Recent Posts

Thursday, August 20, 2026
ಸುದ್ದಿ

ಇ ಸ್ವತ್ತು 2.0 ತಂತ್ರಾಂಶದಿಂದ ನಮೂನೆ 11ಎ, 11ಬಿ ಪ್ರಕ್ರಿಯೆ ವಿಳಂಬ: ಸರ್ಕಾರದ ನಿರ್ಲಕ್ಷ್ಯಕ್ಕೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆಕ್ಷೇಪ – ಕಹಳೆ ನ್ಯೂಸ್

ಬೆಂಗಳೂರು: ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅತ್ಯಂತ ಅಗತ್ಯವಾಗಿರುವ ನಮೂನೆ 11ಎ ಹಾಗೂ 11ಬಿ ಪ್ರಕ್ರಿಯೆಗಳು ಇ ಸ್ವತ್ತು 2.0 ತಂತ್ರಾಂಶ ಜಾರಿಯಾದ ಬಳಿಕ ತೀವ್ರವಾಗಿ ವಿಳಂಬವಾಗುತ್ತಿದ್ದು, ಇದರಿಂದ ಸಾರ್ವಜನಿಕರು ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗಂಭೀರ ಸಮಸ್ಯೆಯನ್ನು ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಚುಕ್ಕಿ ಗುರುತಿನ ಪ್ರಶ್ನೆಯ ( ಪ್ರಶ್ನೆ ಸಂಖ್ಯೆ – 410 )ಮೂಲಕ ಸರ್ಕಾರದ ಗಮನಕ್ಕೆ ತಂದಿದ್ದು , ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರವು ನಿರೀಕ್ಷಿತ ಮಟ್ಟದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾಹೀರಾತು

ಇ ಸ್ವತ್ತು 2.0 ತಂತ್ರಾಂಶ ಜಾರಿಗೆ ಬಂದ ನಂತರ (ದಿನಾಂಕ 01-12-2025) ನಮೂನೆ 11ಎ ಗೆ ಸಂಬಂಧಿಸಿದಂತೆ ಒಟ್ಟು 1,84,222 ಅರ್ಜಿಗಳು ಸ್ವೀಕೃತವಾಗಿದ್ದು, 1,53,795 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. 639 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, 23,802 ಅರ್ಜಿಗಳು ಇನ್ನೂ ಅನುಮೋದನೆಗೆ ಬಾಕಿ ಉಳಿದಿವೆ ಎಂದು ಸರ್ಕಾರವೇ ವಿಧಾನ ಪರಿಷತ್ತಿನಲ್ಲಿ ನೀಡಿರುವ ಉತ್ತರದಲ್ಲಿ ತಿಳಿಸಿದೆ. ತಿರಸ್ಕೃತ ಅರ್ಜಿಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 253 (ಅತೀ ಹೆಚ್ಚು ಉಳ್ಳಾಲ ತಾಲೂಕು 57) ಉಡುಪಿ ಜಿಲ್ಲೆಯಲ್ಲಿ ಒಟ್ಟು 55 ಅರ್ಜಿಗಳು (ಅತೀ ಹೆಚ್ಚು ಕಾರ್ಕಳ 35 ) ತಿರಸ್ಕೃತವಾಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರದ ಈ ಅಂಕಿ-ಅಂಶಗಳೇ ಇ ಸ್ವತ್ತು 2.0 ತಂತ್ರಾಂಶದ ಮೂಲಕ ನಡೆಯುತ್ತಿರುವ ಪ್ರಕ್ರಿಯೆಯಲ್ಲಿ ವಿಳಂಬದ ಗಂಭೀರತೆಯನ್ನು ಸ್ಪಷ್ಟಪಡಿಸುತ್ತವೆ. ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಸ್ಯೆಗಳು ತಂತ್ರಾಂಶದಲ್ಲಿ ಇರುವುದನ್ನು ಸರ್ಕಾರವೇ ಒಪ್ಪಿಕೊಂಡಿರುವ ಸಂದರ್ಭದಲ್ಲಿ, ಸಮಸ್ಯೆ ನಿವಾರಣೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವ ಬದಲು ಹೆಚ್ಚುವರಿ ಅನುಮೋದನಾ ಹಂತಗಳನ್ನು ಮುಂದುವರಿಸಿರುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಕಿಶೋರ್ ಕುಮಾರ್ ಪುತ್ತೂರು ಅವರು ಹೇಳಿದ್ದಾರೆ.
ಈ ಹಿಂದೆ ನಮೂನೆ 9 & 11ಎ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಅವರ ಅನುಮೋದನೆಯೇ ಪ್ರಮುಖವಾಗಿತ್ತು. ಆದರೆ ಇ ಸ್ವತ್ತು 2.0 ತಂತ್ರಾಂಶ ಜಾರಿಗೆ ಬಂದ ನಂತರ ಕಾರ್ಯನಿರ್ವಾಹಕ ಅಧಿಕಾರಿಯ (EO) ಅನುಮೋದನೆಯನ್ನೂ ಕಡ್ಡಾಯಗೊಳಿಸಿರುವುದು ಪ್ರಕ್ರಿಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಪರಿಶೀಲನೆ ಮತ್ತು ಅನುಮೋದನೆ ಪೂರ್ಣಗೊಂಡ ನಂತರ ಮತ್ತೆ ತಾಲೂಕು ಮಟ್ಟದಲ್ಲಿ ಹೆಚ್ಚುವರಿ ಅನುಮೋದನೆ ಪಡೆಯುವ ವ್ಯವಸ್ಥೆಯಿಂದ ಕಡತಗಳು ಅನಗತ್ಯವಾಗಿ ವಿಳಂಬವಾಗುತ್ತಿವೆ.
ಆದ್ದರಿಂದ ನಮೂನೆ 11ಎ ಗೆ ಸಂಬಂಧಿಸಿದಂತೆ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಅನುಮೋದನೆಯ ಹಂತವನ್ನು ಕೈಬಿಟ್ಟು, ಈ ಹಿಂದೆ ಇದ್ದಂತೆ ಗ್ರಾಮ ಪಂಚಾಯತಿಯ PDO ಮಟ್ಟದಲ್ಲಿಯೇ ಅಗತ್ಯ ಪರಿಶೀಲನೆ ಮತ್ತು ಅನುಮೋದನೆ ನೀಡುವ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ . ಆದರೆ ಈ ಬೇಡಿಕೆಗೆ ಸರ್ಕಾರವು ನಿರೀಕ್ಷಿತ ರೀತಿಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸದಿರುವುದು ವಿಷಾದನೀಯ ಎಂದು ಅವರು ತಿಳಿಸಿದ್ದಾರೆ.

