ಜರ್ಮನಿ ಗಣಪನಿಗೆ ಪುತ್ತೂರಿನಲ್ಲೇ ತಯಾರಾಯ್ತು ರಜತ ಕಿರೀಟ..!! : ಶತಮಾನದ ಹೊಸ್ತಿಲಲ್ಲಿರುವ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ತಯಾರಿಸಿದೆ ಬೆಳ್ಳಿಯ ಕಿರೀಟ..!- ಕಹಳೆ ನ್ಯೂಸ್

ಪುತ್ತೂರು: ಜರ್ಮನಿಯ ಬರ್ಲಿನ್ ನಲ್ಲಿರುವ ಶ್ರೀ ಗಣೇಶ ಹಿಂದೂ ಟೆಂಪಲ್ ನ ಗಣೇಶನ ಮೂರ್ತಿಗೆ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ನಲ್ಲಿ ರಜತ ಕಿರೀಟ ತಯಾರಿಸಲಾಗಿದೆ. ಶ್ಯಾಮಲಾ ನಾಯಕ್ ಪುಣಚ ಹಾಗೂ ಕುಟುಂಬದವರ ಸೇವಾರ್ಥವಾಗಿ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ನ ಕರಕುಶಲ ಕರ್ಮಿಗಳು ಬೆಳ್ಳಿಯ ಕಿರೀಟವನ್ನು ವಿಶೇಷ ವಿನ್ಯಾಸದೊಂದಿಗೆ ತಯಾರಿಸಿದ್ದಾರೆ.
ಸಿದ್ಧ ವಿನ್ಯಾಸವನ್ನು ಕೈಬಿಟ್ಟು, ಭಕ್ತರ ಭಕ್ತಿ – ಆರಾಧನೆಗೆ ಅನುಗುಣವಾಗಿ ಕಿರೀಟಕ್ಕೆ ರೂಪು ನೀಡಲಾಗಿದೆ. ಆರು ತಿಂಗಳ ಪರಿಶ್ರಮದ ಫಲವೇ ಈ ರಜತ ಕಿರೀಟ. ಬೆಳ್ಳಿಯ ಕರಕುಶಲತೆ, ಸೂಕ್ಷ್ಮ ಅಲಂಕಾರಿಕ ವಿವರಗಳು ಹಾಗೂ ಅಂತಿಮ ರೂಪದವರೆಗೆ ಪ್ರತಿಯೊಂದು ಹಂತದಲ್ಲೂ ತಾಳ್ಮೆ, ನಿಖರತೆ ಮತ್ತು ಅನುಭವ ಮೇಳೈಸಿದೆ. ಹೀಗಾಗಿ ಇದು ಕೇವಲ ಒಂದು ಬೆಳ್ಳಿ ಕಿರೀಟವಲ್ಲ. ಪುತ್ತೂರಿನ ಕರಕುಶಲ ಪರಂಪರೆ, ಭಕ್ತಿಭಾವ, ವೈಯಕ್ತಿಕ ಕಲ್ಪನೆ ಮತ್ತು ಮೂರು ತಲೆಮಾರುಗಳಿಂದ ಬೆಳೆದು ಬಂದ ಗ್ರಾಹಕರ ವಿಶ್ವಾಸ—ಇವೆಲ್ಲವೂ ಒಂದೇ ಕಲಾಕೃತಿಯಲ್ಲಿ ಒಂದಾಗಿರುವ ಪ್ರತೀಕ.
