ತಂತ್ರಜ್ಞಾನ ಕ್ಷೇತ್ರದ ಪ್ರಗತಿಯಲ್ಲಿ ರಸಾಯನಶಾಸ್ತ್ರದ ಪಾತ್ರ ಪ್ರಮುಖವಾಗಿದೆ : ಡಾ. ದಿವ್ಯಾ ಎನ್ ಶೆಟ್ಟಿ – ಕಹಳೆ ನ್ಯೂಸ್

ಪುತ್ತೂರು : ರಸಾಯನಶಾಸ್ತ್ರವು ಕೇವಲ ಪುಸ್ತಕಗಳಲ್ಲಿರುವ ಸೂತ್ರಗಳು, ರಾಸಾಯನಿಕ ಸಮೀಕರಣಗಳು ಮತ್ತು ಪರೀಕ್ಷೆಗಳ ಅಂಕಗಳಿಗೆ ಮಾತ್ರ ಸೀಮಿತವಾದ ವಿಷಯವಲ್ಲ. ನಮ್ಮ ದಿನನಿತ್ಯದ ಪ್ರತಿಯೊಂದು ಚಟುವಟಿಕೆಯ ಹಂತದಲ್ಲೂ ರಸಾಯನಶಾಸ್ತ್ರವು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ನಾವು ಉಸಿರಾಡುವ ಗಾಳಿಯಿಂದ ಹಿಡಿದು, ಸೇವಿಸುವ ಆಹಾರ, ಬಳಸುವ ಔಷಧಗಳು ಹಾಗೂ ಧರಿಸುವ ಉಡುಪುಗಳವರೆಗೆ ಪ್ರತಿಯೊಂದರಲ್ಲೂ ಇದರ ಪ್ರಭಾವವಿದೆ. ಇದು ಎಲ್ಲಾ ಕ್ಷೇತ್ರಗಳೊಂದಿಗೂ ಪರಸ್ಪರ ಸಂಬಂಧ ಹೊಂದಿದೆ. ಜೀವಜಗತ್ತಿನ ರಹಸ್ಯಗಳನ್ನು ಮತ್ತು ಸುತ್ತಮುತ್ತಲಿನ ಬದಲಾವಣೆಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಳ್ಳಲು ರಸಾಯನಶಾಸ್ತ್ರವೇ ಪ್ರಮುಖ ಆಧಾರವಾಗಿದೆ ಎಂದು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ದಿವ್ಯಾ ಎನ್ ಶೆಟ್ಟಿ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗ ಇದರ ಸಹಯೋಗದಲ್ಲಿ ನಡೆದ ‘ಕೆಮಿಸ್ಟ್ರಿ ಬಿಯಾಂಡ್ ಕ್ಲಾಸ್ ರೂಮ್’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಶೋಧನಾ ಕೇಂದ್ರದ ಸಂಯೋಜಕಿ ಹಾಗೂ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ ಮಾತನಾಡಿ, ರಸಾಯನಶಾಸ್ತ್ರದ ಅಧ್ಯಯನವು ಕೇವಲ ಜ್ಞಾನಾರ್ಜನೆಯಲ್ಲ, ಅದೊಂದು ಅಪಾರ ಆನಂದ ನೀಡುವ ಅದ್ಭುತ ಅನುಭವ. ಈ ಉದಯೋನ್ಮುಖ ಕ್ಷೇತ್ರದಲ್ಲಿ ಯುವ ಪ್ರತಿಭೆಗಳಿಗೆ ಅನಂತ ಅವಕಾಶಗಳಿವೆ. ಅತ್ಯಲ್ಪ ಪ್ರಮಾಣದ ರಾಸಾಯನಿಕವು ಬೃಹತ್ ಬದಲಾವಣೆ ತರುವಂತೆ, ನಿಮ್ಮ ನಿರಂತರವಾದ ಸಣ್ಣ ಪ್ರಯತ್ನಗಳೇ ಭವಿಷ್ಯದಲ್ಲಿ ಮಹತ್ತರವಾದ ಯಶಸ್ಸಿಗೆ
ಅಡಿಪಾಯವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ಸ್ಮಿತಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ಹರ್ಷಿತಾ ಸ್ವಾಗತಿಸಿ, ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಅನುಶ್ರೀ ವಂದಿಸಿ, ಪ್ರತೀಕ್ಷಾ ನಿರೂಪಿಸಿದರು.











