ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ 2026-27ನೇ ಸಾಲಿನ ‘ಜಾಗೃತಿ’ ವಾರ್ಷಿಕ ಸಂಚಿಕೆ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು.ಸೆ,3: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, (ಸ್ವಾಯತ್ತ) ಇದರ ಜಾಗೃತಿ ಸಮಿತಿ, ಸೌರಭ ಪ್ರಸಾರಾಂಗ ಹಾಗೂ ಐಕ್ಯೂಎಸಿ ಘಟಕದ ಜಂಟಿ ಆಶ್ರಯದಲ್ಲಿ 2026-27ನೇ ಸಾಲಿನ ‘ಜಾಗೃತಿ’ ವಾರ್ಷಿಕ ಸಂಚಿಕೆಯ ಬಿಡುಗಡೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ .ಕೆ. ಎನ್ ಮಾತನಾಡಿ, ಕಥೆ, ಕವನ, ಲೇಖನ ಮುಂತಾದ ವಿವಿಧ ಬರಹ ಪ್ರಕಾರಗಳನ್ನು ದಾಖಲಿಸಲು ಈ ವಾರ್ಷಿಕ ಸಂಚಿಕೆಯು ಬಹುದೊಡ್ಡ ಮಾಧ್ಯಮವಾಗಿದೆ. ಇಂದು ಬರಹಗಳನ್ನು ದಾಖಲಿಸಲು ಹಲವಾರು ಮಾಧ್ಯಮಗಳಿವೆ. ಆದರೆ ಪುಸ್ತಕ ರೂಪದಲ್ಲಿ ದಾಖಲಾದಾಗ ಅದಕ್ಕೆ ಇರುವ ಮಾನ್ಯತೆ ಗೌರವ ತುಂಬಾ ದೊಡ್ಡದು. ಒಂದು ಬರಹಕ್ಕೆ ನಮ್ಮ ಜೀವನವನ್ನು ಬದಲಾಯಿಸುವ ಮತ್ತು ಇತರರನ್ನು ಬೆಳೆಸುವ ಶಕ್ತಿಯೂ ಇದೆ ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಪೆÇ್ರ. ಶ್ರೀಕೃಷ್ಣ ಗಣರಾಜ ಭಟ್ ಮಾತನಾಡಿ, ಕಳೆದ ಶೈಕ್ಷಣಿಕ ವರ್ಷದ, ಚಟುವಟಿಕೆಗಳ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಬರಹಗಳನ್ನು ಹೊತ್ತಂತಹ ಒಂದು ವಾರ್ಷಿಕ ಸಂಚಿಕೆ ‘ಜಾಗೃತಿ’. ಇದು ಸುಂದರವಾಗಿ ಮೂಡಿ ಬರಬೇಕಾದರೆ ಅಷ್ಟು ಸುಲಭದ ಕೆಲಸವಲ್ಲ. ಕಾಲೇಜಿನ ಚಟುವಟಿಕೆಗಳನ್ನು ದಾಖಲಿಸಿ ಓದುಗರಿಗೆ ಉತ್ತಮ ಅನುಭವ ನೀಡುವಲ್ಲಿ ಅದರ ಹಿಂದಿನ ಕಷ್ಟಗಳು ಅದರಲ್ಲಿ ತೊಡಗಿಸಿಕೊಂಡವರಿಗೆ ಮಾತ್ರ ತಿಳಿದಿರುತ್ತದೆ ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಪರೀಕ್ಷಾಂಗ ಕುಲ ಸಚಿವ ಮತ್ತು ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಾಗೃತಿ ವಾರ್ಷಿಕ ಸಂಚಿಕೆಯ ಸಂಪಾದಕಿ, ವಿಶೇಷ ಅಧಿಕಾರಿ (ಶಿಕ್ಷಕ ಅಭಿವೃದ್ಧಿ) ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ಎಸ್. ಸ್ವಾಗತಿಸಿ, ಸೌರಭ ಪ್ರಸರಂಗದ ನಿರ್ದೇಶಕ, ವಿಶೇಷ ಅಧಿಕಾರಿ(ಆಡಳಿತ) ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ ವಂದಿಸಿ, ಬಿಎ ವಿಭಾಗದ ವಿದ್ಯಾರ್ಥಿನಿ ಕೃತಿಕಾ ಕಣಿಯಾರು ನಿರೂಪಿಸಿದರು.











