Friday, July 10, 2026
ಸುದ್ದಿ

​ರೋಟರಿ ಕ್ಲಬ್ ಕಟಪಾಡಿ: ರಜತ ಮಹೋತ್ಸವದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ -ಕಹಳೆ ನ್ಯೂಸ್

​ಕಟಪಾಡಿ: “ರೋಟರಿ ಎಂದರೆ ಕೇವಲ ಸಭೆಗಳು ಮತ್ತು ಕಾರ್ಯಕ್ರಮಗಳ ಸಂಘಟನೆಯಲ್ಲ. ಅದು ಸಮಾಜದ ಅತ್ಯಂತ ಜರೂರಾದ ಅಗತ್ಯತೆಗಳನ್ನು ಮನಗಂಡು, ಶಾಶ್ವತ ಪರಿವರ್ತನೆಗಾಗಿ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುವ ಅಪೂರ್ವ ಸೇವಾ ಸಂಸ್ಥೆಯಾಗಿದೆ,” ಎಂದು ಪದಗ್ರಹಣ ಅಧಿಕಾರಿ ರೋ| ಅಲೆನ್ ವಿನಯ್ ಲೂಯಿಸ್ ಅವರು ಹೇಳಿದರು.
​ಅವರು ರೋಟರಿ ಕ್ಲಬ್ ಕಟಪಾಡಿ ಇದರ 2026-27ನೇ ಸಾಲಿನ ಬೆಳ್ಳಿ ಹಬ್ಬದ (ರಜತ ಮಹೋತ್ಸವ) ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಹಿತನುಡಿಗಳನ್ನಾಡಿದರು.

​ಮಾನವೀಯ ಸೇವೆಗೆ ರೋಟರಿ ಸದಾ  ​ಮುಂದುವರಿದು ಮಾತನಾಡಿದ ರೊ| ಅಲೆನ್ ವಿನಯ್ ಲೂಯಿಸ್ ಅವರು, “ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಯಾವುದೇ ಅರಿವಿಲ್ಲದೆ ಬೆಟ್ಟಗಾಡುಗಳಲ್ಲಿ ಬದುಕುತ್ತಿದ್ದ ಜನರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳಿಗೆ ಚಿಂತನೆ ಮತ್ತು ಪರಿಹಾರವನ್ನು ಒದಗಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದ ಕೀರ್ತಿ ರೋಟರಿ ಸಂಸ್ಥೆಗೆ ಸಲ್ಲುತ್ತದೆ. ಸಮಾಜದ ದುರ್ಬಲ ವ್ಯಕ್ತಿಯ ನಿಜವಾದ ನೋವಿಗೆ ಸ್ಪಂದಿಸಿ ಮಾನವೀಯತೆ ತೋರಿದಾಗ ಮಾತ್ರ ರೋಟರಿಯ ಆಶಯ ಸಾಕಾರಗೊಳ್ಳುತ್ತದೆ. ಯುವಜನರ ಸಬಲೀಕರಣ, ಮಹಿಳಾ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಕಟಪಾಡಿ ರೋಟರಿ ಸಂಸ್ಥೆಯು 25ರ ಹೊಸ್ತಿಲಲ್ಲಿ ನೂರಾರು ಸೇವಾ ಕನಸುಗಳ ತೊಟ್ಟಿಲನ್ನು ತೂಗುತ್ತಿದೆ. ನೂತನ ಅಧ್ಯಕ್ಷರಾದ Rtn K. ಸುದರ್ಶನ್ ಮಲ್ಯ ಅವರ ನೇತೃತ್ವದಲ್ಲಿ ನಾವೆಲ್ಲರೂ ಒಂದು ತಂಡವಾಗಿ ಹೆಗಲು ಕೊಟ್ಟು ಶ್ರಮಿಸೋಣ,” ಎಂದು ಕರೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

​ಅಂತರರಾಷ್ಟ್ರೀಯ ಮಟ್ಟದಲ್ಲಿ ಕಟಪಾಡಿ ರೋಟರಿಯ ಸೇವೆ ಶ್ಲಾಘನೀಯ

​ಕಾರ್ಯಕ್ರಮದ ಇನ್ನೊಬ್ಬ ಮುಖ್ಯ ಅತಿಥಿಯಾಗಿದ್ದ ರೊ| ಹೇಮಂತ್ ಅವರು ಮಾತನಾಡಿ, “ಕಟಪಾಡಿ ರೋಟರಿ ಕ್ಲಬ್ ತನ್ನ ಆದರ್ಶಪ್ರಾಯ ಸೇವೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಸಮಾಜಕ್ಕೆ ದಾನಿಗಳ ಕೊಡುಗೆ ಹಾಗೂ ಜಾಗೃತಿಯನ್ನು ಚಿತ್ರಣದ ಮೂಲಕ ನೀಡುತ್ತಿರುವ ರೊ| ಸತ್ಯೇಂದ್ರ ಪೈ ಅವರಂತಹ ಅನೇಕ ಶ್ರೇಷ್ಠ ಸದಸ್ಯರು ನಮ್ಮೊಂದಿಗಿದ್ದಾರೆ. ಈ ಬಾರಿ ಬೆಳ್ಳಿ ಹಬ್ಬದ ಗುರಿ ಮುಟ್ಟುವ ಸಾಧನೆಯಲ್ಲಿ ಹಾಗೂ ರೋಟರಿಯ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಶಾಶ್ವತ ಹೆಜ್ಜೆಗುರುತು ಮೂಡಿಸುವಲ್ಲಿ ನೂತನ ಅಧ್ಯಕ್ಷರು ಮತ್ತು ಸರ್ವ ಪದಾಧಿಕಾರಿಗಳ ಜೊತೆಗೆ ನಾನು ಸದಾ ಇರುತ್ತೇನೆ,” ಎಂದು ಬೆಂಬಲ ಸೂಚಿಸಿದರು.

