
ಮುಂಬೈ: ಯುವಕರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ನಡೆಯುವ ಗಲಾಟೆಗಳು ವಿಕೋಪಕ್ಕೆ ತಿರುಗಿ ಒಬ್ಬರೊಬ್ಬರ ಕೊಲೆಯಲ್ಲಿ ಅಂತ್ಯ ಕಾಣುವುದು ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಗೆ ಕಾರಣವಾಗಿದೆ. ಇದೀಗ ಚರ್ಚ್ ಗೇಟ್ – ನಲಾಸೋಪಾರಾ ಫಾಸ್ಟ್ ಲೋಕಲ್ ರೈಲಿನಲ್ಲಿ ನಡೆದ ಘಟನೆ ಇದಕ್ಕೆ ಉದಾಹರಣೆಯಾಗಿದೆ.
ರೈಲಿನ ಬಾಗಿಲು ಮುಚ್ಚುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಮಯಾಂಕ್ ಲೋಹರ್(21) ಕೊಲೆಯಾದ ಯುವಕ. ಮಂಗಳವಾರ ರಾತ್ರಿ ಗೋರೆಗಾಂವ್ ಮತ್ತು ಕಂಡಿವಲಿ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ. ಭಾರೀ ಮಳೆಯ ಕಾರಣ ರೈಲಿನ ಬಾಗಿಲು ಮುಚ್ಚುವ ವಿಚಾರಕ್ಕೆ ಇಬ್ಬರು ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ವಾಗ್ವದ ವಿಕೋಪಕ್ಕೆ ತಿರುಗಿದಾಗ ಕೆಲ ಪ್ರಯಾಣಿಕರು ಆರೋಪಿ ರೋಷನ್ ಸುವರ್ಣ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಆರೋಪಿ ತನ್ನ ಬ್ಯಾಗ್‌ನಲ್ಲಿದ್ದ ಚಾಕು ತೆಗೆದು ಮಯಾಂಕ್ ಮೇಲೆ ದಾಳಿ ನಡೆಸಿ, ಪರಾರಿಯಾಗಿದ್ದಾನೆ. ಇದರಿಂದ ಗಂಭೀರ ಗಾಯಗೊಂಡಿದ್ದ ಮಯಾಂಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ರೈಲ್ವೇ ಪೊಲೀಸರು ಮೇತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಕುರ್ಲಾ ಪ್ರದೇಶದಲ್ಲಿ ಆರೋಪಿ ರೋಷನ್ ಸುವರ್ಣನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇನ್ನು ಮಗನ ಆಘಾತಕಾರಿ ಸಾವಿನಿಂದ ಮೃತನ ತಾಯಿ ಮತ್ತು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ಇಂದು ಶಿಕ್ಷೆಯಾಗದಿದ್ದರೆ ನಾಳೆ ಮತ್ತೊಬ್ಬರ ಜೀವ ಹೋಗಬಹುದು ಎಂದು ಮೃತನ ಸಹೋದರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.











