
ಪುತ್ತೂರು/ಬಂಟ್ವಾಳ/ಸುಳ್ಯ/ಬೆಳ್ತಂಗಡಿ/ವಿಟ್ಲ: ಮಳೆಗಾಲವಾದರೂ ಕಳೆದ ಕೆಲವು ಸಮಯಗಳಿಂದ ಮಳೆಯಿಲ್ಲದೆ ಬಿಸಿಲಿಗೆ ಬೇಸತ್ತಿದ್ದ ಜನತೆಗೆ ಮಳೆ ತಂಪೆರೆದಿದ್ದು, ಶುಕ್ರವಾರ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಸಹಿತ ವಿವಿಧೆಡೆ ಗುಡುಗು ಸಹಿತ ಗಾಳಿ ಮಳೆಯಾಗಿದೆ.
ಪುತ್ತೂರಿನಲ್ಲಿ ಅ. 1ರಂದು ಸಂಜೆ ಹೊತ್ತು ಕೊಂಚ ಮಳೆಯಾಗಿದ್ದು, ಶುಕ್ರವಾರ ರಾತ್ರಿ 7.45ರ ಸುಮಾರಿಗೆ ಉತ್ತಮ ಮಳೆಯಾಗಿದೆ. ತಾಲೂಕಿನ ನಗರ, ಗ್ರಾಮೀಣ ಪ್ರದೇಶದಲ್ಲಿ ಮಳೆಯಾಗಿದ್ದು, ಕೆಲವು ಕಡೆ ಸಾಮಾನ್ಯ ಮಳೆಯಾದರೆ ಇನ್ನು ಕೆಲವೆಡೆ ಸುಮಾರು ಅರ್ಧ ತಾಸುಗಳ ಕಾಲ ಧಾರಾಕಾರ ಮಳೆಯಾಗಿದೆ. ಮಳೆಯ ಜತೆಗೆ ಮಿಂಚು ಸಹಿತ ಗುಡುಗು ಕಂಡುಬಂದಿದೆ.
ಬೆಳ್ತಂಗಡಿಯ ತೆಕ್ಕಾರು ಗ್ರಾಮ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ಕೆಲಕಾಲ ಭಾರೀ ಗುಡುಗು-ಸಿಡಿಲಿನ ಆರ್ಭಟ ಕಂಡುಬಂದಿತು. ಉಜಿರೆ, ಬೆಳ್ತಂಗಡಿ ಹಾಗೂ ಧರ್ಮಸ್ಥಳ ಭಾಗದಲ್ಲಿಯೂ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ತಾಲೂಕಿನ ಇತರ ಕೆಲವೆಡೆ ಭಾರೀ ಗುಡುಗಿನೊಂದಿಗೆ ಕೆಲಹೊತ್ತು ಮಳೆಯಾಗಿದೆ. ವಿಟ್ಲ ಸುತ್ತಮುತ್ತ ಶುಕ್ರವಾರ ಮಿಂಚು, ಗುಡುಗು, ಸಿಡಿಲಿನೊಂದಿಗೆ ಭಾರೀ ಮಳೆ ಸುರಿದಿದೆ. ರಾತ್ರಿ 45 ನಿಮಿಷ ಉತ್ತಮ ಮಳೆಯಾಗಿದೆ.
ಹಗಲಿನಲ್ಲಿ ಬಿಸಿಲಿನ ಬೇಗೆ ಬೇಸಗೆಯ ವಾತಾವರಣವನ್ನು ಸೃಷ್ಟಿಸಿತ್ತು. ರಾತ್ರಿಯ ವೇಳೆ ಮಿಂಚು, ಗುಡುಗು, ಸಿಡಿಲು ಸಹಿತ ಭಾರೀ ಮಳೆ ಸುರಿದಿದೆ. ಆದರೆ ಕೆಲವು ಗಂಟೆ ಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು. ಹಳ್ಳಿ ಪ್ರದೇಶಗಳಲ್ಲಿ ರಾತ್ರಿ ಸಂಪೂರ್ಣ ವಿದ್ಯುತ್ ಕಡಿತ ಉಂಟಾಯಿತು.
