Friday, August 21, 2026
ಜಿಲ್ಲೆಸುದ್ದಿ

ರಾಜಸ್ಥಾನ ಸರ್ಕಾರಿ ಶಾಲೆ ಪರಿಶೀಲನೆಗೆ ತೆರಳಿದ್ದ ಸಿಜೆಪಿ ನಾಯಕರಿಗೆ ಥಳಿತ – ಹೊಡೆದು ಬೆನ್ನಟ್ಟಿ ಓಡಿಸಿದ ಗ್ರಾಮಸ್ಥರು – ಕಹಳೆ ನ್ಯೂಸ್

ಜೈಪುರ: ಸರ್ಕಾರಿ ಶಾಲೆ ಪರಿಶೀಲನೆಗೆ ತೆರಳಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರು ಮತ್ತು ಸದಸ್ಯರ ಮೇಲೆ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿ ಬೆನ್ನಟ್ಟಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಜಾಹೀರಾತು

ಜೈಪುರ ಜಿಲ್ಲೆಯ ಬಗ್ರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮ್‌ಪುರ ಕನ್ವರ್‌ಪುರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ  ಪರಿಶೀಲನೆಗೆ ಇಂದು ಸಿಜೆಪಿ ಸಹ-ಸಂಸ್ಥಾಪಕ ಅಶುತೋಷ್ ರಾಂಕಾ ನೇತೃತ್ವದ ತಂಡ ಆಗಮಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಲು ಮುಂದಾದಾಗ ಈ ದಾಳಿ ನಡೆದಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನರ ಗುಂಪು ಸಿಜೆಪಿ ನಾಯಕರನ್ನು ಸುತ್ತುವರಿದು ನಿಂದಿಸಿದ್ದಾರೆ.

“ಅರ್ಬನ್ ನಕ್ಸಲರು”, “ದೇಶದ್ರೋಹಿಗಳು” ಹಾಗೂ “ಪಾಕಿಸ್ತಾನಿಗಳು” ಎಂದು ಘೋಷಣೆ ಕೂಗಿ ಹಲ್ಲೆ ನಡೆಸಿದ್ದಾರೆ. ಉದ್ರಿಕ್ತ ಗುಂಪಿನಿಂದಾಗಿ ನಾಯಕರು ಶಾಲೆ ಪರಿಶೀಲಿಸದೆ ಅರ್ಧದಲ್ಲೇ ಗ್ರಾಮದಿಂದ ಕಾಲ್ಕಿತ್ತಿದ್ದಾರೆ.

ದಾಳಿಯ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಜೆಪಿ ಮುಖಂಡ ಅಶುತೋಷ್ ರಾಂಕಾ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಲವು ವರ್ಷಗಳಿಂದ ಈ ಶಾಲೆ ದನದ ಕೊಟ್ಟಿಗೆಯಲ್ಲಿ ನಡೆಯುತ್ತಿದೆ. ಕಳೆದ ವರ್ಷವೂ ನಾವು ಇಲ್ಲಿಗೆ ಭೇಟಿ ನೀಡಿದ್ದೆವು. ಗ್ರಾಮಸ್ಥರ ಆಹ್ವಾನದ ಮೇರೆಗೆ ಇಂದಿನ ಭೇಟಿಯ ಬಗ್ಗೆ ಪೊಲೀಸರಿಗೂ ಮುಂಚಿತವಾಗಿ ಮಾಹಿತಿ ನೀಡಿದ್ದೆವು. ಆದರೆ, ಸ್ಥಳದಲ್ಲಿ ಮೊದಲೇ ಜಮಾಯಿಸಿದ್ದ ಬಿಜೆಪಿ ಗೂಂಡಾಗಳು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ನಮ್ಮ ಕಾರುಗಳನ್ನು ಜಖಂಗೊಳಿಸಿ, ಮೊಬೈಲ್‌ಗಳನ್ನು ಒಡೆದು ಹಾಕಿದ್ದಾರೆ. ಮಹಿಳಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿ, ನನ್ನ ಶರ್ಟ್ ಹರಿದು ಹಾಕಿದ್ದಾರೆ. ನಮ್ಮ ತಂಡದ ಒಬ್ಬರ ಕೈ ಮುರಿದಿದೆ ಎಂದು ಆರೋಪಿಸಿದ್ದಾರೆ.

