ಉಡುಪಿ ವಲಯ ಮಟ್ಟದ ಶಿಕ್ಷಕರ ದಿನಾಚರಣೆ ಸಂಭ್ರಮ : ನಿವೃತ್ತ ಶಿಕ್ಷಕರು, ದಾನಿಗಳಿಗೆ ಗೌರವ : ಅಗಲಿದ ಶಿಕ್ಷಕರಿಗೆ ಭಾವಪೂರ್ಣ ಶ್ರದ್ಧಾಂಜಲಿ – ಕಹಳೆ ನ್ಯೂಸ್

ಉಡುಪಿ: ಬದಲಾಗುತ್ತಿರುವ ತಂತ್ರಜ್ಞಾನದ ಕಾಲಘಟ್ಟಕ್ಕೆ ಶಿಕ್ಷಕರು ತಮ್ಮನ್ನು ತಾವು ರೂಪಿಸಿಕೊಂಡು, ಒತ್ತಡದ ನಡುವೆಯೂ ಶಾಂತ ಮನಸ್ಸಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಪರಿಣಾಮಕಾರಿ ಬೋಧನೆ ಸಾಧ್ಯ. ಶಿಕ್ಷಕರು ವ್ಯವಧಾನ, ಸಹನೆ ಹಾಗೂ ಎಲ್ಲರೊಂದಿಗೆ ಬೆರೆಯುವ ಗುಣವನ್ನು ಬೆಳೆಸಿಕೊಂಡು ಉತ್ತಮ ಸಮಾಜ ನಿರ್ಮಾಣದ ರೂವಾರಿಗಳಾಗಬೇಕು ಎಂದು ಪ್ರಧಾನ ಉಪನ್ಯಾಸಕ ಡಾ. ವಿರೂಪಾಕ್ಷ ದೇವರಮನೆ ಕರೆ ನೀಡಿದರು.
ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ವತಿಯಿಂದ 2026–27ನೇ ಸಾಲಿನ ಉಡುಪಿ ವಲಯ ಮಟ್ಟದ ಶಿಕ್ಷಕರ ದಿನಾಚರಣೆ ಸಂತ ಸಿಸಿಲಿ ಪ್ರೌಢಶಾಲೆ, ಉಡುಪಿಯಲ್ಲಿ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ ವಹಿಸಿದ್ದರು. ಉಡುಪಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶ್ರೀ ರವೀಂದ್ರ ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೀಪ ಪ್ರಜ್ವಲನೆ ನೆರವೇರಿಸಿ ಪ್ರಧಾನ ಉಪನ್ಯಾಸ ನೀಡಿದ ಡಾ. ವಿರೂಪಾಕ್ಷ ದೇವರಮನೆ, ಶಿಕ್ಷಕರ ವೃತ್ತಿ ಕೇವಲ ಪಾಠ ಬೋಧಿಸುವುದಕ್ಕೆ ಸೀಮಿತವಾಗಿರದೆ, ಉತ್ತಮ ವ್ಯಕ್ತಿತ್ವ ಹಾಗೂ ಮೌಲ್ಯಗಳನ್ನು ರೂಪಿಸುವ ಮಹತ್ತರ ಜವಾಬ್ದಾರಿಯಾಗಿದೆ ಎಂದರು.
ಅಧ್ಯಕ್ಷೀಯ ಭಾಷಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ ಅವರು ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿ, ಶಿಕ್ಷಕರು ತಮ್ಮ ಕರ್ತವ್ಯವನ್ನು ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮರ್ಪಣೆಯಿಂದ ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು. ಮಕ್ಕಳ ಭವಿಷ್ಯ ರೂಪಿಸುವ ಪವಿತ್ರ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರು ಇದೇ ಉತ್ಸಾಹದಿಂದ ಇನ್ನಷ್ಟು ಹೊಸತನದ ಕಾರ್ಯಗಳನ್ನು ಕೈಗೊಂಡು, ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಪ್ರೇರಣೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಬರಹಗಳ ಸಂಚಿಕೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಉಡುಪಿ ಶಾಖೆಯ ಪ್ರಬಂಧಕರಾದ ಶ್ರೀ ಮಂಜುನಾಥ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಸಂತ ಸಿಸಿಲಿ ಸಂಸ್ಥೆಯ ಸಂಚಾಲಕರಾದ ಪ್ರಿಯಾ ಮರಿಯ, ಮುಖ್ಯೋಪಾಧ್ಯಾಯರಾದ ಪ್ರೀತಿ ಕ್ರಾಸ್ತಾ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಉಪಾಧ್ಯಕ್ಷರಾದ ರೂಪಕಿಣಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಂಜೀವ್ ನಾಯಕ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿರಣ್ ಕುಮಾರ್, ಗ್ರೇಡ್–1 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ವರದರಾಜ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ದಿನೇಶ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಸವಿತಾ ಹಾಗೂ ಇತರ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಬಿ.ಆರ್.ಸಿ.ಯ ಸಿಬ್ಬಂದಿ ವರ್ಗ, ಉಡುಪಿ ವಲಯದ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರು ಭಾಗವಹಿಸಿದ್ದರು. ನಿವೃತ್ತ ಶಿಕ್ಷಕರ ಸೇವೆಯನ್ನು ಸ್ಮರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿವಿಧ ಪ್ರಾಯೋಜಕರನ್ನ ಗೌರವಿಸಿ ಕೃತಜ್ಞತೆ ಸಲ್ಲಿಸಲಾಯಿತು. ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಸೇವೆ ಸಲ್ಲಿಸಿ ಅಗಲಿದ ಶಿಕ್ಷಕರನ್ನು ಸ್ಮರಿಸಿ ಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗುರುವಿನ ಸೇವೆ, ಸಮರ್ಪಣೆ ಹಾಗೂ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವನ್ನು ಸಾರುವ ಅರ್ಥಪೂರ್ಣ ಕಾರ್ಯಕ್ರಮವು ಶಿಕ್ಷಕರಲ್ಲಿ ಹೊಸ ಚೈತನ್ಯ ಮೂಡಿಸಿತು.
ಕಾರ್ಯಕ್ರಮವನ್ನು ಶ್ರೀಯುತ ರವೀಂದ್ರ ಹಾಗೂ ಶ್ರೀಮತಿ ಮಾಲತಿ ವಕ್ವಾಡಿ ನಿರ್ವಹಿಸಿದರು.











