
ಮಂಗಳೂರು : ಏಳುಪಟ್ಟ ಮೊಗವೀರ ಸಂಯುಕ್ತ ಸಭಾ (ಕದ್ರಿ) ಇದರ ವತಿಯಿಂದ ಸಾಮೂಹಿಕ ಸಮುದ್ರ ಪೂಜೆಯು ಆಗಸ್ಟ್ ತಾರೀಕು 23 ರಂದು ಶುಕ್ರವಾರ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ನೆರವೇರಿತು.
ಆರಂಭದಲ್ಲಿ ಭಜನಾ ಸಂಕೀರ್ತನೆ ಹಾಗೂ ಶ್ರೀ ಮಹಾಲಕ್ಷ್ಮೀ ಮಾತೆಗೆ ಪೂಜೆ ನಡೆಯಿತು. ಆ ಬಳಿಕ ಕದ್ರಿ ಕದಳೀ ಮಠದ ಮರಾಧೀಶ ಪೂಜ್ಯ ರಾಜಯೋಗಿ ನಿರ್ಮಲಾನಾಥ್ ಜೀ ಮಹಾರಾಜ್‌ರವರ ನೇತೃತ್ವದಲ್ಲಿ ಸಮುದ್ರಕ್ಕೆ ಹಾಲು-ಹಣ್ಣು ಹಂಪಲುಗಳನ್ನು ಸಮರ್ಪಿಸಲಾಯಿತು. ಬೋಳೂರು ಮೊಗವೀರ ಮಹಾಸಭಾ ಉಪಾಧ್ಯಕ್ಷ ರಂಜನ್ ಕಾಂಚನ್ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಪವರ್ ಲಿಪ್ಪರ್ ಸದಾನಂದ ಅಮಿನ್, ಕುದ್ರೋಳಿ ಮುಖ್ಯ ಅತಿಥಿಗಳಾಗಿದ್ದರು.
ಸಭಾದ ಅಧ್ಯಕ್ಷ ಬೋಳಾರ ಸುಭಾಶ್ಚಂದ್ರ ಕಾಂಚನ್ ಆತಿಥಿಗಳನ್ನು ಹಾಗೂ ವಿವಿಧ ಗ್ರಾಮಗಳ ಗುರಿಕಾರರು ಮತ್ತು ಸದಸ್ಯರನ್ನು ಸ್ವಾಗತಿಸಿದರು. ‘ಪೂರ್ವಜರು ಶತಮಾನಗಳಿಂದ ಆಚರಿಸಿಕೊಂಡು ಬಂದಂತೆ ಈ ಬಾರಿಯೂ ಮೀನುಗಾರಿಕೆಯ ಋತು ಆರಂಭದಲ್ಲಿ ಗಂಗಾಮಾತೆಗೆ ಹಾಲು-ಹಣ್ಣು ಅರ್ಪಿಸಿ, ಸಾಮೂಹಿಕವಾಗಿ ಸಮುದ್ರ ಪೂಜೆ ನೆರವೇರಿಸಲಾಗುತ್ತಿದೆ’ ಎಂದು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಯಶವಂತ ಬೋಳೂರು ವಂದಿಸಿದರು.
ಪದಾಧಿಕಾರಿಗಳಾದ ಸುರೇಶ್ ಸುವರ್ಣ ನೀರೇಶ್ವಾಲ್ಯ, ಶ್ಯಾಮಸುಂದರ್ ಕಾಂಚನ್, ಕುದ್ರೋಳಿ, ಕದ್ರಿ ಕ್ಷೇತ್ರದ ಪ್ರತಿನಿಧಿ ನಾರಾಯಣ ಕೋಟ್ಯಾನ್ ಬೊಕ್ಕಪಟ್ಟ, ವಿವಿಧ ಗ್ರಾಮಗಳ ಗುರಿಕಾರರು, ಪ್ರತಿನಿಧಿಗಳು, ಸದಸ್ಯರು ಹಾಗೂ ಮಹಿಳಾ ಸಂಘಗಳ ಸದಸ್ಯೆಯರು ಈ ಸಂದರ್ಭ ಉಪಸ್ಥಿತರಿದ್ದರು.











