Saturday, November 21, 2026
ಸುದ್ದಿ

ಆಭರಣ ಪ್ರಿಯರಿಗೆ ಶುಭಸುದ್ದಿ: ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ – ಕಹಳೆ ನ್ಯೂಸ್

ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಶುಕ್ರವಾರ ಭಾರಿ ಇಳಿಕೆ ಕಂಡುಬಂದಿದ್ದು, ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಅಪರಂಜಿ (24 ಕ್ಯಾರೆಟ್) ಚಿನ್ನದ ದರದಲ್ಲಿ ಪ್ರತಿ ಗ್ರಾಂಗೆ ₹527 ಇಳಿಕೆಯಾಗಿದ್ದರೆ, ಬೆಳ್ಳಿ ದರದಲ್ಲಿ ಪ್ರತಿ ಕೆಜಿಗೆ ಬರೋಬ್ಬರಿ ₹9,965 ಕುಸಿತ ದಾಖಲಾಗಿದೆ. ದರ ಇಳಿಕೆಯಾಗಿರುವುದು ಹೊಸದಾಗಿ ಆಭರಣ ಖರೀದಿಸುವವರಿಗೆ ಮತ್ತು ಹೂಡಿಕೆದಾರರಿಗೆ ಉತ್ತಮ ಅವಕಾಶ ಕಲ್ಪಿಸಿದ್ದರೆ, ಈಗಾಗಲೇ ಹೆಚ್ಚಿನ ಬೆಲೆಗೆ ಹೂಡಿಕೆ ಮಾಡಿರುವವರಲ್ಲಿ ಕೊಂಚ ಆತಂಕ ಮೂಡಿಸಿದೆ.

ಜಾಹೀರಾತು

24 ಕ್ಯಾರೆಟ್ ಚಿನ್ನ: ಶುದ್ಧ 24 ಕ್ಯಾರೆಟ್ (99.9 ಪ್ಯೂರಿಟಿ) 1 ಗ್ರಾಂ ಚಿನ್ನದ ಬೆಲೆಯಲ್ಲಿ ₹527 ಇಳಿಕೆಯಾಗಿದ್ದು, ಇಂದಿನ ದರ ₹12,797ಕ್ಕೆ ತಲುಪಿದೆ. ‘ಕ್ಯಾಪ್ಸ್ ಗೋಲ್ಡ್’ (Caps Gold) ಮಾಹಿತಿಯ ಪ್ರಕಾರ, ಹೈದರಾಬಾದ್‌ನಲ್ಲಿ ಗುರುವಾರ ₹1,33,480 ಇದ್ದ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಶುಕ್ರವಾರ ₹5,320 ಇಳಿಕೆಯಾಗಿ ₹1,28,160ಕ್ಕೆ ತಲುಪಿದೆ. 22 ಕ್ಯಾರೆಟ್ ಚಿನ್ನ: ಆಭರಣ ತಯಾರಿಕೆಗೆ ಸಾಮಾನ್ಯವಾಗಿ ಬಳಸುವ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹1,19,800ರ ಆಸುಪಾಸಿನಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರು, ಮುಂಬೈ, ವಿಶಾಖಪಟ್ಟಣಂ ಹಾಗೂ ವಿಜಯವಾಡ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿಯೂ ಇದೇ ಮಾದರಿಯ ದರ ಕುಸಿತ ಕಂಡುಬಂದಿದೆ. ಬಂಗಾರದ ಬೆನ್ನಲ್ಲೇ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಕುಸಿತವಾಗಿದೆ. ಹೈದರಾಬಾದ್‌ನಲ್ಲಿ ಗುರುವಾರ ಪ್ರತಿ ಕೆಜಿಗೆ ₹1,64,865 ಇದ್ದ ಬೆಳ್ಳಿ ದರವು ಶುಕ್ರವಾರ ₹9,965 ಕಡಿಮೆಯಾಗಿ ₹1,54,900ಕ್ಕೆ ಬಂದು ನಿಂತಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಒಂದು ಔನ್ಸ್ ಚಿನ್ನದ ಬೆಲೆ $3,552 ಹಾಗೂ ಒಂದು ಔನ್ಸ್ ಬೆಳ್ಳಿಯ ಬೆಲೆ $41.93ರಷ್ಟಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು, ಕಚ್ಚಾ ತೈಲ ಬೆಲೆ, ರೂಪಾಯಿ ವಿನಿಮಯ ದರ, ಪೂರೈಕೆ ಸರಪಳಿಯಲ್ಲಿನ ಬದಲಾವಣೆ, ಕೈಗಾರಿಕಾ ಬೇಡಿಕೆ ಹಾಗೂ ಹೂಡಿಕೆದಾರರ ನಡೆಯಿಂದಾಗಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಈ ಏರಿಳಿತ ಉಂಟಾಗುತ್ತಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.