
ಗ್ಲಾಸ್ಗೋ: 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪ್ಯಾರಾ ಅಥ್ಲೀಟ್ ಶರ್ಮಿಳಾ ಧಂಕರ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ ಶಾಟ್‌ಪುಟ್ F57 ವಿಭಾಗದಲ್ಲಿ ಚಿನ್ನದ ಪದಕ ಗೆದ್ದು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪರ ಚಿನ್ನ ಗೆದ್ದ ಮೊದಲ ಪ್ಯಾರಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಂಗಳವಾರ ನಡೆದ ಫೈನಲ್‌ನಲ್ಲಿ 40 ವರ್ಷದ ಶರ್ಮಿಳಾ 9.81 ಮೀಟರ್ ದೂರ ಗುಂಡು ಎಸೆದು ಅಗ್ರಸ್ಥಾನ ಪಡೆದರು. ಘಾನಾದ ಜಿನಾಬು ಇಸ್ಸಾ 8.65 ಮೀಟರ್‌ನೊಂದಿಗೆ ಬೆಳ್ಳಿ ಪದಕ ಪಡೆದರೆ, ನೈಜೀರಿಯಾದ ಯುಚಾರಿಯಾ ಇಯಾಜಿ ಹಾಗೂ ಭಾರತದ ಶಿಲ್ಪಾ ತಲಾ 8.19 ಮೀಟರ್ ಸಾಧನೆಯೊಂದಿಗೆ ಜಂಟಿಯಾಗಿ ಕಂಚಿನ ಪದಕ ಗೆದ್ದರು. ಈ ಜಯದೊಂದಿಗೆ ಭಾರತದ ಪದಕಗಳ ಸಂಖ್ಯೆ 2 ಚಿನ್ನ, 5 ಬೆಳ್ಳಿ ಹಾಗೂ 3 ಕಂಚು ಸೇರಿ ಒಟ್ಟು 10ಕ್ಕೆ ಏರಿಕೆಯಾಗಿದೆ.
ಶರ್ಮಿಳಾ ಧಂಕರ್ ಅವರ ಸಾಧನೆಯ ಹಿಂದೆ ಕಠಿಣ ಹೋರಾಟದ ಬದುಕಿದೆ. ಹರಿಯಾಣದ ಚಿತ್ರೌಲಿ ಗ್ರಾಮದಲ್ಲಿ ಜನಿಸಿದ ಅವರು, ಎರಡು ವರ್ಷದ ವಯಸ್ಸಿನಲ್ಲೇ ಪೋಲಿಯೊಗೆ ತುತ್ತಾಗಿ ಒಂದು ಕಾಲಿನ ಶಾಶ್ವತ ಸಮಸ್ಯೆಯನ್ನು ಎದುರಿಸಿದರು. ಬಳಿಕ ವೈಯಕ್ತಿಕ ಜೀವನದಲ್ಲಿಯೂ ಹಲವು ಸಂಕಷ್ಟಗಳನ್ನು ಎದುರಿಸಿದರೂ ಧೈರ್ಯ ಕಳೆದುಕೊಳ್ಳಲಿಲ್ಲ.
ಮೊದಲ ವೈವಾಹಿಕ ಜೀವನದಲ್ಲಿ ದೈಹಿಕ ಹಾಗೂ ಮಾನಸಿಕ ಕಿರುಕುಳ ಅನುಭವಿಸಿದ ಅವರು, ಇಬ್ಬರು ಪುತ್ರಿಯರೊಂದಿಗೆ ಪತಿಯ ಮನೆಯನ್ನು ತೊರೆದು ಹೊಸ ಬದುಕು ಆರಂಭಿಸಿದರು. ನಂತರ ಅಜಿತ್ ಸಿಂಗ್ ಅವರೊಂದಿಗೆ ಎರಡನೇ ವಿವಾಹವಾದ ಬಳಿಕ ಜೀವನ ಹೊಸ ತಿರುವು ಪಡೆದುಕೊಂಡಿತು.
ಅಜಿತ್ ಸಿಂಗ್ ಅವರ ಪ್ರೋತ್ಸಾಹದಿಂದ ಶರ್ಮಿಳಾ ಪ್ಯಾರಾ ಅಥ್ಲೆಟಿಕ್ಸ್‌ಗೆ ಕಾಲಿಟ್ಟರು. ಅವರ ಪ್ರತಿಭೆಯನ್ನು ಗುರುತಿಸಿದ ಪತಿ, ತರಬೇತಿ ಮತ್ತು ಸ್ಪರ್ಧೆಗಳಿಗಾಗಿ ನಿರಂತರ ಬೆಂಬಲ ನೀಡಿದರು. 2023ರಲ್ಲಿ ಅವರ ಕ್ರೀಡಾ ಕನಸನ್ನು ನನಸಾಗಿಸಲು ಮನೆಯನ್ನೇ ಮಾರಾಟ ಮಾಡಿ ಆರ್ಥಿಕ ನೆರವು ಒದಗಿಸಿದ್ದರೆಂಬುದು ಗಮನಾರ್ಹ. ಅನೇಕ ಸಂಕಷ್ಟಗಳನ್ನು ಮೆಟ್ಟಿ ನಿಂತ ಶರ್ಮಿಳಾ ಧಂಕರ್, ಇದೀಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಭಾರತದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ.