​ಜವಾಬ್ದಾರಿಯುತ ಸೇವೆಗೆ ಸಿದ್ಧ: ನೂತನ ಅಧ್ಯಕ್ಷ ರೊ| ಕೆ. ಸುದರ್ಶನ್ ಮಲ್ಯ

​ರೋಟರಿ ಕ್ಲಬ್ ಕಟಪಾಡಿಯ ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ರೊ| ಕೆ. ಸುದರ್ಶನ್ ಮಲ್ಯ ಅವರು ಮಾತನಾಡಿ, “ರೋಟರಿ ಸಂಸ್ಥೆಯ ಮಹತ್ವ ಮತ್ತು ಧ್ಯೇಯೋದ್ದೇಶಗಳನ್ನು ಅರಿತು ಸಮಾಜದ ಸೇವೆ ಮಾಡಲೆಂದೇ ಈ ಬಾರಿ ನಾನು ಅಧ್ಯಕ್ಷ ಪದವಿಯನ್ನು ಸ್ವೀಕರಿಸಿದ್ದೇನೆ. ಬೆಳ್ಳಿ ಹಬ್ಬದ ಈ ಸಂದರ್ಭದಲ್ಲಿ ಸಂಸ್ಥೆಯನ್ನು ಮುನ್ನಡೆಸಲು ನಿಮ್ಮೆಲ್ಲರ ಪ್ರೀತಿ, ಸಹಕಾರ ಮತ್ತು ಮಾರ್ಗದರ್ಶನ ಸದಾ ನನ್ನ ಮೇಲಿರಲಿ,” ಎಂದು ವಿನಂತಿಸಿದರು. ವೇದಿಕೆ ಯಲ್ಲಿ ವಲಯ ಸೇನಾನಿ ರೊ. ಸಿ ರಮಾನಂದ ಭಟ್, ನಿರ್ಗಮನ ಅಧ್ಯಕ್ಷರು ರೊ ಆಶಾ ಅಂಚನ್ ನಿರ್ಗಮನ ಕಾರ್ಯದರ್ಶಿ ರೊ ಡಾ. ಚಂದ್ರ ಶೇಖರ್ ಸಾಲಿಮಟ್ ನೂತನ ಕಾರ್ಯದರ್ಶಿ ರೊ ಟಿ ಅರ್ ದೊಡ್ಡ ಮನಿ ಉಪಸ್ಥಿತರಿದ್ದರು. ಕಟ್ಪಾಡಿ ರೊ ಟರಿ ಬ್ಯಾರರ್ಸ್ ಗಳಾದ ರೊಟೇರಿಯನ್ , ರೊಟೇರಿಯನ್ ಶ್ರೀಕರ್ ಅಂಚನ್ ರೊಟೇರಿಯನ್ ಶಕುಂತಲಾ ಎ ಪೂಜಾರಿ ರೋಟೆರಿಯನ್ ಜಗನ್ನಾಥ ಕೋಟೆ ರೋಟೋರಿಯಂ ಲಕ್ಷ್ಮಿಬಾಯಿ ರೋಟೋರಿಯಂ ರಾಜೇಂದ್ರ ಭಟ್ ಉಪಸ್ಥಿತರಿದ್ದರು.

ಕ್ಲಬ್ ಡೈರೆಕ್ಟರ್ಸ್ ಗಳಾದ ರೊಟೇರಿಯನ್ ರಂಜನ್ ಹೆಗಡೆ ರೊಟೇರಿಯನ್ ತುಳಸಿ ಎಸ್ ದೇವಾಡಿಗ, ರೋಟೆರಿಯನ್ ರಿತೇಶ್ ಬಿ, ರೊ ಟೇರಿಯನ್ ಸತ್ಯೇಂದ್ರ ಪೈ ರೊಟೇರಿಯನ್ ವಿಲ್ಫ್ರೆಡ್ ಲೂವಿಶ್ ಉಪಸ್ಥಿತರಿದ್ದರು. ಶೈಕ್ಷಣಿಕ ಕ್ಷೇತ್ರ ದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ರೊ ಅಪ್ಪು ಮಾಷ್ಟ್ರು ಸ್ಮರಣಅರ್ಥ ಪ್ರತಿಭಾ ಪುರಸ್ಕಾರ ನೀಡ ಲಾಯಿತು,