ಡಿ. ಶಿವ ಭಟ್ ಜ್ಯುವೆಲ್ಲರ್ಸ್:
2027ರಲ್ಲಿ ಶತಮಾನೋತ್ಸವ ಆಚರಿಸಲಿರುವ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ಪುತ್ತೂರಿನ ಚಿನ್ನ ಮತ್ತು ಬೆಳ್ಳಿ ಆಭರಣಗಳ ವ್ಯಾಪಾರ ಹಾಗೂ ಕರಕುಶಲ ಪರಂಪರೆಯೊಂದಿಗೆ ಬೆಳೆದುಬಂದಿದೆ. ಡಿ. ಶಿವ ಭಟ್ ಅವರ ನಂತರ ಸಂಸ್ಥೆಯ ಜವಾಬ್ದಾರಿಯನ್ನು ಅವರ ಪುತ್ರ ಗೋವಿಂದ ಭಟ್ ಕೈಗೆತ್ತಿಕೊಂಡರು. ಮೂಲ ಮೌಲ್ಯ – ಗ್ರಾಹಕರ ವಿಶ್ವಾಸ ನಿರಂತರವಾಗಿ ಮುಂದುವರಿಯಿತು. ಇಂದು ಮೂರನೇ ತಲೆಮಾರಿನ ಈಶ್ವರ ಮುರಳಿ ಅವರ ನೇತೃತ್ವದಲ್ಲಿ ಸಂಸ್ಥೆ ಹೊಸ ಕಾಲದ ಅಗತ್ಯಗಳು ಮತ್ತು ಗ್ರಾಹಕರ ಬದಲಾಗುತ್ತಿರುವ ನಿರೀಕ್ಷೆಗಳಿಗೆ ಹೊಂದಿಕೊಳ್ಳುತ್ತಾ ಪರಂಪರೆಯನ್ನು ಜೀವಂತಿಕೆಯಾಗಿರಿಸಿದೆ.
ಭಕ್ತಿಯ ಫಲ ರಜತ ಕಿರೀಟ:
ಜರ್ಮನಿಯ ಬರ್ಲಿನ್ನ ಶ್ರೀ ಗಣೇಶ ಹಿಂದೂ ಟೆಂಪಲ್ಗಾಗಿ ಶ್ಯಾಮಲಾ ನಾಯಕ್ ಪುಣಚ ಮತ್ತು ಕುಟುಂಬ ನೀಡಿದ ಗಣಪತಿ ಕಿರೀಟದ ಆರ್ಡರ್ ವೈಯಕ್ತಿಕ ಕಲ್ಪನೆ ಮತ್ತು ಭಕ್ತಿಯ ಫಲ. ಗಣಪತಿ ಆರಾಧನೆಯೊಂದಿಗೆ ಬೆಸೆದುಕೊಂಡಿರುವ ಭಕ್ತಿಭಾವವನ್ನು ಗಮನದಲ್ಲಿಟ್ಟುಕೊಂಡು ಕಿರೀಟದ ವಿನ್ಯಾಸ, ಅಲಂಕಾರಿಕ ವಿವರಗಳು ಮತ್ತು ಬೆಳ್ಳಿಯ ಕರಕುಶಲತೆಯನ್ನು ಸಮನ್ವಯಗೊಳಿಸಲಾಗಿದೆ. ಕಣ್ಣಿಗೆ ಕಾಣುವ ಅಂತಿಮ ಕಲಾಕೃತಿಯ ಹಿಂದೆ ಹಲವು ಹಂತಗಳ ಪರಿಶ್ರಮ, ತಾಳ್ಮೆ ಮತ್ತು ನಿಖರತೆ ಅಡಗಿದೆ. ಇಂದು ಆಭರಣಗಳ ವಿನ್ಯಾಸ ಬದಲಾಗಿದೆ. ಗ್ರಾಹಕರ ಅಭಿರುಚಿಗಳು ಬದಲಾಗಿವೆ. ತಂತ್ರಜ್ಞಾನ ಬದಲಾಗಿದೆ. ಆದರೆ ಗ್ರಾಹಕರ ಮಾತನ್ನು ಆಲಿಸಿ, ಅವರ ಭಾವನೆ ಮತ್ತು ಅಗತ್ಯಕ್ಕೆ ತಕ್ಕಂತೆ ಆಭರಣವನ್ನು ರೂಪಿಸುವ ಮೂಲ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಈಶ್ವರ ಮುರಳಿ, ಮಾಲಕರು, ಡಿ. ಶಿವ ಭಟ್ ಜ್ಯುವೆಲ್ಲರ್ಸ್, ಪುತ್ತೂರು











