
ಕಲಬುರಗಿ: ವಾಹನ ಓವರ್‌ಟೇಕ್ ಮಾಡುವ ವಿಚಾರಕ್ಕೆ ಆರಂಭವಾದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಉಡಗಿ ಗ್ರಾಮದಲ್ಲಿ ನಡೆದಿದೆ. ಜೆಸಿಬಿ ಚಾಲಕನೊಬ್ಬ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಉಡಗಿ ಗ್ರಾಮದ ಭಾಗ್ಯವಂತ (24) ಮೃತ ಯುವಕ. ವಾಹನ ಓವರ್‌ಟೇಕ್ ಮಾಡುವ ವಿಚಾರದಲ್ಲಿ ಭಾಗ್ಯವಂತ ಹಾಗೂ ಜೆಸಿಬಿ ಚಾಲಕ ನಬೀ ನಡುವೆ ಜಗಳ ಆರಂಭವಾಗಿತ್ತು. ಮಾತಿಗೆ ಮಾತು ಬೆಳೆದಾಗ ಭಾಗ್ಯವಂತ ನಬೀ ಅವರ ಶರ್ಟ್‌ನ ಕಾಲರ್ ಹಿಡಿದಿದ್ದಾನೆ. ಇದರಿಂದ ಕೋಪಗೊಂಡ ನಬೀ, ಭಾಗ್ಯವಂತನ ಕೆನ್ನೆಗೆ ಜೋರಾಗಿ ಹೊಡೆದಿದ್ದಾನೆ.
ಹೊಡೆತದ ರಭಸಕ್ಕೆ ಭಾಗ್ಯವಂತನ ಕೆನ್ನೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ಸೇಡಂ ಪೊಲೀಸರು ಆರೋಪಿ ನಬೀಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.











