
ಬೆಂಗಳೂರು: ಯಶವಂತಪುರ(Yeshwantpur) ಮತ್ತು ಮಂಗಳೂರು ಸೆಂಟ್ರಲ್ ನಡುವೆ ರೈಲಿನ ಚಾಲನಾ ಸಮಯ ಹಾಗೂ ಮಾರ್ಗದ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್ ಖಾಲಿ ರೇಕ್‌ನ ಪ್ರಾಯೋಗಿಕ ಸಂಚಾರ ಇಂದು ಯಶಸ್ವಿಯಾಗಿ ಆರಂಭವಾಗಿದೆ.
ಬೆಳಗ್ಗೆ ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಟ ಈ ಪ್ರಾಯೋಗಿಕ ರೈಲಿನ ಚಾಲನಾ ಸಮಯವನ್ನು ಅಂದಾಜಿಸಿ ವಿವಿಧ ವಿಭಾಗಗಳಲ್ಲಿನ ಗರಿಷ್ಠ ವೇಗವನ್ನು ಪರಿಶೀಲಿಸಲಾಗುತ್ತದೆ.
ಈ ಪ್ರಾಯೋಗಿಕ ಸಂಚಾರದ ಸಂದರ್ಭದಲ್ಲಿ ಕಾರ್ಯಾಚರಣೆ, ರೋಲಿಂಗ್ ಸ್ಟಾಕ್ ಮತ್ತು ವಿದ್ಯುತ್ ವಿತರಣೆ (TRO/TRD) ಎಂಜಿನಿಯರಿಂಗ್ ಹಾಗೂ ಮೆಕ್ಯಾನಿಕಲ್ ಸೇರಿದಂತೆ ಪ್ರಮುಖ ವಿಭಾಗಗಳ ಹಿರಿಯ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿ ರೈಲಿನಲ್ಲಿದ್ದು ಸಮಗ್ರ ಪರಿಶೀಲನೆ ನಡೆಸುತ್ತಿದ್ದಾರೆ.
ರೈಲಿನ ಸುರಕ್ಷತಾ ಮಾನದಂಡಗಳು, ಹಳಿಗಳ ಸ್ಥಿತಿಗತಿ, ಬ್ರೇಕಿಂಗ್ ಕ್ಷಮತೆ ಹಾಗೂ ವಿದ್ಯುತ್ ಎಳೆತದ ಪ್ರತಿಕ್ರಿಯೆಗಳನ್ನು ತಂಡವು ಸೂಕ್ಷ್ಮವಾಗಿ ಮೌಲ್ಯಮಾಪನ ಮಾಡುತ್ತಿದೆ. ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ಸಂಗ್ರಹಿಸಲಾದ ತಾಂತ್ರಿಕ ದತ್ತಾಂಶಗಳನ್ನು ಆಧರಿಸಿ, ರೈಲ್ವೆ ಅಧಿಕಾರಿಗಳು ವಾಣಿಜ್ಯ ವೇಳಾಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ.
ಆಗಸ್ಟ್ 11 ರಿಂದ ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿತ್ತು. ಘಾಟ್ ಪ್ರದೇಶದಲ್ಲಿ ಸಂಚರಿಸಲು ಅತ್ಯಗತ್ಯವಾದ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB) ವ್ಯವಸ್ಥೆ ಹೊಂದಿರುವ ರೇಕ್ ಲಭ್ಯವಿಲ್ಲದ ಕಾರಣ ಪ್ರಕ್ರಿಯೆ ತಡವಾಗಿತ್ತು. 350 ಕಿ.ಮೀ ದೂರದ ಮಾರ್ಗದಲ್ಲಿ ಪ್ರಯೋಗಿಕ ಪರೀಕ್ಷೆ ವೇಳೆ ಹಾಸನ ಜಂಕ್ಷನ್, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆಯಲ್ಲಿ ಮಾತ್ರ ರೈಲಿಗೆ ನಿಲುಗಡೆ ನೀಡಲಾಗಿದೆ.
AEB ತಂತ್ರಜ್ಞಾನ ಕಡ್ಡಾಯ ಯಾಕೆ?
ವಂದೇ ಭಾರತ್ ರೈಲು ಸಾಮಾನ್ಯವಾಗಿ ಅತ್ಯಾಧುನಿಕ ಎಲೆಕ್ಟ್ರೋ-ನ್ಯೂಮ್ಯಾಟಿಕ್ (EP) ಡಿಸ್ಕ್ ಬ್ರೇಕ್ ಹಾಗೂ Regenerative Braking ವ್ಯವಸ್ಥೆಯನ್ನು ಹೊಂದಿರುತ್ತದೆ. ಆದರೆ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಘಾಟ್ ಮಾರ್ಗವು ಅತ್ಯಂತ ಕಡಿದಾದ ಇಳಿಜಾರು ಹೊಂದಿದೆ.
ಈಗ ಈ ಮಾರ್ಗದಲ್ಲಿ ಚಲಿಸುವ ರೈಲುಗಳ ಸುರಕ್ಷತೆಗಾಗಿ ಬ್ಯಾಂಕರ್ ಇಂಜಿನ್‌ಗಳನ್ನು (ಹೆಚ್ಚುವರಿ ಇಂಜಿನ್) ಜೋಡಿಸಲಾಗುತ್ತದೆ. ಇವುಗಳನ್ನು ಜೋಡಿಸಲು ಮತ್ತು ಕಳಚಲು ಸುಮಾರು 15 ನಿಮಿಷ ಬೇಕಾಗುತ್ತದೆ. ವಂದೇ ಭಾರತ್ ರೈಲಿಗೆ ಈ ರೀತಿ ಹೊರಗಿನಿಂದ ಬ್ಯಾಂಕರ್ ಎಂಜಿನ್ ಜೋಡಿಸಬೇಕಾದರೆ ರೈಲಿನ ಮುಂಭಾಗದ ನೋಸ್ (Nose) ಭಾಗವನ್ನು ಕಳಚಬೇಕಾಗುತ್ತದೆ. ಇದು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಜೊತೆಗೆ ರೈಲಿನ ಅತಿವೇಗದ ಉದ್ದೇಶವನ್ನೇ ವ್ಯರ್ಥಗೊಳಿಸುತ್ತದೆ.
ಈ ಕಾರಣಕ್ಕೆ ರೈಲಿನಲ್ಲೇ ಸ್ವಯಂಚಾಲಿತವಾಗಿ ಗರಿಷ್ಠ 30 ಕಿ.ಮೀ ವೇಗವನ್ನು ನಿಯಂತ್ರಿಸುವ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ವ್ಯವಸ್ಥೆ ಹೊಂದಿರುವ ವಿಶೇಷ ರೇಕ್‌ಗಾಗಿ ರೈಲ್ವೇ ಕಾಯುತ್ತಿತ್ತು. ಈಗ ಎಇಬಿ ವ್ಯವಸ್ಥೆ ಹೊಂದಿರುವ ರೇಕ್ ಬಂದಿರುವುದರಿಂದ ಪ್ರಾಯೋಗಿಕ ಸಂಚಾರ ಯಶಸ್ವಿಯಾದ ತಕ್ಷಣವೇ ವಾಣಿಜ್ಯ ಸಂಚಾರಕ್ಕೆ ರೈಲ್ವೆ ಮಂಡಳಿಯಿಂದ ಅಧಿಕೃತ ಅನುಮೋದನೆ ಸಿಗಲಿದೆ.