ಇದೇ ರೀತಿಯಲ್ಲಿ ನಮೂನೆ 11-ಬಿ ಪ್ರಕ್ರಿಯೆಯಲ್ಲಿಯೂ ಈ ಹಿಂದೆ ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಅನುಮೋದನೆ ನೀಡುವ ವ್ಯವಸ್ಥೆ ಇತ್ತು. ಆದರೆ ಈಗ ಇ ಸ್ವತ್ತು 2.0 ತಂತ್ರಾಂಶ ಜಾರಿಗೆ ಬಂದ ನಂತರ ಈ ಅನುಮೋದನಾ ಅಧಿಕಾರವನ್ನು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ (CEO) ಮಟ್ಟಕ್ಕೆ ವರ್ಗಾಯಿಸಿರುವುದರಿಂದ ಸಾಮಾನ್ಯ ನಾಗರಿಕರು ಸಣ್ಣಪುಟ್ಟ ಆಸ್ತಿ ಸಂಬಂಧಿತ ಕೆಲಸಗಳಿಗೂ ಅನಗತ್ಯ ವಿಳಂಬ ಮತ್ತು ಕಚೇರಿ ಸುತ್ತಾಟವನ್ನು ಎದುರಿಸಬೇಕಾಗಿದೆ. ನಮೂನೆ 11- ಬಿ ಕೋರಿ ಸಲ್ಲಿಕೆಯಾದ ಒಟ್ಟು ರೂ.15,936 ಅರ್ಜಿಗಳ ಪೈಕಿ 5151 ಅರ್ಜಿಗಳು ಅನುಮೋದನೆಯಾಗಿದ್ದು 8892 ಅರ್ಜಿಗಳು ಅನುಮೋದನೆಗೆ ಬಾಕಿ ಇದೆ ಈ ಪೈಕಿ ದಕ್ಷಿಣ ಕನ್ನಡ 65 ಮತ್ತು ಉಡುಪಿಯಲ್ಲಿ 436 ಅರ್ಜಿಗಳು ಅನುಮೋದನೆಗೆ ಬಾಕಿ ಇದೆ

