ಗಡಿಪಾರಾಗಿರುವ ನರಸಿಂಹ ಮಾಣಿ ಮನೆಗೆ ಆಸರೆಯಾದ ನಳಿನ್ ಕುಮಾರ್ ಕಟೀಲು ಹಾಗೂ ಉಜ್ವಲ್ ಪ್ರಭು! ಮನೆಯ ಜವಾಬ್ದಾರಿ ವಹಿಸಿಕೊಂಡ ಮಾಜಿ ಸಂಸದ! ಸಹೋದರನ ಸ್ಥಾನದಲ್ಲಿ ನಿಂತು ಮನೆ ಮಗಳ ಮದುವೆಯ ಜವಾಬ್ದಾರಿ ವಹಿಸಿಕೊಂಡ ಆಪತ್ಭಾಂಧವ ಉಜ್ವಲ್ ಪ್ರಭು!-ಕಹಳೆ ನ್ಯೂಸ್

ಪುತ್ತೂರು : ಹಿಂದೂ ಜಾಗರಣಾ ವೇದಿಕೆಯ ಮುಖಂಡ ನರಸಿಂಹ ಮಾಣಿ ಗಡಿಪಾರಿನ ಬೆನ್ನಲ್ಲೇ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಪುತ್ತೂರು ಬಿಜೆಪಿ ನಗರ ಮಂಡಲದ ವ್ಯಾಪಾರ ಪ್ರಕೋಷ್ಠದ ಸಂಚಾಲಕ ಹಾಗೂ ಉದ್ಯಮಿ ಉಜ್ವಲ್ ಪ್ರಭು ಸಹಿತ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕರು ಹಾಗೂ ಸಹ ಸಂಚಾಲಕರು ನರಸಿಂಹ ಮಾಣಿ ಅವರ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದರು.
ಹಿಂದೂ ಜಾಗರಣಾ ವೇದಿಕೆಯ ಸಹ ಸಂಯೋಜಕ ದಿನೇಶ್ ಪಂಜಿಗ ಅವರ ಮಾಹಿತಿಯ ಮೇರೆಗೆ ನಳಿನ್ ಕುಮಾರ್ ಕಟೀಲ್ ಅವರು ನರಸಿಂಹ ಮಾಣಿ ಅವರ ಅರ್ಧದಲ್ಲೇ ನಿಂತ ಮನೆಯನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ವಹಿಸಿದ್ದು, ಇದರ ಜೊತೆಗೆ ಕಟೀಲ್ ಆಪ್ತ, ಉದ್ಯಮಿ ಉಜ್ವಲ್ ಪ್ರಭು ಅವರು ನರಸಿಂಹ ಮಾಣಿ ಅವರ ತಂಗಿಯ ಮದುವೆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಉದ್ಯಮಿಯಾಗಿ ಗುರುತಿಸಿಕೊಂಡ ಉಜ್ವಲ್ ಪ್ರಭು ಅವರ ಮಾನವೀಯ ಗುಣಗಳು ಪ್ರಚಾರಕ್ಕೆ ಸಿಗುವುದು ಕಡಿಮೆ. ಬಲಗೈನಲ್ಲಿ ದಾನ ಮಾಡಿದ್ದು ಎಡಗೈಗೂ ಗೊತ್ತಾಗಬಾರದು ಎನ್ನುವ ವ್ಯಕ್ತಿತ್ವ. ಈ ನಿಟ್ಟಿನಲ್ಲಿ ಅವರಿಗೆ ಕರೆ ಮಾಡಿದಾಗ ಮಾತನಾಡಿದ ಉಜ್ವಲ್ ಪ್ರಭು ನಾನು ಅಧಿಕಾರಕ್ಕಾಗಿ ಆಸೆ ಪಡುವವನಲ್ಲ. ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಹೀರೋ ಆಗುವವರು ನಾವಲ್ಲ. ನಮಗೆ ಪ್ರಚಾರ ಬೇಡ. ಹಿಂದೂ ಯುವಕರಿಗಾಗಿ ನಾನು ಸದಾ ಸಿದ್ಧ ಎಂದು ಹಸನ್ಮುಖಿಯಾಗಿ ಹೇಳಿದರು.
ಉಜ್ವಲ್ ಪ್ರಭು ಅವರು ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದು, ದೇವಸ್ಥಾನದ ಕೆಲಸ ಕಾರ್ಯಗಳಿಗೆ ಸಹಾಯಹಸ್ತ ಚಾಚಿದ್ದಾರೆ. ಜೊತೆಗೆ, ಅನೇಕ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ ಜೀವ ತುಂಬಿದ್ದಾರೆ. ಇದರ ಕುರಿತು ಎಂದಿಗೂ ಪ್ರಚಾರ ಬಯಸದ ಅವರು ಸಹಾಯ ಕಾರ್ಯವನ್ನು ತುಂಬಾ ಗೌಪ್ಯವಾಗಿಡುತ್ತಾರೆ. ಇದು ಅವರ ಮೇರು ವ್ಯಕ್ತಿತ್ವಕ್ಕೆ ಸಾಕ್ಷಿ ಎಂದು ದಿನೇಶ್ ಪಂಜಿಗ ಹೇಳಿದ್ದಾರೆ.
ಒಬ್ಬ ಸಹೋದರನ ಸ್ಥಾನದಲ್ಲಿ ನಿಂತು ಮದುವೆಯ ಬಹುತೇಕ ಖರ್ಚಿನ ಭಾಗವನ್ನು ಉಜ್ವಲ್ ಅವರು ವಹಿಸಿಕೊಂಡಿದ್ದು, ಇದು ಗೌಪ್ಯವಾಗಿರಲಿ ಎಂದಿದ್ದರು. ಆದರೆ ಅವರ ಆಪ್ತ ಮೂಲಗಳು ಇದರ ಕುರಿತು ದೃಢಪಡಿಸಿದ್ದು, ನರಸಿಂಹ ಮಾಣಿ ಅವರ ತಂಗಿಗೆ ಇನ್ನೊಬ್ಬ ಸಹೋದರನಾಗಿ ಉಜ್ವಲ್ ಅವರು ನಿಂತಿದ್ದು, ಹಿಂದೂ ಯುವಕರ ಕಷ್ಟಕ್ಕೆ ಸ್ಪಂದಿಸುವ ಯುವ ನಾಯಕನಾಗಿ ಕಾರ್ಯಕರ್ತರ ಅಪಾರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.











