Friday, June 26, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನಲ್ಲಿ ಅಕ್ರಮ ಗೋಸಾಗಾಟಕ್ಕೆ ಬ್ರೇಕ್: ಬಜರಂಗದಳದ ಮಾಹಿತಿ ಮೇರೆಗೆ ಪೊಲೀಸರ ಕಾರ್ಯಾಚರಣೆ – ಕಹಳೆ ನ್ಯೂಸ್

ಪುತ್ತೂರು: ಅಕ್ರಮವಾಗಿ ಹಸುವನ್ನು ಮಾಂಸ ಮಾಡುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಪುತ್ತೂರು ಗ್ರಾಮಾಂತರ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಜಾಹೀರಾತು

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಯಾಪು ಗ್ರಾಮದ ಮರಕ್ಕ ಸಮೀಪ ಈ ಕಾರ್ಯಾಚರಣೆ ನಡೆದಿದ್ದು, ಪೊಲೀಸ್ ಉಪನಿರೀಕ್ಷಕಿ (ತನಿಖೆ) ಸುಷ್ಮಾ ಜಿ. ಭಂಡಾರಿ ಅವರ ನೇತೃತ್ವದ ತಂಡ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಖಚಿತ ಮಾಹಿತಿಯ ಮೇರೆಗೆ ಪಿಕಪ್ ವಾಹನವನ್ನು ತಡೆದು ಪರಿಶೀಲನೆ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪರಿಶೀಲನೆ ವೇಳೆ ಪಿಕಪ್ ವಾಹನದಲ್ಲಿ ಹಸುವಿನ ಬಾಯಿ ಹಾಗೂ ಕಾಲುಗಳನ್ನು ಹಗ್ಗದಿಂದ ಬಿಗಿದು, ನೀರು ಹಾಗೂ ಆಹಾರ ನೀಡದೆ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿರುವುದು ಪತ್ತೆಯಾಯಿತು. ವಾಹನದಲ್ಲಿದ್ದವರ ಬಳಿ ಜಾನುವಾರು ಸಾಗಾಟಕ್ಕೆ ಅಗತ್ಯವಾದ ಯಾವುದೇ ಪರವಾನಿಗೆ ಅಥವಾ ಪಶುವೈದ್ಯಾಧಿಕಾರಿಯ ಪ್ರಮಾಣಪತ್ರ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಮೊಯ್ದುಕುಂಞ, ನಾರಾಯಣ ಹಾಗೂ ಮೇಗಿನಪಂಜದ ಬಾಲಕೃಷ್ಣ ವಿರುದ್ಧ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 5, 7, 12 ಹಾಗೂ ಪ್ರಾಣಿ ಹಿಂಸೆ ನಿಷೇಧ ಕಾಯ್ದೆ-1960ರ ಕಲಂ 11(ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಸುಮಾರು ₹4 ಲಕ್ಷ ಮೌಲ್ಯದ ಪಿಕಪ್ ವಾಹನ ಹಾಗೂ ಅಂದಾಜು ₹10 ಸಾವಿರ ಮೌಲ್ಯದ ಹಸುವನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಮುಂದಿನ ತನಿಖೆ ಮುಂದುವರಿದಿದೆ.