“ತಂತ್ರಾಂಶವು ಸಾರ್ವಜನಿಕರ ಕೆಲಸವನ್ನು ಸರಳಗೊಳಿಸಬೇಕೇ ಹೊರತು, ಸಾರ್ವಜನಿಕರನ್ನು ತಂತ್ರಾಂಶದ ಹೆಸರಿನಲ್ಲಿ ಕಚೇರಿಯಿಂದ ಕಚೇರಿಗೆ ಅಲೆದಾಡಿಸುವಂತಾಗಬಾರದು” ಎಂದು ಕಿಶೋರ್ ಕುಮಾರ್ ಪುತ್ತೂರು ಅವರು ಸರ್ಕಾರಕ್ಕೆ ತೀವ್ರವಾಗಿ ಆಗ್ರಹಿಸಿದ್ದಾರೆ.
ಇ ಸ್ವತ್ತು 2.0 ತಂತ್ರಾಂಶದ ಉದ್ದೇಶ ಆಡಳಿತದಲ್ಲಿ ಪಾರದರ್ಶಕತೆ, ವೇಗ ಮತ್ತು ಸರಳತೆ ತರುವುದು. ಆದರೆ ಪ್ರಸ್ತುತ ವ್ಯವಸ್ಥೆಯಲ್ಲಿ ಹೆಚ್ಚುವರಿ ಅನುಮೋದನಾ ಹಂತಗಳು, ತಾಂತ್ರಿಕ ದೋಷಗಳು ಹಾಗೂ ಆಡಳಿತಾತ್ಮಕ ಅಡಚಣೆಗಳಿಂದಾಗಿ ಅದರ ಮೂಲ ಉದ್ದೇಶವೇ ವಿಫಲವಾಗುವಂತಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಸಾಮಾನ್ಯ ಜನರು ತಮ್ಮ ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ಕೆಲಸಗಳಿಗಾಗಿ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಕಚೇರಿಗಳಿಗೆ ಪದೇಪದೇ ತೆರಳಬೇಕಾಗುತ್ತಿರುವುದು ಸರ್ಕಾರದ **“ಜನಸ್ನೇಹಿ ಆಡಳಿತ”**ದ ಪರಿಕಲ್ಪನೆಗೆ ವಿರುದ್ಧವಾಗಿದೆ.

ಹೀಗಾಗಿ ಸರ್ಕಾರವು ತಕ್ಷಣವೇ ಇ ಸ್ವತ್ತು 2.0 ತಂತ್ರಾಂಶದಲ್ಲಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ನಿವಾರಿಸಬೇಕು. ಬಾಕಿ ಇರುವ ನಮೂನೆ 11 ಎ & 11 ಬಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ವಿಶೇಷ ಕಾರ್ಯಾಚರಣೆ ಕೈಗೊಳ್ಳಬೇಕು. ಅನಗತ್ಯ ಹೆಚ್ಚುವರಿ ಅನುಮೋದನಾ ಹಂತಗಳನ್ನು ರದ್ದುಪಡಿಸಿ, ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಸಾಧ್ಯವಾದಷ್ಟು ಸೇವೆಗಳನ್ನು ಒದಗಿಸುವ ವ್ಯವಸ್ಥೆ ಜಾರಿಗೆ ತರಬೇಕು. ಸಾರ್ವಜನಿಕರಿಗೆ ಅನುಕೂಲವಾಗಬೇಕಾದ ಡಿಜಿಟಲ್ ವ್ಯವಸ್ಥೆಯೇ ಅವರ ಅಲೆದಾಟಕ್ಕೆ ಕಾರಣವಾಗುತ್ತಿದ್ದರೆ, ಅಂತಹ ವ್ಯವಸ್ಥೆಯನ್ನು ಸರಿಪಡಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಈ ವಿಚಾರದಲ್ಲಿ ಸರ್ಕಾರ ಇನ್ನೂ ವಿಳಂಬ ಮಾಡದೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಒತ್ತಾಯಿಸಿದ್ದಾರೆ.