ಆಳ್ವಾಸ್ ಪ್ರಗತಿಯಲ್ಲಿ 2416 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ; 6183 ಮಂದಿ ಶಾರ್ಟ್‌ಲಿಸ್ಟ್: ವಿವೇಕ್ ಆಳ್ವ

ಮಂಗಳೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವತಿಯಿಂದ ಆಯೋಜಿಸಲಾದ 16ನೇ ಆವೃತ್ತಿಯ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ’ ಯಲ್ಲಿ 2416 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗದ ಆಫರ್ ದೊರಕಿದೆ. 6183 ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಟಾನದ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಪ್ರಗತಿ ಯಶಸ್ಸಿನ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, 332 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು, 15,539 ಅಭ್ಯರ್ಥಿಗಳು ಭಾಗವಹಿಸಿದ್ದರು ಎಂದರು.
ಮೇಳದಲ್ಲಿ ಭಾಗವಹಿಸಿದ್ದ 301 ಕಂಪನಿಗಳ ಫಲಿತಾಂಶಗಳನ್ನು ವೆಬ್‌ಸೈಟ್ (www.alvaspragati.com )ನಲ್ಲಿ ಪ್ರಕಟಿಸಲಾಗಿದೆ. ಉಳಿದ ಕಂಪನಿಗಳ ಹಾಗೂ ಅಭ್ಯರ್ಥಿಗಳ ಫಲಿತಾಂಶಗಳನ್ನು ನೇಮಕಾತಿ ಸಂಸ್ಥೆಗಳಿಂದ ಮಾಹಿತಿ ಲಭ್ಯವಾದಂತೆ ಪ್ರಕಟಿಸಲಾಗುವುದು. ಉದ್ಯೋಗ ಮೇಳದಂದು ಸ್ಥಳದಲ್ಲೇ ನೋಂದಣಿ ಮಾಡಿದಂತಹ ಎಸೆಸೆಲ್ಸಿ, ಪಿಯುಸಿಹಾಗೂ ಐಟಿಐ ಅಭ್ಯರ್ಥಿಗಳ ನೇಮಕಾತಿ ವಿವರಗಳನ್ನು ಆಳ್ವಾಸ್ ತಂಡದಿಂದ ದೂರವಾಣಿ ಕರೆ ಹಾಗೂ ಎಸ್‌ಎಂಎಸ್ ಮೂಲಕ ನೇರವಾಗಿ ತಲುಪಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಈ ಬಾರಿ ಉತ್ಪಾದನಾ ವಲಯದಲ್ಲಿ 75 ಕಂಪನಿಗಳು ಭಾಗವಹಿಸಿ 924 ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿಕೊಂಡು 523 ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ. ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸಂಸ್ಥೆಯು 216 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವರಲ್ಲಿ ಬಹುತೇಕರು ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಎಚ್ ಎಲ್ ಮಾಂಡೊ ಸಂಸ್ಥೆಯು ಇಇಇ, ಇಸಿಇ ಹಾಗೂ ಮೆಕ್ಯಾನಿಕಲ್ ವಿಭಾಗಗಳ 99 ಎಂಜಿನಿಯರಿಂಗ್ ಪದವೀಧರರನ್ನು ಚೆನ್ನೈಯಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟರ್ ಸಂಸ್ಥೆಯು ಚಾರ್ಟಡ್್ರ ಅಕೌಂಟೆಂಟ್ ಅಭ್ಯರ್ಥಿಯೊಬ್ಬರನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಎಕ್ಸಿಕಾಮ್ ಟೆಲಿ-ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆಯು 30 ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಐಟಿ ಮತ್ತು ಐಟಿಇಎಸ್ ಕ್ಷೇತ್ರದಲ್ಲಿ 34 ಕಂಪನಿಗಳು ಭಾಗವಹಿಸಿದ್ದು, 1,301 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಗೊಂಡಿದ್ದರೆ, 96 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗದ NEW ಆಫರ್ ದೊರೆತಿದೆ. ವುಡ್‌ರಾಕ್ ಇನ್ಫೋಟೆಕ್ ಕಂಪೆನಿಯು 17 ಜನರನ್ನು ಶಾರ್ಟ್‌ಲಿಸ್ಟಗೊಳಿಸಿದೆ. ಪ್ರೋಟಾಕ್ ಸೊಲ್ಯೂಷನ್ಸ್ ಚೆನ್ನೈಯಲ್ಲಿ ಉದ್ಯೋಗಕ್ಕಾಗಿ 39 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇಲೋಜಿಕ್ಸಾ ಸಂಸ್ಥೆಯು ಆಫ್ರಿಕಾದ ಕಾಂಗೋದಲ್ಲಿ ಒರ್ವ ಅಭ್ಯರ್ಥಿಗೆ ಉದ್ಯೋಗ ಒದಗಿಸಿದೆ.
[ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ಕ್ಷೇತ್ರದಲ್ಲಿ 913 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟಗೊಳಿಸಲಾಗಿದ್ದು, 211 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ದೊರಕಿದೆ. ಪ್ರಮುಖ ಬಹುರಾಷ್ಟ್ರೀಯ ಕಂಪೆನಿಯಾದ ಇಎಕ್ಸ್‌ಎಲ್ ಸರ್ವಿಸಸ್ ಮಾನವ ಸಂಪನ್ಮೂಲ, ಅಕೌಂಟ್ಸ್ ರಿಸೀವಬಲ್ ಮತ್ತು ಅಕೌಂಟ್ಸ್ ಪೇಯಬಲ್ ವಿಭಾಗಗಳಲ್ಲಿ 38 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದೆ. ಔಷಧೀಯ ಕ್ಷೇತ್ರದಲ್ಲಿ ಯೂರೋಫಿನ್ಸ್, ಆರ್.ಎಲ್. ಫೈನ್ ಕೆಮ್, ಸೋಲಾರಾ ಆಕ್ಟಿವ್ ಫಾರ್ಮಾ ಸೈನ್ಸಸ್, ಮೆಡಾರ್ಗ್ಯಾನಿಕ್ಸ್ ಇಂಡಿಯಾ, ಸಾಮಿ ನ್ಯೂಟ್ರಾಸ್ಯುಟಿಕಲ್ಸ್ ವಸುಧಾ ಲೈಫ್ ಸೈನ್ಸ್, ಬಯೋಕಾನ್ ಹಾಗೂ ಗ್ರೂಪ್ ಫಾರ್ಮಾಸ್ಯುಟಿಕಲ್ಸ್ ಸೇರಿದಂತೆ 159 ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದು, 40 ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ.
ಆರೋಗ್ಯ ಕ್ಷೇತ್ರದಲ್ಲಿ ಮುಂಬೈನ ಬೆಥನಿ ಆಸ್ಪತ್ರೆಯು 103 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಸೀನಿಕ್ ಸಮಿಟ್ ರೆಸಾರ್ಟ್ ಸಂಸ್ಥೆಯು ಪ್ರಕೃತಿ ಚಿಕಿತ್ಸಾ ವಿಭಾಗದ ಪದವೀಧರರನ್ನು ವೆಲ್‌ನೆಸ್ ಥೆರಪಿಸ್ಟ್ ಹುದ್ದೆಗಳಿಗೆ ನೇಮಕ ಮಾಡಿಕೊಂಡಿದೆ.
ಜಿಬಿಎಂಟಿ ಸೆಕ್ಟರಲ್ ಸ್ಟೀಲ್ ಮ್ಯಾನುಫ್ಯಾಕ್ಟರಿಂಗ್ ಇಂಡಸ್ಟ್ರೀಸ್ ಸಂಸ್ಥೆಯು ಐಟಿಐ, ಡಿಪ್ಲೊಮಾ ಹಾಗೂ ಪದವಿ ಪಡೆದ 9 ಅಭ್ಯರ್ಥಿಗಳನ್ನು ಯುಎಇಯಲ್ಲಿನ ಉದ್ಯೋಗಾವಕಾಶಗಳಿಗೆ ಆಯ್ಕೆ ಮಾಡಿದೆ. ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಸಂಸ್ಥೆಯು 117 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ಸೌದಿ ಅರೇಬಿಯಾ ಹಾಗೂ ಗುಜರಾತ್‌ನ ಅದಾನಿ ಮುಂದ್ರಾದ ಯೋಜನೆಗಳಿಗೆ 13 ಅಭ್ಯರ್ಥಿಗಳನ್ನು ಸ್ಥಳದಲ್ಲೇ ಆಯ್ಕೆ ಮಾಡಿದೆ. ಗೋ ಪಿಡಬ್ಲ್ಯುಡಿ ಸಂಸ್ಥೆಯು ಇಬ್ಬರು ವಿಶೇಷ ಚೇತನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಕೋಡ್‌ಯಂಗ್ ಸಂಸ್ಥೆಯು ಆಯ್ಕೆಯಾದ ಆರು ಅಭ್ಯರ್ಥಿಗಳನ್ನು ಲುಲು ಇಂಟರ್‌ನ್ಯಾಷನಲ್ ಶಾಪಿಂಗ್ ಮಾಲ್ಸ್ ಪ್ರೈವೇಟ್ ಲಿಮಿಟೆಡ್ 45 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ ಎಂದು ಅವರು ವಿವರ ನೀಡಿದರು.
ಗೋಷ್ಟಿಯಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಳ್ವಾಸ್ ಪ್ರಗತಿ-2026 ಉತ್ಪಾದನಾ ವಲಯ ಮುಖ್ಯಸ್ಥ ಡಾ. ಕುಮಾರಸ್ವಾಮಿ, ಉದ್ಯೋಗ ನಿಯೋಜನಾ ವಿಭಾಗ ರಂಜಿತಾ ಆಚಾರ್ಯ, ಆಳ್ವಾಸ್ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ದಿಶಾ ಶೆಟ್ಟಿ ಉಪಸ್ಥಿತರಿದ್ದರು.











