
ಮುಂಬೈ: ಮಹಾರಾಷ್ಟ್ರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಬೆಟ್ಟದ ಅಂಚಿನಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುತ್ತಿದ್ದ ಯುವಕನನ್ನ ರಕ್ಷಿಸಲು ಮುಂದಾದ ತಂದೆ, ಬಳಿಕ ತಾಯಿ ಕೂಡ ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದಾರೆ.
18/19 ವರ್ಷದ ಮಗ ಸೇರಿದಂತೆ ಒಂದೇ ಕುಟುಂಬದ ಮೂವರು ದುರಂತ ಸಾವಿಗೀಡಾಗಿದ್ದಾರೆ. ಮೃತರನ್ನು ನಗರದ ಜಲ್ತಾ ಫಾಟಾ ಪ್ರದೇಶದ ನಿವಾಸಿಗಳಾದ ಮುರಳೀಧರ್ ಚಾಂದ್ಗುಡೆ (48), ಅವರ ಪತ್ನಿ ಸಂಗೀತಾ ಹಾಗೂ ಪುತ್ರ ಕುನಾಲ್ ಎಂದು ಪೊಲೀಸರು ಗುರುತಿಸಿದ್ದಾರೆ.
ಹೊಸ ಮೊಬೈಲ್‌ಗಾಗಿ ಪೋಷಕರೊಂದಿಗೆ ಜಗಳ
ಪೊಲೀಸರು ಹಾಗೂ ಅಧಿಕಾರಿಗಳ ಪ್ರಕಾರ, ಘಟನೆ ಬೆಳಗ್ಗೆ ಸುಮಾರು 10 ಗಂಟೆಗೆ ನಡೆದಿದೆ. ಹೊಸ ಮೊಬೈಲ್ ಕೊಡಿಸುವಂತೆ ಕುನಾಲ್ ತನ್ನ ಪೋಷಕರೊಂದಿಗೆ ಜಗಳ ಮಾಡಿಕೊಂಡಿದ್ದ. ಇದರಿಂದ ಬೇಸರಗೊಂಡು ಬೆಟ್ಟದ ಮೇಲಕ್ಕೆ ತೆರಳಿದ್ದಾನೆ. ಬೆಟ್ಟದ ತುದಿಯಲ್ಲಿ ನಿಂತು ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಮಗನ ಸುರಕ್ಷತೆ ಬಗ್ಗೆ ಆತಂಕಗೊಂಡ ಮುರಳೀಧರ್ ಹಾಗೂ ಸಂಗೀತಾ ಬೆಟ್ಟದ ಮೇಲೆ ತೆರಳಿ ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಸ್ಥಳೀಯ ಗ್ರಾಮಸ್ಥರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿ, ಯುವಕ ಮನವೊಲಿಸಲು ಸತತ ಮೂರು ಗಂಟೆ ಹರಸಾಹಸ ಪಟ್ಟಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಬೆಟ್ಟದ ಕೆಳಭಾಗದಲ್ಲಿ ಸುರಕ್ಷತಾ ಬಲೆಯನ್ನ ಅಳವಡಿಸಲು ಮುಂದಾದರೂ, ಕುನಾಲ್ ಬೆಟ್ಟದ ತುದಿಯಲ್ಲಿ ಜಾಗ ಬದಲಾಯಿಸುತ್ತಲೇ ಇದ್ದ, ಇದರಿಂದ ರಕ್ಷಣಾ ಕಾರ್ಯಕ್ಕೂ ತೊಂದರೆಯಾಗಿತ್ತು.
ಮಗನನ್ನು ರಕ್ಷಿಸಲು ಹೋದ ತಂದೆಯೂ ಬಲಿ
ಮಧ್ಯಾಹ್ನ 1 ಗಂಟೆ ಸುಮಾರಿಗೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತು. ಆರಂಭದಲ್ಲಿ ಕೆಳಗಿನಿಂದಲೇ ಮಗನೊಂದಿಗೆ ಮಾತನಾಡುತ್ತಿದ್ದ ಮುರಳೀಧರ್, ಕೊನೆಯ 15–20 ನಿಮಿಷಗಳಲ್ಲಿ ಬೆಟ್ಟದ ಮೇಲಕ್ಕೆ ತೆರಳಿ ಮಗನನ್ನ ಸಮಾಧಾನಪಡಿಸಲು ಮುಂದಾಗಿದ್ದಾರೆ. ಆದ್ರೆ ಮೊಬೈಲ್‌ಗಾಗಿ ಪಟ್ಟು ಬಿಡದ ಕುನಾಲ್, ಇನ್ನಷ್ಟು ತುದಿಗೆ ತೆರಳುತ್ತಲೇ ಇದ್ದ. ಈ ವೇಳೆ ತಂದೆ ಮುರಳೀಧರ ಮಗನನ್ನ ಹಿಡಿದು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಇಬ್ಬರೂ ನಿಯಂತ್ರಣ ಕಳೆದುಕೊಂಡು ಬೆಟ್ಟದಿಂದ ಕೆಳಗೆ ಬಿದ್ದಿದ್ದಾರೆ. ಪತಿ ಮತ್ತು ಮಗ ಇಬ್ಬರೂ ಬೆಟ್ಟದಿಂದ ಕೆಳಗೆ ಬೀಳುವುದನ್ನು ಕಂಡ ಸಂಗೀತಾ ಆಘಾತಕ್ಕೊಳಗಾಗಿ ಕೆಲವೇ ಕ್ಷಣಗಳಲ್ಲಿ ತಾನೂ ಬೆಟ್ಟದಿಂದ ಜಿಗಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬಳಿಕ ಮೃತದೇಹಗಳನ್ನು ಮುಂದಿನ ಕಾನೂನು ಪ್ರಕ್ರಿಯೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.











