
ಚಂಡೀಗಢ: ಇಲ್ಲಿನ ಗುರುಗ್ರಾಮದಲ್ಲಿ ಪೊಲೀಸರು ಹಾಗೂ ದರೋಡೆಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ದುಷ್ಕರ್ಮಿಗಳು ಬಲಿಯಾಗಿದ್ದಾರೆ. ಓರ್ವ ಆರೋಪಿ ಹಾಗೂ ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ಗುರುವಾರ ರಾತ್ರಿ 9:30 ರ ಸುಮಾರಿಗೆ ಗುರುಗ್ರಾಮದ ಸುಶಾಂತ್ ಲೋಕ್ ಫೇಸ್-2 ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದೆ. ಈ ವೇಳೆ, ಸುಮಾರು 60 ಸುತ್ತು ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಕಾರ್ಪಿಯೋ ಎಸ್‌ಯುವಿಯಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ತೆರಳುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರ ತಂಡ ದಾಳಿ ನಡೆಸಿತ್ತು. ಶಂಕಿತರನ್ನು ಸುತ್ತುವರೆದ ಪೊಲೀಸರ ತಂಡ ಶರಣಾಗುವಂತೆ ಸೂಚಿಸಿದೆ. ಆದರೂ ಆರೋಪಿಗಳು ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ.









