ಯಕ್ಷ ಶಿಕ್ಷಣ ಟ್ರಸ್ಟ್ ( ರಿ.) ಉಡುಪಿ ಇದರ ಕಾಪು ವಿಧಾನಸಭೆ ವ್ಯಾಪ್ತಿಯ ಸಂಸ್ಥೆಯಾದ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಸಂಸ್ಥೆಯಲ್ಲಿ ಶೈಕ್ಷಣಿಕ ವರ್ಷದ ಯಕ್ಷ ಶಿಕ್ಷಣ ತರಗತಿಗಳ ಉದ್ಘಾಟನೆ -ಕಹಳೆ ನ್ಯೂಸ್

ಯಕ್ಷ ಶಿಕ್ಷಣ ಟ್ರಸ್ಟ್ ( ರಿ.) ಉಡುಪಿ ಇದರ ಕಾಪು ವಿಧಾನಸಭೆ ವ್ಯಾಪ್ತಿಯ ಸಂಸ್ಥೆಯಾದ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಸಂಸ್ಥೆಯಲ್ಲಿ ಶೈಕ್ಷಣಿಕ ವರ್ಷದ ಯಕ್ಷ ಶಿಕ್ಷಣ ತರಗತಿಗಳ ಉದ್ಘಾಟನೆಯನ್ನು ಮಾನ್ಯ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿಯವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು .ಯಕ್ಷ ಶಿಕ್ಷಣ ಟ್ರಸ್ಟ್ (ರಿ.), ಉಡುಪಿ ಇದು ಯಕ್ಷಗಾನ ಕಲೆಯ ಉಳಿವು, ಬೆಳವಣಿಗೆ ಮತ್ತು ಮುಂದಿನ ಪೀಳಿಗೆಗೆ ಈ ಕಲೆಯನ್ನು ದಾಟಿಸುವ ನಿಟ್ಟಿನಲ್ಲಿ ಅತ್ಯಂತ ಶ್ಲಾಘನೀಯ ಕೆಲಸ ಮಾಡುತ್ತಿರುವ ಒಂದು ಪ್ರಮುಖ ಸಂಸ್ಥೆ. ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಯಕ್ಷಗಾನವನ್ನು ಒಂದು ಪಠ್ಯಪೂರಕ ಚಟುವಟಿಕೆಯಾಗಿ ಪರಿಚಯಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಹೆಗ್ಗಳಿಕೆ ಈ ಟ್ರಸ್ಟ್‌ಗೆ ಸಲ್ಲುತ್ತದೆ
ಟ್ರಸ್ಟ್‌ನ ಅತ್ಯಂತ ದೊಡ್ಡ ಸಾಧನೆಯೆಂದರೆ ಉಡುಪಿ ಜಿಲ್ಲೆಯ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಯಕ್ಷಗಾನ ತರಬೇತಿ ತರಗತಿಗಳನ್ನು ಆರಂಭಿಸಿದ್ದು.
ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ: ಶಾಲಾ ಮಕ್ಕಳಿಗೆ ಯಾವುದೇ ಶುಲ್ಕವಿಲ್ಲದೆ ತಜ್ಞ ಗುರುಗಳ ಮೂಲಕ ಯಕ್ಷಗಾನದ ನಾಟ್ಯ, ಭಾಗವತಿಕೆ ಮತ್ತು ಮದ್ದಳೆ ವಾದನವನ್ನು ಕಲಿಸಲಾಗುತ್ತಿದೆ.
ಸಾವಿರಾರು ಬಾಲ ಕಲಾವಿದರ ಸೃಷ್ಟಿ: ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಈ ಯೋಜನೆಯಡಿ ಯಕ್ಷಗಾನ ಕಲಿತು ವೇದಿಕೆ ಏರುತ್ತಿದ್ದಾರೆ. ಇದು ಕಲೆಯ ಪ್ರೇಕ್ಷಕರನ್ನು ಮತ್ತು ಮುಂದಿನ ತಲೆಮಾರಿನ ಕಲಾವಿದರನ್ನು ಸೃಷ್ಟಿಸಲು ನೆರವಾಗಿದೆ.
ಮಕ್ಕಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಟ್ರಸ್ಟ್ ಪ್ರತಿ ವರ್ಷ ಬೃಹತ್ ಮಟ್ಟದ ‘ಯಕ್ಷೋತ್ಸವ’ ಎಂಬ ಶಾಲಾ ಮಕ್ಕಳ ಯಕ್ಷಗಾನ ಸ್ಪರ್ಧೆ ಹಾಗೂ ಪ್ರದರ್ಶನಗಳನ್ನು ಆಯೋಜಿಸುತ್ತದೆ
ಯಕ್ಷಗಾನ ಕ್ಷೇತ್ರದಲ್ಲಿದ್ದ ಹಿರಿಯ ಹಾಗೂ ನುರಿತ ಕಲಾವಿದರನ್ನು ‘ಯಕ್ಷಗಾನ ಗುರುಗಳು’ ಎಂದು ಗುರುತಿಸಿ, ಅವರಿಗೆ ಮಾಸಿಕ ಗೌರವಧನ ನೀಡಿ ಶಾಲೆಗಳಿಗೆ ನಿಯೋಜಿಸುವ ಮೂಲಕ ಟ್ರಸ್ಟ್ ಕಲಾವಿದರಿಗೆ ಆರ್ಥಿಕ ಆಸರೆಯಾಗಿದೆ. ಇದರಿಂದಾಗಿ ಯಕ್ಷಗಾನ ಬೋಧನೆ ಒಂದು ಗೌರವಾನ್ವಿತ ವೃತ್ತಿಯಾಗಿ ಬೆಳೆಯಲು ಸಾಧ್ಯವಾಗಿದೆ.