ಹಿಂಗಾರು ಮಳೆಗೆ ಹೆಚ್ಚಿದ ನಿರೀಕ್ಷೆ
ಮಳೆ ಕಡಿಮೆಯಾಗಿ ಬೇಸಗೆಯಲ್ಲಿ ಕುಡಿಯುವ ನೀರಿನ ಆತಂಕವೂ ಎದುರಾಗಿತ್ತು. ಪ್ರಸ್ತುತ ಮತ್ತೆ ಮಳೆ ಕಾಣಿಸಿಕೊಳ್ಳುತ್ತಿರುವುದರಿಂದ ಹಿಂಗಾರು ಉತ್ತಮವಾಗಿರ ಬಹುದೇ ಎಂಬ ನಿರೀಕ್ಷೆ ಹುಟ್ಟಿಸುತ್ತಿದೆ. ಈ ಬಾರಿ ಮುಂಗಾರು ವಿಳಂಬವಾದ ಹಿನ್ನೆಲೆಯಲ್ಲಿ ಭತ್ತದ ಬೆಳೆಯ ನೇಜಿ ನಾಟಿ ಕೂಡ ವಿಳಂಬವಾಗಿದ್ದು, ಬಳಿಕ ಮಳೆ ದೂರವಾಗಿ ನೀರಿಲ್ಲದೆ ಭತ್ತದ ಗದ್ದೆಗಳಿಗೆ ತೀವ್ರ ತೊಂದರೆಯಾಗಿತ್ತು. ಹೀಗಾಗಿ ವರ್ಷದ ಮೊದಲ ಏಣೇಲು ಬೆಳೆಯೇ ನೀರಿನ ಕೊರತೆ ಎದುರಿಸುವಂತಾಗಿದೆ. ಪ್ರಸ್ತುತ ಮಳೆಯಾಗುತ್ತಿರುವುದರಿಂದ ಭತ್ತದ ಗದ್ದೆಗಳಿಗೆ ಕೊಂಚ ನೆರವಾಗಬಹುದು ಎನ್ನಲಾಗಿದೆ.
ನಾಪೋಕ್ಲು: ರಾಜ್ಯದಲ್ಲಿಯೇ ಗರಿಷ್ಠ ಮಳೆ
ಮಣಿಪಾಲ: ಶುಕ್ರವಾರ ಬೆಳಗ್ಗೆ ಗಂಟೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಒಂದೆರಡು ಕಡೆ ಮಳೆ ಯಾಯಿತು. ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ 4 ಸೆಂ.ಮೀ. ಮಳೆ ಸುರಿಯಿತು. ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಬಿದ್ದ ಮಳೆಯ ಪ್ರಮಾಣ ಹೀಗಿತ್ತು(ಸೆಂ.ಮೀ.ಗಳಲ್ಲಿ): ಭಾಗಮಂಡಲ, ಸುಳ್ಯ 3, ಪುತ್ತೂರು, ಸೋಮವಾರಪೇಟೆ, ಕೋಣನೂರು, ಮೂರ್ನಾಡು 2, ಪೊನ್ನಂಪೇಟೆ, ಸುಬ್ರಹ್ಮಣ್ಯ ತಲಾ ಸೆಂ. ಮೀ. ಮಳೆಯಾಗಿದೆ.
ಸಿಡಿಲು ಬಡಿದು ಜಾನುವಾರು ಸಾವು
ಹೊಸದುರ್ಗ: ತಾಲೂಕಿನ ಕೊನ್ನನಂಗಾಡ್ ಎಂಬಲ್ಲಿ ಗುರುವಾರ ರಾತ್ರಿ ಸಿಡಿಲು ಬಡಿದು ಹಟ್ಟಿಯಲ್ಲಿದ್ದ ಒಂದು ದನ ಹಾಗೂ ಒಂದು ಕರು ಸಾವಿಗೀಡಾಗಿದೆ. ಮನೆಯವರು ಗ್ರಾ.ಪಂ. ಕಚೇರಿ ಹಾಗೂ ಪಶುಸಂಗೋಪನೆ ಇಲಾಖೆ ಕಚೇರಿಗೆ ಮಾಹಿತಿ ನೀಡಿದ್ದಾರೆ. ಶುಕ್ರವಾರ ಸಂಜೆ ಬಳಿಕ ಕಾಸರಗೋಡು ಜಿಲ್ಲೆಯ ವಿವಿಧ ಕಡೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ.










