
ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ ಹಿನ್ನೆಲೆ ಇಂದು ಮತ್ತು ನಾಳೆ (ಜು.20) ಹಾಸನ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಸೋಮವಾರ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಜಮೀನಿನಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ ನಡೆಯಲಿದೆ. ಈ ಹಿನ್ನೆಲೆ ಇಂದು ಹಾಗೂ ಸೋಮವಾರ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.
ಇನ್ನು ಚೆನ್ನಮ್ಮ ವಿಧಿವಶರಾದ ಹಿನ್ನೆಲೆ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಶಾಸಕ ಸಿ.ಎನ್.ಬಾಲಕೃಷ್ಣ ಸ್ಥಳದಲ್ಲಿ ಮೊಕ್ಕಾಂ ಹೂಡಿ ಸಿದ್ಧತಾ ಕಾರ್ಯ ಪರಿಶೀಲಿಸುತ್ತಿದ್ದಾರೆ. ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 11 ಗಂಟೆಯವರೆಗೆ ಹೊಳೆನರಸೀಪುರದ ಹೆಚ್.ಡಿ.ರೇವಣ್ಣ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಪೂಜಾ ಕಾರ್ಯಗಳು ನಡೆಯಲಿವೆ. ಬಳಿಕ ಹರದನಹಳ್ಳಿ ಗ್ರಾಮದ ಸಮೀಪದ ಕ್ಯಾತನಹಳ್ಳಿ ಬಳಿಗೆ ಪಾರ್ಥಿವ ಶರೀರ ತರಲಾಗುತ್ತದೆ. ಕೆಲಕಾಲ ಅಂತಿಮ ದರ್ಶನಕ್ಕೆ ಇರಿಸಿ ಮಧ್ಯಾಹ್ನ 2 ಗಂಟೆ ನಂತರ ಅಂತ್ಯಕ್ರಿಯೆ ನಡೆಯಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದ್ದಾರೆ.











