Thursday, June 25, 2026
ಸುದ್ದಿ

ವೆನೆಜುವೆಲಾದಲ್ಲಿ 1 ನಿಮಿಷದ ಅಂತರದಲ್ಲಿ 7.2, 7.5 ತೀವ್ರತೆಯ ಭೂಕಂಪ : ಕಟ್ಟಡಗಳು ಕುಸಿತ, ಸಾವುನೋವಿನ ಶಂಕೆ-ಕಹಳೆ ನ್ಯೂಸ್

ಕರಾಕಾಸ್: ವೆನೆಜುವೆಲಾ  ಕರಾವಳಿಯ ಸಮೀಪ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ದೇಶವನ್ನು ಬೆಚ್ಚಿಬೀಳಿಸಿವೆ. ರಿಕ್ಟರ್ ಮಾಪಕದಲ್ಲಿ 7.2 ಮತ್ತು 7.5 ತೀವ್ರತೆಯ ಭೂಕಂಪಗಳು (Earthquake) ಕೇವಲ ಒಂದು ನಿಮಿಷದ ಅಂತರದಲ್ಲಿ ಸಂಭವಿಸಿದ ಪರಿಣಾಮ ಅನೇಕ ಕಟ್ಟಡಗಳು ಕುಸಿದಿವೆ. ಅಲ್ಲದೇ ಸಾವಿರಾರು ಜನರು ಜೀವಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಜಾಹೀರಾತು

ರಾಜಧಾನಿ ಕರಾಕಾಸ್ ಸೇರಿದಂತೆ ಹಲವು ನಗರಗಳಲ್ಲಿ ಕಟ್ಟಡಗಳು ತೀವ್ರವಾಗಿ ಅಲುಗಾಡಿದ ಪರಿಣಾಮ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಧಾವಿಸಿದರು. ಕೆಲ ಪ್ರದೇಶಗಳಲ್ಲಿ ಕಟ್ಟಡಗಳ ಗೋಡೆಗಳು ಕುಸಿದು ಬಿದ್ದಿದ್ದು, ರಸ್ತೆಗಳಲ್ಲಿ ಅವಶೇಷಗಳ ರಾಶಿ ಕಂಡುಬಂದಿದೆ. ಹಲವೆಡೆ ವಿದ್ಯುತ್ ಕಂಬಗಳು ಉರುಳಿದ್ದು, ಸಂಚಾರ ಹಾಗೂ ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಭೂಕಂಪದ ನಂತರ ಕರಾಕಾಸ್‌ನ (Caracas) ಕೆಲವು ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಮತ್ತು ವಿದ್ಯುತ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ. ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದೆ ಅನೇಕರು ಆತಂಕಕ್ಕೆ ಒಳಗಾಗಿದ್ದಾರೆ. ಭೂಕಂಪದಿಂದ ಭಯಭೀತರಾದ ಜನರು ಗಂಟೆಗಟ್ಟಲೆ ರಸ್ತೆಗಳಲ್ಲಿ ಆಶ್ರಯ ಪಡೆದಿರುವ ದೃಶ್ಯಗಳು ಕಂಡುಬಂದಿವೆ. ಭೀಕರ ಭೂಕಂಪದ ಹಿನ್ನೆಲೆ ವೆನೆಜುವೆಲಾದ ಮುಖ್ಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ವೆನೆಜುವೆಲಾದಲ್ಲಿ ಇಂತಹ ತೀವ್ರತೆಯ ಭೂಕಂಪಗಳು ಅಪರೂಪವಾಗಿದ್ದು, ಕಳೆದ ಹಲವು ದಶಕಗಳಲ್ಲಿಯೇ ಇದು ಅತ್ಯಂತ ಪ್ರಬಲ ಪ್ರಕೃತಿ ವಿಕೋಪಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಸಾವುನೋವು ಮತ್ತು ಹಾನಿಯ ನಿಖರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದ್ದು, ದೇಶಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಭೂಕಂಪದ ಕಂಪನ ಪಕ್ಕದ ಕೊಲಂಬಿಯಾ ಮತ್ತು ಬ್ರೆಜಿಲ್ ದೇಶಗಳಲ್ಲಿಯೂ ಅನುಭವವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಕಟ್ಟಡಗಳನ್ನು ಖಾಲಿ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದು, ಹಾನಿಯ ಪ್ರಮಾಣದ ಕುರಿತು ಅಧಿಕಾರಿಗಳು ಸಮಗ್ರ ಮಾಹಿತಿ ಸಂಗ್ರಹಿಸುತ್ತಿದ್ದಾರೆ.