ಯಕ್ಷಗಾನದ ಮೂಲಕ ವಿದ್ಯಾರ್ಥಿಗಳಲ್ಲಿ ಕೇವಲ ಕಲೆಯನ್ನಷ್ಟೇ ಅಲ್ಲದೆ, ಕನ್ನಡ ಭಾಷಾ ಶುದ್ಧತೆ, ಪುರಾಣ ಕಥೆಗಳ ಜ್ಞಾನ, ರಂಗಶಿಸ್ತು, ಏಕಾಗ್ರತೆ ಮತ್ತು ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಬಿತ್ತಲು ಟ್ರಸ್ಟ್ ಯಶಸ್ವಿಯಾಗಿದೆ ಸಾವಿರಾರು ಹೆಣ್ಣುಮಕ್ಕಳು ಯಕ್ಷಗಾನವನ್ನು ಕಲಿತು ಪ್ರಮುಖ ವೇಷಗಳನ್ನು (ಪುರುಷ ವೇಷಗಳನ್ನೂ ಒಳಗೊಂಡಂತೆ) ಯಶಸ್ವಿಯಾಗಿ ನಿರ್ವಹಿಸುವಂತಾಗಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ: ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ, ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಕೇವಲ ವೃತ್ತಿಪರ ಮೇಳಗಳಿಗೆ ಸೀಮಿತಗೊಳಿಸದೆ, ಅದಕ್ಕೊಂದು ಶಾಸ್ತ್ರೀಯ ಮತ್ತು ಶೈಕ್ಷಣಿಕ ಚೌಕಟ್ಟು ನೀಡಿ ಮನೆಮನೆಗೆ ತಲುಪಿಸುವಲ್ಲಿ ಕ್ರಾಂತಿಕಾರಿ ಸಾಧನೆ ಮಾಡಿದೆ. ಯಕ್ಷಗಾನ ಕಲೆಯು ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆಗಳನ್ನು ಮೂಡಿಸುವುದರೊಂದಿಗೆ ನಮ್ಮ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುವುದು ಎಂದು ತಿಳಿಸಿದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಶ್ರೀ ಮುರಳಿ ಕಡೆಕಾರ್ ಯಕ್ಷಗಾನ ಕಲಿಕೆಯು ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುವುದೆಂದು ತಿಳಿಸಿ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಸಹಭಾಗಿತ್ವದೊಂದಿಗೆ ಯಶಸ್ವಿಯಾಗಿ ಮುಂದುವರಿಯಲೆಂದು ಆಶಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಯಕ್ಷಗಾನ ಟ್ರಸ್ಟಿನ ವಿಶ್ವಸ್ಥರಾಗಿರುವ ಶ್ರೀ ವಿ .ಜಿ . ಶೆಟ್ಟಿ ಅವರು ಕಾಪು ವಿಧಾನಸಭಾ ಕ್ಷೇತ್ರದ 18 ಸಂಸ್ಥೆಗಳಲ್ಲಿ ಯಕ್ಷ ಶಿಕ್ಷಣ ಟ್ರಸ್ಟಿನ ಮೂಲಕ ಜರುಗುತ್ತಿರುವ ಕಾರ್ಯಕ್ರಮದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ ಸತ್ಯೇಂದ್ರ ಪೈ ಯವದು ಯಕ್ಷಗಾನ ಕಲಾರಂಗ ಸಂಸ್ಥೆಯ ಮೂಲಕ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಮಕ್ಕಳಲ್ಲಿ ನಾಯಕತ್ಟ ಗುಣ ಮೈಗೂಡಿಸಿಕೊಳ್ಳಲು ಯಕ್ಷಗಾನ ಸಹಾಯಕ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಬಿ ಚಂದ್ರಕಾಂತ್ ಪೈ , ವೆಂಕಟರಮಣ ಭಟ್, ನಿತ್ಯಾನಂದ ಶೆಣೈ, ಆಡಳಿತಾಧಿಕಾರಿ ಸುಧಾಕರ್ ಬ್ರಹ್ಮಾವರ್, ಶೈಕ್ಷಣಿಕ ಸಲಹೆಗಾರದ ದೇವೇಂದ್ರ ನಾಯಕ್ ಉಪಸ್ಥಿತರಿದ್ದರು ಶಾಲಾ ಮುಖ್ಯ ಶಿಕ್ಷಕಿ ಸುಜಾ ಡಿಸೋಜ ಸ್ವಾಗತಿಸಿದರು. ಚೈತ್ರಾ ಹೆಗ್ಡೆ ವಂದಿಸಿದರು. ಸರ್ವೋತ್ತಮ ಆಚಾರ್ಯ ಮತ್ತು ಶಾರ್ಲೆಟ್ ಕಾರ್ಯಕ್ರಮ ನಿರೂಪಿಸಿದರು.