ಇನ್ನೊಂದೆಡೆ, ಸ್ಥಳೀಯ ಗ್ರಾಮಸ್ಥರು ಸಿಜೆಪಿ ತಂಡದ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಾವು ಯಾವುದೇ ಹಲ್ಲೆ ಮಾಡಿಲ್ಲ. ಅವರು 200–250 ಜನರನ್ನು ಕರೆದುಕೊಂಡು ಬಂದಿದ್ದರು. ಅವರೇ ತಮ್ಮ ಕಾರನ್ನು ಒಡೆದು ಹಾಕಿದ್ದಾರೆ. ಶಾಲೆ ದುರಸ್ತಿಗೆಂದು ಬಂದಿರುವುದಾಗಿ ಹೇಳುತ್ತಿದ್ದಾರೆ. ಆದರೆ ನಮ್ಮ ಶಾಸಕರೇ ಈ ಶಾಲೆಯ ಅಭಿವೃದ್ಧಿಗೆ 12 ಲಕ್ಷ ರೂ. ಹಣವನ್ನು ಈಗಾಗಲೇ ಮಂಜೂರು ಮಾಡಿದ್ದಾರೆ. ಬಿಜೆಪಿ ಅಥವಾ ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷದವರು ಇಲ್ಲಿಗೆ ಬರುವುದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.

ಸಿಜೆಪಿ ನಾಯಕರು ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಿದ್ದರೆ ಜಾರ್ಖಂಡ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಹೋಗಿಲ್ಲ ಯಾಕೆ? ಇವರು ದೇಶದ್ರೋಹಿಗಳು. ನಮ್ಮ ಹಳ್ಳಿಗೆ ಇವರು ಬರುವುದು ನಮಗೆ ಇಷ್ಟವಿಲ್ಲ. ಶಾಲೆಯ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಟ್ಟು ಹೊರಹಾಕಿದ್ದಾರೆ.

ಗ್ರಾಮಸ್ಥೆ ಅನು ಶರ್ಮಾ ಪ್ರತಿಕ್ರಿತಿಸಿ, ಈ ಶಾಲೆಯನ್ನು ಕೆಡವಲು ಪ್ರಯತ್ನಿಸುತ್ತಿರುವುದರಿಂದ ನಾವು ವಿರೋಧಿಸಿದೆವು. ಇಲ್ಲಿ 20–25 ಮಕ್ಕಳು ಓದುತ್ತಿದ್ದಾರೆ. ದುರಸ್ತಿಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಅಲ್ಲಿ ಕೇವಲ ಮಾತಿನ ಚಕಮಕಿ ನಡೆದಿದೆಯೇ ಹೊರತು ಹಲ್ಲೆಯಾಗಿಲ್ಲ ಎಂದಿದ್ದಾರೆ.

ಈ ಘಟನೆಯು ರಾಜಸ್ಥಾನ ವಿಧಾನಸಭೆಯಲ್ಲೂ ಭಾರಿ ಕೋಲಾಹಲ ಸೃಷ್ಟಿಸಿದ್ದು, ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ಈ ದಾಳಿಗೆ ಬಿಜೆಪಿಯೇ ನೇರ ಹೊಣೆ ಎಂದು ಆರೋಪಿಸಿದ್ದರೆ, ರಾಜಸ್ಥಾನದ ಗೃಹ ಸಚಿವ ಜವಾಹರ್ ಸಿಂಗ್ ಬೇದಮ್ ಪ್ರತಿಕ್ರಿಯಿಸಿ ಕಾಂಗ್ರೆಸ್ ಪಕ್ಷವೇ ಸಿಜೆಪಿ ಸೋಗಿನಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.