ಕಡಬ: ಆ್ಯಸಿಡ್ ದಾಳಿ ಪ್ರಕರಣ: ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹3 ಲಕ್ಷ ದಂಡ : ಆ್ಯಸಿಡ್ ದಾಳಿ ಪ್ರಕರಣದ ಅಪರಾಧಿಗೆ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 3 ಲಕ್ಷ ದಂಡ – ಕಹಳೆ ನ್ಯೂಸ್

ಕಡಬ(ದಕ್ಷಿಣ ಕನ್ನಡ): ಮಹಿಳೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣದಲ್ಲಿ ಅಪರಾಧಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 3.05 ಲಕ್ಷ ರೂ. ದಂಡ ವಿಧಿಸಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಕಡಬ ಕೊಡಿಂಬಾಳ ನಿವಾಸಿ ಜಯಾನಂದ ಕೆ. (60) ಶಿಕ್ಷೆಗೆ ಗುರಿಯಾದವ. ಈ ಸಂಬಂಧ 2020ರಲ್ಲಿ ಆರೋಪಿಯ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ.06/2020 ಭಾರತೀಯ ದಂಡ ಸಂಹಿತೆಯ (IPC) ಕಲಂ 354A, 509, 504, 506, 448, 307 ಹಾಗೂ 326A ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಆಗಿನ ಪುತ್ತೂರು ಮಹಿಳಾ ಠಾಣೆಯ ನಿರೀಕ್ಷಕಿ ಕುಸುಮಧರ ಅವರು ಆರೋಪಿಯ ವಿರುದ್ಧ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಸಾಕ್ಷ್ಯಾಧಾರಗಳು ಹಾಗೂ ದಾಖಲೆಗಳನ್ನು ಪರಿಗಣಿಸಿ, ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿದೆ. ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಅವರು ಅಪರಾಧಿಗೆ ಭಾರತೀಯ ದಂಡ ಸಂಹಿತೆಯ ಕಲಂ 326A ಅಡಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 3,00,000 ರೂ. ದಂಡ ವಿಧಿಸಿದ್ದಾರೆ. ಅಲ್ಲದೇ, ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 2 ವರ್ಷಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ
ಅದೇ ರೀತಿ, ಕಲಂ 504ರ ಅಡಿ 1 ವರ್ಷದ ಕಾರಾಗೃಹ ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 3 ತಿಂಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ.
ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ಸೇರಿದಂತೆ ಗಂಭೀರ ಸ್ವರೂಪದ ಅಪರಾಧಗಳು ನಡೆದಾಗ ಅವುಗಳ ತನಿಖೆ ಹಾಗೂ ನ್ಯಾಯಾಂಗ ವಿಚಾರಣೆಯಲ್ಲಿ ಸಾಕ್ಷ್ಯಾಧಾರಗಳ ಮಹತ್ವವನ್ನು ಈ ತೀರ್ಪು ಮತ್ತೊಮ್ಮೆ ಒತ್ತಿ ಹೇಳಿದೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಕೃಷ್ಣವೇಣಿ, ಹರಿಶ್ಚಂದ್ರ ಉದ್ಯಾವರ್, ಪ್ರಕಾಶ್ ಚಂದ್ರ ಶೆಟ್ಟಿ ಹಾಗೂ ಜಯಂತಿ ಕೆ. ಅವರು ವಾದ ಮಂಡಿಸಿದ್ದರು.











