
ಬೆಳ್ತಂಗಡಿ ಸೆಪ್ಟೆಂಬರ್ 12: ತೆಂಕಕಾರಂದೂರು ಗ್ರಾಮದ ಕಡಿಂಗ ಎಂಬಲ್ಲಿ ಮನೆಯೊಂದರ ತೋಟದಲ್ಲಿ ಹೆಬ್ಬಾವನ್ನು ನುಂಗಿದ ಸ್ಥಿತಿಯಲ್ಲಿದ್ದ 12 ಅಡಿಗೂ ಅಧಿಕ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಉರಗರಕ್ಷಕ ಲಾಯಿಲ ಗ್ರಾಮದ ಸ್ನೇಕ್ ಅಶೋಕ್ ಸುರಕ್ಷಿತವಾಗಿ ರಕ್ಷಿಸಿ, ಅರಣ್ಯ ಇಲಾಖೆಯ ಸಹಕಾರದೊಂದಿಗೆ ರಕ್ಷಿತಾರಣ್ಯಕ್ಕೆ ಬಿಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಕಡಿಂಗ ನಿವಾಸಿ ಹಿತೇಶ್ ಎಂಬವರ ಮನೆಯ ತೋಟದಲ್ಲಿ ಶುಕ್ರವಾರ ಸಂಜೆ 4 ಗಂಟೆಯ ಸುಮಾರಿಗೆ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಪ್ರತ್ಯಕ್ಷವಾಗಿತ್ತು. ಮನೆಯವರು ಹತ್ತಿರ ಹೋಗಿ ಗಮನಿಸಿದಾಗ, ಆ ಕಾಳಿಂಗ ಸರ್ಪವು ಹೆಬ್ಬಾವನ್ನು ನುಂಗಿರುವುದು ಕಂಡುಬಂದಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ತಕ್ಷಣವೇ ಲಾಯಿಲ ಗ್ರಾಮದ ಪ್ರಸಿದ್ಧ ಉರಗಮಿತ್ರ ಸ್ನೇಕ್ ಅಶೋಕ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ ವೇಳೆ ಹೆಬ್ಬಾವು ವಾಂತಿ:ಮಾಹಿತಿ ಲಭಿಸುತ್ತಿದ್ದಂತೆಯೇ ಸ್ನೇಕ್ ಅಶೋಕ್ ಅವರು ತಮ್ಮ ಸ್ನೇಹಿತ ಪ್ರತೀಕ್ ಅವರೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದ ಅವರು, ಕಾಳಿಂಗ ಸರ್ಪದ ಚಲನವಲನಗಳನ್ನು ಗಮನಿಸಿ ಮನೆಯವರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಅಪಾಯವಾಗದಂತೆ ಜಾಗರೂಕತೆಯಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದಾಗ, ತೀವ್ರ ಭೀತಿ ಹಾಗೂ ಒತ್ತಡಕ್ಕೆ ಒಳಗಾದ ಕಾಳಿಂಗ ಸರ್ಪವು ತಾನು ನುಂಗಿದ್ದ ಇಡೀ ಹೆಬ್ಬಾವನ್ನು ಹೊರಗೆ ವಾಂತಿ ಮಾಡಿದೆ.
ಬಳಿಕ ಯಾವುದೇ ಅಪಾಯ ಸಂಭವಿಸದಂತೆ 12 ಅಡಿಗೂ ಅಧಿಕ ಉದ್ದದ ಕಾಳಿಂಗ ಸರ್ಪವನ್ನು ಅತ್ಯಂತ ಸುರಕ್ಷಿತವಾಗಿ ಹಿಡಿದು ಬುಟ್ಟಿಗೆ ತುಂಬಲಾಯಿತು. ತರುವಾಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಹಕಾರದೊಂದಿಗೆ ಆ ಕಾಳಿಂಗ ಸರ್ಪವನ್ನು ಸೂಕ್ತ ರಕ್ಷಿತಾರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಯಿತು.”ಸಂಜೆ 4 ಗಂಟೆಗೆ ಕರೆ ಬಂದ ತಕ್ಷಣ ಸ್ಥಳಕ್ಕೆ ತೆರಳಿದಾಗ 12 ಅಡಿ ಉದ್ದದ ಕಾಳಿಂಗ ಸರ್ಪ ಹೆಬ್ಬಾವನ್ನು ನುಂಗಿರುವುದು ಕಂಡುಬಂತು. ಕಾರ್ಯಾಚರಣೆಯ ವೇಳೆ ಅದು ನುಂಗಿದ್ದ ಹೆಬ್ಬಾವನ್ನು ವಾಂತಿ ಮಾಡಿದ್ದು, ಬಳಿಕ ಅದನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಡಲಾಗಿದೆ” ಎಂದು ಸ್ನೇಕ್ ಅಶೋಕ್ ತಿಳಿಸಿದ್ದಾರೆ.











