Thursday, June 25, 2026
ಸುದ್ದಿ

ಇಂದು ಟಿಬಿ ಡ್ಯಾಂನ 33 ನೂತನ ಕ್ರಸ್ಟ್ ಗೇಟ್ ಲೋಕಾರ್ಪಣೆ-ಕಹಳೆ ನ್ಯೂಸ್

ಕೊಪ್ಪಳ: ಕರ್ನಾಟಕ ಸೇರಿ ಮೂರು ರಾಜ್ಯಗಳ ಕೋಟ್ಯಂತರ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ  ಈಗ ಹೊಸ ಕಳೆ ಬಂದಿದೆ. ಟಿಬಿ ಡ್ಯಾಂ ಕ್ರಸ್ಟ್ ಗೇಟ್ ಆತಂಕಕ್ಕೆ ಸರ್ಕಾರ ಶಾಶ್ವತ ಮುಕ್ತಿ ನೀಡಿದೆ. ಸಮರೋಪಾದಿಯಲ್ಲಿ ಕೆಲಸ ಮುಗಿಸಿರುವ ಜಲಸಂಪನ್ಮೂಲ ಇಲಾಖೆ ಎಲ್ಲಾ 33 ನೂತನ ಕ್ರಸ್ಟ್ ಗೇಟ್‌ಗಳನ್ನು ಇಂದು ಲೋಕಾರ್ಪಣೆಗೊಳಿಸುತ್ತಿದೆ. ಐತಿಹಾಸಿಕ ಕಾರ್ಯಕ್ರಮಕ್ಕೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಸಿಎಂ ಸಾಕ್ಷಿ ಆಗುತ್ತಿದ್ದಾರೆ.

ಜಾಹೀರಾತು

ಹೌದು, ಕಳೆದ 2024ರ ಅಗಸ್ಟ್ ತಿಂಗಳ ನಡೆದ ಆ ಘಟನೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಜಲಾಶಯದ 19ನೇ ಕ್ರಸ್ಟ್ ಗೇಟ್ ಹರಿದು ಹೋಗಿದ್ದು, ಲಕ್ಷಾಂತರ ಕ್ಯೂಸೆಕ್ ನೀರು ನದಿಪಾಲಾಯ್ತು. ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರದ ರೈತರು ಕಣ್ಣೀರು ಹಾಕಿದರು. ಅಂದೇ ರಾಜ್ಯ ಸರ್ಕಾರ ಈ ಸವಾಲನ್ನು ಗಂಭೀರವಾಗಿ ಸ್ವೀಕರಿಸಿದ್ದು, ಕೇವಲ ಒಂದು ಗೇಟ್ ರಿಪೇರಿ ಬದಲಾಗಿ ಇಡೀ ಡ್ಯಾಂನ ಎಲ್ಲಾ 33 ಕ್ರಸ್ಟ್ ಗೇಟ್‌ಗಳನ್ನೇ ಬದಲಾಯಿಸಲು ಮಾಸ್ಟರ್ ಪ್ಲಾನ್ ರೂಪಿಸಿತು. ಬರೋಬ್ಬರಿ 51 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ 33 ನೂತನ ಕ್ರಸ್ಟ್ ಗೇಟ್‌ಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ನವಜೀವನ ಪಡೆದ ಡ್ಯಾಂ ಇಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಟಿಬಿ ಡ್ಯಾಂ ಕ್ರಸ್ಟ್ ಗೇಟ್ ಲೋಕಾರ್ಪಣೆಯು ದಕ್ಷಿಣ ಭಾರತದ ಮೂರು ರಾಜ್ಯದ ಸಿಎಂಗಳ ಸಮಾಗಮಕ್ಕೆ ಸಾಕ್ಷಿ ಆಗಲಿದೆ. ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳು ಒಂದೇ ವೇದಿಕೆಯಲ್ಲಿ ಕೈಕೈ ಹಿಡಿದು ನಿಲ್ಲಲಿದ್ದಾರೆ. ಇವರ ಜೊತೆ ಕೇಂದ್ರ ಜಲಶಕ್ತಿ ಸಚಿವರು ಕೂಡ ಭಾಗಿಯಾಗಲಿದ್ದಾರೆ. ಈಗಾಗಲೇ ಸರ್ಕಾರದ ಪರವಾಗಿ ಶಾಸಕ ಬಸವರಾಜ್ ರಾಯರೆಡ್ಡಿ ನೇತೃತ್ವದ ನಿಯೋಗ ನೆರೆಯ ರಾಜ್ಯಗಳಿಗೆ ಖುದ್ದು ಭೇಟಿಯಾಗಿ ಆಹ್ವಾನ ನೀಡಿದೆ. ಮೊದಲು ನಾಯಕರು ಜಲಾಶಯದ ಮೇಲೆ ಗೇಟ್ ಲೋಕಾರ್ಪಣೆ ಮಾಡಲಿದ್ದು, ನಂತರ 10 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಇರುವ ಬೃಹತ್ ವೇದಿಕೆ ಮುಖ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಒಂದು ಕಡೆ ಬೃಹತ್ ವೆಚ್ಚದಲ್ಲಿ ಕ್ರಸ್ಟ್ ಗೇಟ್‌ಗಳು ನವೀಕರಣಗೊಂಡಿದ್ದು ನಾಲ್ಕೂ ಜಿಲ್ಲೆಗಳ ರೈತರಿಗೆ ನೆಮ್ಮದಿ ತಂದಿದೆ. ಆದರೆ, ಮತ್ತೊಂದೆಡೆ ಪ್ರಕೃತಿಯ ಮುನಿಸು ಅನ್ನದಾತನ ಎದೆಯಲ್ಲಿ ನಡುಕ ಹುಟ್ಟಿಸಿದೆ. ಯಾಕಂದ್ರೆ, ಕಳೆದ ವರ್ಷ ಇದೇ ಸಮಯಕ್ಕೆ ಜಲಾಶಯದಲ್ಲಿ 45 ಟಿಎಂಸಿ ನೀರಿತ್ತು. ಆದ್ರೆ, ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ ಕೇವಲ 9 ಟಿಎಂಸಿ ನೀರು ಸಂಗ್ರಹವಾಗಿದೆ. ವರುಣದೇವ ಕರುಣಿಸಿ ಡ್ಯಾಂ ತುಂಬಿದರೆ ಮಾತ್ರ ರೈತನ ಮೊಗದಲ್ಲಿ ಮಂದಹಾಸ ಮೂಡಲಿದೆ.