ಯಾ ಕೇರಳಕ್ಕೆ ತೆರಳಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.
ಇನ್ನೊಂದೆಡೆ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆಯೇ ಆಸ್ಪತ್ರೆ ಆಡಳಿತ ಮಂಡಳಿಯು ದೂರು ನೀಡಿದ ನಂದಿನಿ ಹಾಗೂ ಆದಿತ್ಯಾ ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಿ ಆದೇಶಿಸಿದೆ. “ಮಂಗಳೂರಿನಲ್ಲಿ ನಡೆಯುತ್ತಿರುವ ಇತ್ತೀಚಿನ ಘಟನೆಗಳನ್ನು ನೋಡಿದರೆ ಹೊರಗೆ ಓಡಾಡಲು ಭಯವಾಗುತ್ತಿದೆ, ನಮಗೆ ಸೂಕ್ತ ರಕ್ಷಣೆ ಬೇಕು” ಎಂದು ನಂದಿನಿ ಕಣ್ಣೀರು ಹಾಕಿದ್ದಾರೆ.











