Friday, July 10, 2026
ಸುದ್ದಿ

ತುಂಗಭದ್ರಾ ಜಲಾಶಯಕ್ಕೆ ಜೀವಕಳೆ: ಒಂದೇ ದಿನದಲ್ಲಿ 4 ಟಿಎಂಸಿಗೂ ಹೆಚ್ಚು ನೀರು ಸಂಗ್ರಹ -ಕಹಳೆ ನ್ಯೂಸ್

ಬಳ್ಳಾರಿ: ಬರಡಾಗಿದ್ದ ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಕೊನೆಗೂ ಜೀವಕಳೆ ಬಂದಿದೆ. ಜಲಾನಯನ ಪ್ರದೇಶ ಹಾಗೂ ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಜೋರಾಗಿರುವುದರಿಂದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕೇವಲ ಕಳೆದ 24 ಗಂಟೆಗಳ ಅವಧಿಯಲ್ಲಿ ಜಲಾಶಯಕ್ಕೆ ಬರೋಬ್ಬರಿ 4.110 ಟಿಎಂಸಿ ನೀರು ಹರಿದು ಬಂದಿದ್ದು, ರೈತಾಪಿ ವಲಯದಲ್ಲಿ ಸಂತಸ ಮೂಡಿಸಿದೆ.

ಒಟ್ಟು 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯದಲ್ಲಿ ಸದ್ಯ 17.511 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಮಲೆನಾಡಿನ ಮುಂಗಾರು ಮಳೆಯ  ಆರ್ಭಟದಿಂದಾಗಿ ಜಲಾಶಯಕ್ಕೆ ಪ್ರಸ್ತುತ 49,728 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನದಿಯ ಮೂಲಗಳಿಂದ ನೀರು ನುಗ್ಗಿ ಬರುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟ ಗಂಟೆಯಿಂದ ಗಂಟೆಗೆ ಏರಿಕೆಯಾಗುತ್ತಿದೆ. ಸದ್ಯ ಜಲಾಶಯದಿಂದ ಕುಡಿಯುವ ನೀರು ಹಾಗೂ ಇತರೆ ಅಗತ್ಯಗಳಿಗಾಗಿ ವಿವಿಧ ಕಾಲುವೆಗಳ ಮೂಲಕ ಕೇವಲ 180 ಕ್ಯೂಸೆಕ್ ನೀರಿನ ಹೊರಹರಿವು ಇದೆ.

ಕಳೆದ ವರ್ಷದ (2025) ಇದೇ ದಿನಕ್ಕೆ ಹೋಲಿಸಿದರೆ ಜಲಾಶಯದಲ್ಲಿ ನೀರಿನ ಸಂಗ್ರಹ ಈ ಬಾರಿ ಸಾಕಷ್ಟು ಕಡಿಮೆಯಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 77.343 ಟಿಎಂಸಿ ನೀರಿನ ಬೃಹತ್ ಸಂಗ್ರಹವಿತ್ತು. ಆದರೆ ಈ ಬಾರಿ ಮುಂಗಾರು ಆರಂಭದಲ್ಲಿ ಕೈಕೊಟ್ಟಿದ್ದರಿಂದ ಜಲಾಶಯ ಸಂಪೂರ್ಣ ತಳ ಹಿಡಿದಿತ್ತು. ಈಗ ಒಂದು ವಾರದಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯು ಜಲಾಶಯದ ಒಣಗಿದ ಒಡಲನ್ನು ತುಂಬಿಸುತ್ತಿದೆ.

ಇದೇ ರೀತಿ ಇನ್ನು ಕೆಲ ದಿನಗಳ ಕಾಲ ಒಳಹರಿವು ಮುಂದುವರಿದರೆ, ಜಲಾಶಯದ ನೀರಿನ ಮಟ್ಟ ವೇಗವಾಗಿ ಏರಿಕೆಯಾಗಲಿದ್ದು, ತುಂಗಭದ್ರಾ ನಂಬಿರುವ ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಆತಂಕ ದೂರಾಗಲಿದೆ.