ರಾಜ್ಯ ಸಹಕಾರ ಮಹಾಮಂಡಳ ಚುನಾವಣೆಯಲ್ಲಿ ಶಶಿಕುಮಾರ್ ರೈ ಬಾಲ್ಯೊಟ್ಟುಗೆ 18ಕ್ಕೆ 18 ಮತ ; ದಕ್ಷಿಣ ಕನ್ನಡದಿಂದ ಮೊದಲ ನಿರ್ದೇಶಕರಾಗಿ ಆಯ್ಕೆ – ಕಹಳೆ ನ್ಯೂಸ್

ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇದರ ಆಡಳಿತ ಮಂಡಳಿ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಮೈಸೂರು ವಿಭಾಗದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು 18ಕ್ಕೆ 18 ಮತಗಳನ್ನು ಪಡೆದು ಸರ್ವಾನುಮತದ ಬೆಂಬಲದೊಂದಿಗೆ ಆಯ್ಕೆಯಾಗಿದ್ದಾರೆ.
ಈ ಗೆಲುವಿನೊಂದಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ 62 ವರ್ಷಗಳ ಇತಿಹಾಸದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ನಿರ್ದೇಶಕರಾಗಿ ಆಯ್ಕೆಯಾದ ಮೊದಲ ಪ್ರತಿನಿಧಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಸಹಕಾರ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಶಶಿಕುಮಾರ್ ರೈ ಅವರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಹಾಗೂ ಇರ್ದೆ-ಬೆಟ್ಟಂಪಾಡಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
ಇದೀಗ ರಾಜ್ಯ ಮಟ್ಟದ ಸಹಕಾರ ಸಂಸ್ಥೆಯ ಆಡಳಿತ ಮಂಡಳಿಗೆ ಆಯ್ಕೆಯಾಗಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಕ್ಷೇತ್ರಕ್ಕೆ ಮಹತ್ವದ ಸಾಧನೆಯಾಗಿ ಗುರುತಿಸಿಕೊಂಡಿದೆ. ಯಾವುದೇ ವಿರೋಧವಿಲ್ಲದೆ 18ಕ್ಕೆ 18 ಮತಗಳ ಸಂಪೂರ್ಣ ಬೆಂಬಲ ಪಡೆದಿರುವುದು ಅವರ ಸಹಕಾರಿ ಕ್ಷೇತ್ರದ ಸೇವೆ, ಅನುಭವ ಹಾಗೂ ನಾಯಕತ್ವಕ್ಕೆ ದೊರೆತ ಮಾನ್ಯತೆ ಎಂದು ಸಹಕಾರ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಶಶಿಕುಮಾರ್ ರೈ ಬಾಲ್ಯೊಟ್ಟು ಅವರ ಐತಿಹಾಸಿಕ ಗೆಲುವಿಗೆ ಜಿಲ್ಲೆಯ ಸಹಕಾರ ಕ್ಷೇತ್ರದ ಪ್ರಮುಖರು, ವಿವಿಧ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.











