Recent Posts

Saturday, August 29, 2026
ಸುದ್ದಿ

ಸಮುದ್ರ ಮಾತೆಗೆ ಕ್ಷಿರಾ ಅರ್ಪಣೆ ಸಮೃದ್ಧ ಮೀನುಗಾರಿಕೆಗೆ ಪ್ರಾರ್ಥನೆ: ಉದ್ಯಾವರ ಮಟ್ಟು ಕೊಪ್ಪಳದಲ್ಲಿ ಶ್ರೀ ರಾಮ ಭಜನಾ ಮಂದಿರ ದ ಸರ್ವ ಸದಸ್ಯರ ಶ್ರದ್ಧಾ-ಭಕ್ತಿಯ ಸಮುದ್ರ ಪೂಜೆ..! – ಕಹಳೆ ನ್ಯೂಸ್

​ಉದ್ಯಾವರ : ಸಾವಿರಾರು ವರ್ಷಗಳಿಂದಲೂ ಸಮುದ್ರ ತಾಯಿಯ ಮಡಿಲಲ್ಲಿ ಬದುಕು ಕಟ್ಟಿಕೊಂಡಿರುವ ಕರಾವಳಿಯ ಮೀನುಗಾರರು, ತಮ್ಮ ಜನ್ಮಧಾತ್ರಿಗೆ ಪ್ರೀತಿ-ಗೌರವ ಅರ್ಪಿಸುವ ‘ಸಮುದ್ರ ಪೂಜೆ’ (ನಾರಾಯಳಿ ಪೂರ್ಣಿಮಾ) ಕಾರ್ಯಕ್ರಮವನ್ನು ಉದ್ಯಾವರ ಮಟ್ಟು ಕೊಪ್ಪಳದ ಶ್ರೀರಾಮ ಭಜನಾ ಮಂದಿರದ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು.

ಜಾಹೀರಾತು

​ಮೀನುಗಾರರಿಗೆ ಸಮುದ್ರ ಬರೀ ಕಡಲ ನೀರಲ್ಲ : ಅದು ತಮ್ಮನ್ನು ಹೆತ್ತ ತಾಯಿಯಂತೆ ಪೊರೆಯುವ ಜನ್ಮಧಾತ್ರಿ, ನಿಧಿಗಳನ್ನು ಒಡಲಲ್ಲಿಟ್ಟುಕೊಂಡ ರತ್ನಾಕರ, ಹಾಗೂ ನಿತ್ಯ ಬದುಕಿಗೆ ಪ್ರಸಾದ ನೀಡುವ ಜೀವದಾತ. ಮಳೆಗಾಲದ ಆರ್ಭಟ ಕಳೆದು, ರೌದ್ರರೂಪದಲ್ಲಿದ್ದ ಸಮುದ್ರವು ಶ್ರಾವಣ ಪೂರ್ಣಿಮೆಯ ವೇಳೆಗೆ ಶಾಂತಸ್ವರೂಪಕ್ಕೆ ತಿರುಗುತ್ತದೆ. ಈ ಸಂದರ್ಭದಲ್ಲಿ ಕಡಲಿಗಿಳಿದು ಆಳ ಸಮುದ್ರದ ಕಸುಬು (ಮೀನುಗಾರಿಕೆ) ಪ್ರಾರಂಭಿಸುವ ಮುನ್ನ ಮೀನುಗಾರರು ಕಡಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸುವುದು ಅನಾದಿಕಾಲದಿಂದಲೂ ನಡೆದುಬಂದ ಪವಿತ್ರ ಸಂಸ್ಕೃತಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

​ಸಮುದ್ರಕ್ಕೆ ಸದ್ಭಾವದ ಕ್ಷೀರಾಭಿಷೇಕ: ಕಾರ್ಯಕ್ರಮದಲ್ಲಿ ಶ್ರೀರಾಮ ಭಕ್ತರು ಭೋರ್ಗರೆಯುವ ವಿಶಾಲ ಸಮುದ್ರಕ್ಕೆ ಹಾಲು, ಅರಶಿನ, ಕುಂಕುಮ, ತೆಂಗಿನಕಾಯಿ ಹಾಗೂ ಫಲ-ತಾಂಬೂಲಗಳನ್ನು ಅರ್ಪಿಸಿ, ಸದ್ಭಾವದ ಕ್ಷೀರಾಭಿಷೇಕ ಮಾಡಿದರು. ಗಾಳಿ, ಬಿರುಗಾಳಿ, ಸುಂಟರಗಾಳಿಯಂತಹ ನೈಸರ್ಗಿಕ ವಿಕೋಪಗಳಿಂದ ತಮ್ಮನ್ನು ರಕ್ಷಿಸುವಂತೆ, ಸಮೃದ್ಧ ಮೀನುಗಾರಿಕೆ ಕರುಣಿಸುವಂತೆ ಹಾಗೂ ಕೌಟುಂಬಿಕ ಜೀವನೋಪಾಯವು ಸುಲಭವಾಗಿ ಸಾಗುವಂತೆ ಕಡಲಮ್ಮನಲ್ಲಿ ಪ್ರಾರ್ಥಿಸಿಕೊಂಡರು. ಪ್ರಕೃತಿಯನ್ನೇ ದೇವರೆಂದು ಭಾವಿಸಿ ಗೌರವಿಸುವ ಭಾರತೀಯ ಸನಾತನ ಸಂಸ್ಕೃತಿಯ ಸುಂದರ ಕ್ಷಣಗಳಿಗೆ ಮಟ್ಟು ಕೊಪ್ಪಳದ ಕಡಲತೀರ ಸಾಕ್ಷಿಯಾಯಿತು.

​ಪೂಜಾ ಕೈಂಕರ್ಯ ಹಾಗೂ ಗಣ್ಯರ ಉಪಸ್ಥಿತಿ: ಈ ಧಾರ್ಮಿಕ ಮತ್ತು ಪವಿತ್ರ ಪೂಜಾ ಕೈಂಕರ್ಯಗಳನ್ನು ಸೀತಾರಾಮ ಭಾಗವತ ತಂತ್ರಿಗಳು ವಿಧಿ-ವಿಧಾನಗಳೊಂದಿಗೆ ನೆರವೇರಿಸಿಕೊಟ್ಟರು. ​ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ರಾಜೇಶ್ ಡಿ. ಸುವರ್ಣ ಅವರ ನೇತೃತ್ವದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಮಂದಿರದ ಸರ್ವ ಸದಸ್ಯರು, ಭಜನಾ ಮಂಡಳಿ, ಮಹಿಳಾ ಮಂಡಳಿ, ಭಕ್ತ ಮಂಡಳಿ ಹಾಗೂ ಊರ-ಪರಊರಿನ ನೂರಾರು ಶ್ರೀರಾಮ ಭಕ್ತರು ಉಪಸ್ಥಿತರಿದ್ದು ಪ್ರಕೃತಿ ಪೂಜೆಯಲ್ಲಿ ಭಾಗವಹಿಸಿ ಪುನೀತರಾದರು.