
ಅಮೇಥಿಯಲ್ಲಿ ಎಐಸಿಸಿ ಅಧ್ಯಕ್ಷ, ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ವಿರುದ್ಧ 55,120 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದ ಸ್ಮೃತಿ ಇರಾನಿ ಅವರು ನೂತನ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಸ್ಮೃತಿ ಇರಾನಿಯವರ ಆಪ್ತ ಬೆಂಬಲಿಗ ಸುರೇಂದ್ರ ಸಿಂಗ್ ರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಮೇಥಿಯ ಬರುಲಿಯಾ ಗ್ರಾಮದ ತಮ್ಮ ಮನೆಯಲ್ಲಿ ಶನಿವಾರ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದ ಸುರೇಂದ್ರ ಸಿಂಗ್ ಮೇಲೆ ದುಷ್ಕರ್ಮಿಗಳು ಏಕಾಏಕಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ವೇಳೆ ಸಂಸತ್‍ನ ಸೆಂಟ್ರಲ್ ಹಾಲ್ ನಲ್ಲಿ ನರೇಂದ್ರ ಮೋದಿ ಅವರನ್ನು ನೂತನ ಸಂಸದೀಯ ನಾಯಕರನ್ನಾಗಿ ಆಯ್ಕೆ ಮಾಡುವ ಸಮಾರಂಭ, ಸಂಭ್ರಮದಲ್ಲಿ ಸ್ಮೃತಿ ಇದ್ದರು. ಬರುಲಿಯಾ ಗ್ರಾಮದ ಮಾಜಿ ಮುಖ್ಯಸ್ಥರಾಗಿದ್ದ ಸುರೇಂದ್ರ ಅವರ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಜಮೋ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದುಷ್ಕರ್ಮಿಗಳ ಗುಂಡೇಟು ತಿಂದು ರಕ್ತದ ಮಡಿಲಿನಲ್ಲಿ ಮಲಗಿದ್ದ ಸುರೇಂದ್ರ ಅವರನ್ನು ಲಕ್ನೋಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಕೂಡಾ ವಿಫಲವಾಗಿದೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ.









